ಉಡುಪಿ : ಮಣಿಪಾಲದ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್, ರಂಗ ಚಿನ್ನಾರಿ (ರಿ.) ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಮಣಿಪಾಲದ ಸರಳೆಬೆಟ್ಟು ಇಲ್ಲಿನ ರತ್ನ ಸಂಜೀವ ಕಲಾ ಮಂಡಲದಲ್ಲಿ ‘ರಂಗಸಂಸ್ಕೃತಿ’ ರಂಗ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 28 ಜುಲೈ 2024ರಂದು ಜರಗಿತು.
ಈ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ರಂಗ ನಿರ್ದೇಶಕ, ನಟ ಕಾಸರಗೋಡು ಚಿನ್ನಾ ಇವರು ಮಾತನಾಡಿ “ನಟನೆಯನ್ನು ಕಲಿಯುವುದರಿಂದ ಮತ್ತು ಪಾತ್ರಗಳನ್ನು ಅಭಿನಯಿಸುವುದರಿಂದ ವ್ಯಕ್ತಿತ್ವ ವಿಕಸನವಾಗುವುದರ ಜೊತೆಗೆ ಬದುಕಿನಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಪ್ರಶ್ನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಾತ್ರವಲ್ಲ ಇದರಿಂದ ಮನೋಸ್ಥೈರ್ಯ ಬೆಳೆಯಲು ಅನುಕೂಲವಾಗುತ್ತದೆ. ಜೊತೆಗೆ ಸಾಮಾಜಿಕ ಬದುಕು ಸಾರ್ಥಕ ಎನಿಸುತ್ತದೆ” ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ‘ರಂಗಸಂಸ್ಕೃತಿ’ ಶಿಬಿರ ನಡೆಸುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಮಹೇಶ್ ಠಾಕೂರ್ ಇವರು ಮಾತನಾಡಿ, “ರಂಗ ಭೂಮಿಯ ವಿವಿಧ ಮಜಲುಗಳನ್ನು ಕಲಿಯುವುದರಿಂದ ಬದುಕನ್ನು ಎದುರಿಸುವ ಎದೆಗಾರಿಕೆ ಬರುತ್ತದೆ” ಎಂದರು. ಶಾಲಾ ಕಾಲೇಜಿನ ಅಧ್ಯಾಪಕ ವೃಂದದವರಿಗೆ ಮುಂದಿನ ದಿನಗಳಲ್ಲಿ ಶಿಬಿರವನ್ನು ಏರ್ಪಡಿಸುವುದಾಗಿ ಹೇಳಿದರು.
ಸುಮಾರು 85 ವಿದ್ಯಾರ್ಥಿಗಳು ಭಾಗವಹಿಸಿದ ಈ ರಂಗ ಶಿಬಿರದಲ್ಲಿ ಆಶು ನಾಟಕ, ನಡೆ, ಧ್ವನಿ ಸೇರಿದಂತೆ ಹಲವಾರು ವಿಷಯಗಳನ್ನು ಕಲಿಸಿಕೊಡಲಾಯಿತು. ವೇದಿಕೆಯಲ್ಲಿ ಶಿಲ್ಪಾ ಸಾಮಂತ್, ನಿತ್ಯಾನಂದ ಪಡ್ರೆ, ಸತೀಶ್ ಪಾಟೀಲ್, ದಿನೇಶ್ ಪ್ರಭು, ರಮಾನಂದ ಸಾಮಂತ್, ಶಶಿ ಭೂಷಣ ಕಿಣಿ ಮುಂತಾದವರು ಉಪಸ್ಥಿತರಿದ್ದರು. ಮಹೇಶ್ ಠಾಕೂರ್ ಸ್ವಾಗತಿಸಿ, ಅಧ್ಯಾಪಿಕೆ ಮಮತಾ ಸಾಮಂತ್ ಕಾರ್ಯಕ್ರಮವನ್ನು ನಿರೂಪಿಸಿ, ಟ್ರಸ್ಟಿನ ಸದಸ್ಯೆ ಅಶ್ವಿನಿ ಎಂ. ಠಾಕೂರ್ ಧನ್ಯವಾದವಿತ್ತರು. ಭಾಗವಹಿಸಿ ಎಲ್ಲಾ ಅತಿಥಿಗಳಿಗೆ ಸಸಿಗಳ ಕುಂಡವನ್ನು ನೀಡಿ ಗೌರವಿಸಲಾಯಿತು.