ಹಿರಿಯಡಕ : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಆಯೋಜಿಸುತ್ತಿರುವ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಪ್ರಯುಕ್ತ ಕಾಪು ವಿಧಾನ ಸಭಾ ವ್ಯಾಪ್ತಿಯ ಮೂರು ಶಾಲೆಗಳ ಪ್ರದರ್ಶನದ ಸಮಾರೋಪ ಸಮಾರಂಭವು ದಿನಾಂಕ 19 ಡಿಸೆಂಬರ್ 2024ರಂದು ಹಿರಿಯಡಕದ ಶ್ರೀ ವೀರಭದ್ರ ದೇವಳದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಬಾಗಲಕೋಟೆಯ ಹರೀಶ್ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದ ವಿದ್ಯಾರ್ಥಿ ಶ್ರೀವತ್ಸ ತಮ್ಮ ಅನುಭವ ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರಮಾಣಪತ್ರ, ಗುಂಪು ಛಾಯಾಚಿತ್ರ ವಿತರಿಸಲಾಯಿತು. ಅಭ್ಯಾಗತರಾಗಿ ಭಾಗವಹಿಸಿದ್ದ ದೇವಳದ ಅರ್ಚಕ ರಂಗನಾಥ ಭಟ್, ಪ್ರಾಂಶುಪಾಲ ಮಂಜುನಾಥ ಭಟ್, ನಿವೃತ್ತ ಅಧ್ಯಾಪಕ ಅನಂತ ಪದ್ಮನಾಭ ಭಟ್, ಉದ್ಯಮಿ ಶ್ರೀನಿವಾಸ ರಾವ್ ಯಕ್ಷಗಾನದ ಮಹತ್ವ ತಿಳಿಸಿ ಯಕ್ಷಶಿಕ್ಷಣ ಟ್ರಸ್ಟ್ ಮತ್ತು ಕಲಾರಂಗದ ಅಗಾಧ ಕಾರ್ಯವಿಸ್ತಾರವನ್ನು ಶ್ಲಾಘಿಸಿದರು. ಉದ್ಯಮಿ ವಿಶ್ವನಾಥ ಸೇರೀಗಾರ್, ಎಸ್.ಡಿ.ಎಂ.ಸಿ. ಸದಸ್ಯ ಸುಬ್ರಮಣ್ಯ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಡಾ. ರಾಜೇಶ ನಾವಡ ಸ್ವಾಗತಿಸಿ, ನಾಗರಾಜ ಹೆಗಡೆ ವಂದಿಸಿ, ಟ್ರಸ್ಟಿ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ ಇಲ್ಲಿಯ ವಿದ್ಯಾರ್ಥಿಗಳಿಂದ ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿ ನಿರ್ದೇಶನದ ‘ರತಿ ಕಲ್ಯಾಣ’ ಪ್ರಸ್ತುತಗೊಂಡಿತು.