ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉಡುಪಿಯ ರಾಗ ಧನ ಸಂಸ್ಥೆ ಹಮ್ಮಿಕೊಂಡಿದ್ದ ಮುತ್ತುಸ್ವಾಮಿ ದೀಕ್ಷಿತರ ಅಪರೂಪದ ಕೃತಿಗಳ ಕಾರ್ಯಾಗಾರವು 32 ಸಂಗೀತಾಭ್ಯಾಸಿಗಳ ಪಾಲ್ಗೊಳ್ಳುವಿಕೆಯೊಂದಿಗೆ ದಿನಾಂಕ 22-05-2024ರಂದು ಸಂಪನ್ನಗೊಂಡಿತು.
ವಿದ್ವಾನ್ ಜಿ. ರವಿಕಿರಣ್ ಚೆನೈಯವರ ಸಂಗೀತ ಕಛೇರಿಯ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯೂ ಆದ ವಿದ್ವಾನ್ ಶ್ರೀ ಜಿ. ರವಿಕಿರಣ್, ಶಾಸ್ತ್ರೀಯ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಮಕ್ಕಳನ್ನು ಶ್ಲಾಘಿಸಿ, “ಇದರಲ್ಲಿ ನಿರಂತರತೆ ಕಾಯ್ದುಕೊಳ್ಳಿ. ನಿನ್ನೆ ಮತ್ತು ಇಂದು ಕಲಿತ ಪಾಠಗಳನ್ನು ದಿನವೂ ಮನನ ಮಾಡುವುದು ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರಿಗೆ ನಿಮ್ಮ ಗುರುಕಾಣಿಕೆ. ನಿಮ್ಮ ಓದುವಿಕೆಗೆ ಸಂಗೀತ ಯಾವತ್ತೂ ಅಡ್ಡಿಯಾಗುವುದಿಲ್ಲ. ಸಂಗೀತಾಭ್ಯಾಸವು ನಿಮ್ಮ ತನ್ಮಯತೆಯನ್ನು (ಕಾನ್ಸಂಟ್ರೇಷನ್) ಹೆಚ್ಚಿಸುವುದಲ್ಲದೆ ಮನಸ್ಸಿಗೆ ಶಾಂತತೆಯನ್ನು ತರುತ್ತದೆ” ಎಂದರು. ತದನಂತರ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ, ಹರಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಶ್ರೀಕಿರಣ್ ಹೆಬ್ಬಾರ್, “ಕಾರ್ಯಾಗಾರದ ಯಶಸ್ಸಿಗೆ ಹೆತ್ತವರ ಪ್ರೋತ್ಸಾಹ ಕಾರಣ. ಸಂಗೀತಾಸಕ್ತ ಮಕ್ಕಳ ಪಾಲ್ಗೊಳ್ಳುವಿಕೆ ನಿರಂತರವಾಗಿರಲಿ, ಮಕ್ಕಳನ್ನು ಪ್ರೋತ್ಸಾಹಿಸುವ ಹೆತ್ತವರ ಪರವಾಗಿ ರೋಬೋಸಾಪ್ಟ್ ನ ಉನ್ನತಾಧಿಕಾರಿ ಶ್ರೀ ಷಣ್ಮುಖ ರಾಜ ಅವರು ವೇದಿಕೆಯಲ್ಲಿರುವುದು ನಮಗೆ ಹೆಮ್ಮೆಯ ವಿಷಯ” ಎಂದರು.
ಸಮಾರೋಪ ಸಮಾರಂಭದ ಮುನ್ನ ವಿದ್ಯಾರ್ಥಿಗಳು ತಾವು ಕಲಿತ ದೀಕ್ಷಿತರ ಕೃತಿಗಳನ್ನು ಸಂಗೀತಾಭಿಮಾನಿಗಳ ಮುಂದೆ ಪ್ರಸ್ತುತ ಪಡಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಪರವಾಗಿ ಕುಮಾರಿ ಸ್ವಸ್ತಿ ಎಂ. ಭಟ್, ಕುಮಾರಿ ಚೈತನ್ಯ ಪುಣೆ ಹಾಗೂ ಶ್ರೀಮತಿ ರಶ್ಮಿ ಶ್ರೀನಿವಾಸ್ ಮಂಗಳೂರು ಇವರು ತಮ್ಮ ಅನಿಸಿಕೆಗಳನ್ನು ತಿಳಿಸಿ, ಇಂತಹ ಅವಕಾಶವನ್ನು ಒದಗಿಸಿಕೊಟ್ಟ ರಾಗ ಧನ ಉಡುಪಿ ಮತ್ತು ಚೆನೈನ ಗುರುಗುಹಾಮೃತ ಸಂಸ್ಥೆಗೆ ಕೃತಜ್ಞತಾಪೂರ್ವಕ ನಮನಗಳನ್ನು ತಿಳಿಸಿದರು. ಬಳಿಕ ಕುಮಾರಿ ಪ್ರಣತಿ ಮತ್ತು ಕುಮಾರಿ ಧೃತಿ ಅವರು ದ್ವಂದ್ವ ಗಾಯನ ನಡೆಸಿಕೊಟ್ಟರು. ಇವರಿಗೆ ವಯೊಲಿನ್ ನಲ್ಲಿ ವಿದುಷಿ ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ವಿದ್ವಾನ್ ನಾರಾಯಣ ಬಳ್ಳಕೂರಾಯ ಸಹಕರಿಸಿದರು.
ಮಾಸ್ಟರ್ ಪರ್ಜನ್ಯ ರಾವ್ ಪ್ರಾರ್ಥನೆಗೈದರು. ರಾಗ ಧನ ಸಂಸ್ಥೆಯ ಕಾರ್ಯದರ್ಶಿ ವಿದುಷಿ ಉಮಾಶಂಕರಿ ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಷಣ್ಮುಖರಾಜ ಧನ್ಯವಾದಗಳನ್ನು ಅರ್ಪಿಸಿದರು. ಕೆ. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಜಿ. ರವಿಕಿರಣ್ ಚೆನೈ ಅವರಿಂದ ಎರಡೂವರೆ ಗಂಟೆಗಳ ಕಾಲ ಅತ್ಯಂತ ಪ್ರೌಡ ಮಟ್ಟದ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ ನಡೆಯಿತು. ವಯೊಲಿನ್ ನಲ್ಲಿ ವಿದ್ವಾನ್ ಎಡಪಳ್ಳಿ ಅಜಿತ್ ಕುಮಾರ್ ಮತ್ತು ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಟಿ. ಪುತ್ತೂರು ಅವರು ಉತ್ತಮವಾಗಿ ಸಹವಾದನ ನೀಡಿದರು.