ಮಂಗಳೂರು : ಉರ್ವಸ್ಟೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 1932ರಲ್ಲಿ ದಿ. ಹೂವಪ್ಪ ಮಡಿವಾಳರಿಂದ ಆರಂಭಗೊಂಡ ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿಯನ್ನು ದಶಕಗಳ ಕಾಲ ಮುನ್ನಡೆಸಿ ಕಲಾಸೇವೆ ಸಲ್ಲಿಸಿದ ಭಾಗವತ ಕೃಷ್ಣಪ್ಪ ಕರ್ಕೇರ ಇವರ ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 03-07-2024ರ ಬುಧವಾರದಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಇದರ ಅಧ್ಯಕ್ಷರಾದ ಸುರೇಂದ್ರ ರಾವ್ ಮಾತನಾಡಿ “ಅಪ್ರತಿಮ ಯಕ್ಷಗಾನ ಭಾಗವತ ದಿವಂಗತ ಡಿ. ಕೃಷ್ಣಪ್ಪ ಕರ್ಕೇರ ಅವರು ಯಕ್ಷಗಾನ ಕಲಾ ಸೇವೆಗೈದು, ಯಕ್ಷಲೋಕದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಕಲಾಸೇವೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಅವರು ಮುನ್ನಡೆಸಿದ ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿಯ ಯಕ್ಷಗಾನ ತಾಳಮದ್ದಲೆ ವಾರದ ಕೂಟಗಳಿಗೆ ಸಂಪೂರ್ಣ ಬೆಂಬಲ ನೀಡಬೇಕು.” ಎಂದು ಹೇಳಿದರು.


ಶ್ರೀಶಾರದಾಂಬಾ ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷ ಉದ್ಯಮಿ ಕೆ. ಎಲ್. ಜಯಪ್ರಕಾಶ್ ರಾವ್, ಮಹಾಪೋಷಕ ಸಿ. ಎಸ್. ಭಂಡಾರಿ, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೆನರಾ ಕಾಲೇಜಿನ ನಿವೃತ್ತ ಉಪನ್ಯಾಸಕ ಜೆ. ಕೆ. ಭಟ್ ಸೆರಾಜೆ, ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಅರ್ಥಧಾರಿ ಹಾಗೂ ಹರಿದಾಸರಾದ ಮಹಾಬಲ ಶೆಟ್ಟಿ, ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಅಧ್ಯಕ್ಷ ಶ್ರೀನಾಥ ಪ್ರಭು ಕದ್ರಿ ಉಪಸ್ಥಿತರಿದ್ದರು.


ಶಿವಪ್ರಸಾದ್ ಪ್ರಭು, ಸಂಜಯ್ ಕುಮಾರ್ ರಾವ್ ನಿರೂಪಿಸಿ, ಶೋಭಾ ಐತಾಳ್ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ವಾಲಿಮೋಕ್ಷ’ ಯಕ್ಷಗಾನ ತಾಳಮದ್ದಲೆ ನಡೆಯಿತು.
1 Comment
ರುವಾರಿ.ಕಾಂ ಪ್ರಪ್ರಥಮವಾಗಿ ನಿಮಗೆ ವಂದಿಸುತ್ತಿದ್ದೇನೆ. ನಿಮ್ಮ ನಿಸ್ವಾರ್ಥ ಸೇವೆ, ಕಲಾವಿದರನ್ನು ಸಮಾಜಕ್ಕೆ ಗುರುತಿಸುವ ಪ್ರಕ್ರಿಯೆ ಇದೇ ರೀತಿ ಮುಂದುವರೆಯಲಿ . ದೇವರು ನಿಮಗೆ ನಿಮ್ಮ ಎಲ್ಲಾ ಇಚ್ಚೆಯನ್ನು ನೆರವೇರಿಸಲಿ…