ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ, ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಸಂಯುಕ್ತ ಆಶ್ರಯದಲ್ಲಿ 23 ದಿನಗಳ ಕಾಲದ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 04 ಮೇ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಿಬಿರ ನಿರ್ದೇಶಕರಾದ ಶ್ರೀಷ ತೆಕ್ಕಟ್ಟೆ, ರಂಜಿತ್ ಶೆಟ್ಟಿ ಕುಕ್ಕುಡೆ, ಅಶೋಕ್ ಮೈಸೂರು ಹಾಗೂ ಕೃಷ್ಣ ಬಡಿಗೇರ ಅವರಿಗೆ ಗುರುವಂದನೆ ಸಲ್ಲಿಸಿದ ಉದಯ್ ಗಾಂವ್ಕರ್ ಮಾತನಾಡಿ “ಶಿಬಿರಗಳಲ್ಲಿ ಪ್ರತಿಭೆಗಳ ಅನಾವರಣಕ್ಕೆ ಅವಕಾಶಗಳು ಹೆಚ್ಚು ಸಾಧ್ಯ. ಪೋಷಕರು ತಮ್ಮಿಂದ ಸಾಧಿಸುವುದಕ್ಕೆ ಸಾಧ್ಯವಾಗದ್ದನ್ನು ಮಕ್ಕಳ ಮೇಲೆ ಹೇರಿ ತನ್ಮೂಲಕ ಮಕ್ಕಳನ್ನು ಬಂಧನಕ್ಕೊಳಗಾಗಿಸುತ್ತಾರೆ. ಇದರಿಂದ ಮಗು ತಾನಾಗಬೇಕಾದದ್ದೇನೂ ಆಗದೇ ತಂದೆ ತಾಯಿಗಳು ಆಗಬೇಕಾದದ್ದನ್ನು ಆಗಬೇಕಾದ ಪರಿಸ್ಥಿತಿ ಸರಿಯಲ್ಲ. ಮಕ್ಕಳು ಇನ್ನೊಬ್ಬರ ಮಾತು ಕೇಳುವುದೇ ಜಾಣತನವಲ್ಲ, ಸ್ವತಂತ್ರವಾಗಿ ಯೋಚಿಸುವುದು ಜಾಣತನ” ಎಂದು ಅಭಿಪ್ರಾಯಪಟ್ಟರು.
“ಸಂಸ್ಕಾರ ಬೆಳೆಸಿಕೊಳ್ಳುವ ವ್ಯಕ್ತಿತ್ವ ಶಿಬಿರದಲ್ಲಾಗುತ್ತಿರುವುದು ಗಮನಿಸಿದ್ದೇವೆ” ಎಂದು ಯಕ್ಷಗುರು ಲಂಬೋದರ ಹೆಗಡೆ ಹೇಳಿದರು.“ಯಶಸ್ವೀ ಕಲಾವೃಂದ ನಿರಂತರ ಚಟುವಟಿಕೆಗಳಿಂದ ಕಲಾರಾಧನೆ ಮಾಡುವ ಕಲಾಕ್ಷೇತ್ರವಾಗಿದೆ” ಎಂದು ಪ್ರಾಸ್ತಾವಿಕ ಮಾತನ್ನಾಡಿದವರು ಹೆರಿಯ ಮಾಸ್ಟರ್ ಅಭಿಪ್ರಾಯಪಟ್ಟರು. ಸಚಿನ್ ಅಂಕೋಲ ಮಾತನಾಡಿ “ತೆಕ್ಕಟ್ಟೆ ಕ್ಯಾಂಪ್ ಯಾವಾಗಲೂ ವಿಶೇಷವಾಗಿ, ವಿಭಿನ್ನವಾಗಿರುವುದು ಕುತೂಹಲಕಾರಿ ಸಂಗತಿ” ಎಂದರು. ಪಾರಂಪಳ್ಳಿ ರವೀಂದ್ರ ಐತಾಳ್ ಮಾತನಾಡಿ “ನೆರೆದ ಪ್ರೇಕ್ಷಕರನ್ನು ನೋಡಿದರೆ ಅಭಿಮಾನ ಮೂಡುತ್ತದೆ. ಮಕ್ಕಳಲ್ಲಿ ನಾಟಕದ ಅಭಿರುಚಿ ಮೂಡಿಸುವ ಕಾರ್ಯ ಶ್ಲಾಘನೀಯ” ಎಂದರು. ರಂಗಕರ್ಮಿ ಸುಪ್ರಿತಾ ಪುರಾಣಿಕ್ ಮಾತನಾಡಿ “ಯಶಸ್ವೀ ವೇದಿಕೆ ನನಗೆ ತವರು. ಈ ವೇದಿಕೆಯಲ್ಲಿ ಕಲೆಯಿಂದ ಬೆಳೆದವಳು ನಾನು” ಎಂದರು.
ಗೋವಿಂದ ಉರಾಳ್, ಅನುಪಮ, ಅನಿತಾ ಪೋಷಕರ ನೆಲೆಯಲ್ಲಿ ಅಭಿಪ್ರಾಯವನ್ನು ಹಂಚಿಕೊಂಡರು. ಉದ್ಯಮಿ ಸುಬ್ರಾಯ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶನದ ನಾಟಕ ‘ಹಕ್ಕಿ ಹಾಡು’ ಹಾಗೂ ಅಶೋಕ್ ಮೈಸೂರ ನಿರ್ದೇಶನದ ನಾಟಕ ‘ಧರಣಿ ಮಂಡಲ’ ರಂಗ ಪ್ರಸ್ತುತಿಗೊಂಡಿತು.
Subscribe to Updates
Get the latest creative news from FooBar about art, design and business.
Next Article ಲೋಕಾರ್ಪಣೆಗೊಂಡ ವಿಜಯಲಕ್ಷ್ಮೀ ಶಾನುಭೋಗರ “ವ್ಯೂಹ” ಕೃತಿ