ಕುಂದಾಪುರ: ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-75’ನೇ ಕಾರ್ಯಕ್ರಮವಾಗಿ 13ನೇ ವರ್ಷದ ಹೂವಿನಕೋಲು ತಿರುಗಾಟದ ಸಮಾರೋಪ ಸಮಾರಂಭವು ದಿನಾಂಕ 13 ಅಕ್ಟೋಬರ್ 2024ರಂದು ಕುಂದಾಪುರದ ಕಲಾ ಪೋಷಕ ಡಾ. ಆದರ್ಶ ಹೆಬ್ಬಾರ್ ಇವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಮಾರೋಪದ ನುಡಿಗಳನ್ನಾಡಿದ ಡಾ. ಆದರ್ಶ ಹೆಬ್ಬಾರ್ “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸುತ್ತಿರುವ ಸಂಸ್ಥೆ ಯಶಸ್ವೀ ಕಲಾವೃಂದ. ಪ್ರಾಚೀನ ಕಲೆಯಾದ ಹೂವಿನಕೋಲು ನಶಿಸಿ ಹೋದ ಕಾಲದಲ್ಲಿ ಅದನ್ನು ಕೈಗೆತ್ತಿಕೊಂಡು ಮನೆ ಮನೆ ಸುತ್ತಿ ಮತ್ತೆ ಕಲೆ ಹಸಿರಾಗಿ ಉಳಿಯುವಂತೆ ಮಾಡಿದ ಸಂಸ್ಥೆ ಇದೀಗ 25ನೇಯ ವರ್ಷಾಚರಣೆಯಲ್ಲಿ ಜಾತಿ-ಧರ್ಮ, ಬಡವ- ಬಲ್ಲಿದ ಭೇದ ಮರೆತು 495 ಮನೆಗಳಿಗೆ ಭೇಟಿ ನೀಡಿ ಕಲೆಯನ್ನು, ಸಂಸ್ಕೃತಿಯನ್ನು ಮತ್ತೆ ನೆನಪಿಸಿದ ಸಂಸ್ಥೆಯ ಸಾಧನೆ ಸಣ್ಣದಲ್ಲ. ಜೀವನೋಪಾಯಕ್ಕಾಗಿಯೂ, ಬೆಳೆಯುವ ಕಲಾವಿದರಿಗೆ ಕಲಿಕೆ ನಿರಂತರವಾಗಿರಬೇಕೆನ್ನುವುದಕ್ಕಾಗಿಯೋ, ಮಕ್ಕಳಿಗೆ ಯಕ್ಷಗಾನದ ಅಭಿರುಚಿಯನ್ನು.. ಪೌರಾಣಿಕ ಕಥೆಯ ಸಾರವನ್ನು ಅಭ್ಯಾಸ ಮಾಡುವುದಕ್ಕಾಗಿಯೋ ಬಹಳ ಹಿಂದೆ ಹುಟ್ಟಿಕೊಂಡ ಕಲಾ ಪ್ರಕಾರ ಹೂವಿನಕೋಲು ಮರೆಯಾದ ಕಾಲಘಟ್ಟದಲ್ಲಿ ಪುನರುಜ್ಜೀವನಗೊಳಿಸಿದ ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ.” ಎಂದು ಹಾರೈಸಿದರು.
ತಂಡಗಳ ಜವಾಬ್ದಾರಿಯನ್ನು ಗಣಪತಿ ಭಟ್ ನಿಟ್ಟೂರು, ಕೃಷ್ಣ ಗಿಳಿಯಾರು, ವಿಶ್ವನಾಥ ಮಾಸ್ಟರ್, ಗಣೇಶ್ ಕೊಮೆ, ಜನಾರ್ದನ ಹಂದೆ, ಅಶೋಕ್ ಬಸ್ರೂರು, ಪ್ರಶಾಂತ್ ಆಚಾರ್ ಕೆಳಕಳಿ, ರಾಜೇಶ್ ಕೋಡಿ, ಪ್ರಶಾಂತ್ ಪಡುಕೆರೆ, ಹೆರಿಯ ಮಾಸ್ಟರ್, ವೆಂಕಟೇಶ ವೈದ್ಯ ವಹಿಸಿ ಯಶಸ್ವಿಯಾಗಿ ಪೂರೈಸಿದರು. ಕು. ಹರ್ಷಿತಾ, ಕು. ಆರಬಿ ಹೆಗಡೆ, ಕು. ಪರಿಣಿತ ವೈದ್ಯ, ಮಾ. ಪವನ್, ಮಾ. ಕಿಶನ್, ಕು. ಪೂರ್ವಿ, ಕು. ಪ್ರಣಮ್ಯ, ಮಾ. ರಚಿತ್, ಮಾ. ಸಂಕೇತ್, ಕು. ಆರಬಿ ಸಾಮಗ, ಕು. ತ್ರಿಷಾ, ಮಾ. ರಾಹುಲ್ ಅಮೀನ್, ಮಾ. ರಾಹುಲ್ ಕುಂದರ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಅಭಿಯಾನದಲ್ಲಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಉಪನ್ಯಾಸಕ ಶಂಕರನಾರಾಯಣ ಉಪಾದ್ಯಾಯ, ಕು. ಪಂಚಮಿ ಹಾಗೂ ಅಭಿಯಾನದ ಕಲಾವಿದರು ಭಾಗವಹಿಸಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಪೌರಾಣಿಕ ಕಥಾ ಪ್ರಸಂಗದ ತುಣುಕು ‘ಸುಧನ್ವಾರ್ಜುನ’ ಹಾಗೂ ‘ಹನುಮ-ಲಂಕಿಣಿ’ ಭಾಗ ಹೂವಿನಕೋಲು ಪ್ರದರ್ಶನಗೊಂಡಿತು.