ಮೈಸೂರು : ನಿರಂತರ ಫೌಂಡೇಶನ್ ಮೈಸೂರು ಆಯೋಜಿಸಿದ ‘ಸಹಜರಂಗ 2024’ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ ದಿನಾಂಕ 29 ಸೆಪ್ಟೆಂಬರ್ 2024ರ ಭಾನುವಾರದ ಸಂಜೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯಿತು.
ನಿರಂತರ ಫೌಂಡೇಶನ್ ಸಂಸ್ಥೆಯು ರಂಗಭೂಮಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಚಟುವಟಿಕೆಗಳನ್ನು ರೂಪಿಸುತ್ತಿದೆ. ಕಳೆದ ಎರಡು ದಶಕಗಳಿಂದಲೂ ಸ್ಪಷ್ಟ ಉದ್ದೇಶ ಮತ್ತು ಸಾಮಾಜಿಕ ಆಶಯದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಕಳೆದ 17 ವರ್ಷಗಳಿಂದ ಉಚಿತವಾಗಿ ‘ಸಹಜರಂಗ’ ರಂಗ ತರಬೇತಿ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ.1 ತಿಂಗಳ ಕಾಲ ನಡೆಯುವ ಈ ಶಿಬಿರದಲ್ಲಿ ರಂಗಭೂಮಿ ಇತಿಹಾಸ, ರಂಗ ಸಂಗೀತ, ಪರಿಸರ, ನಟನೆ, ಸಮರಕಲೆ ಸೇರಿದಂತೆ ಸಾಹಿತ್ಯ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತರಗತಿಗಳು ರೂಪುಗೊಂಡಿರುತ್ತವೆ.
ನಾಡಿನ ಸಾಹಿತಿಗಳು, ವಿಷಯ ಪರಿಣಿತರು, ರಂಗ ನಿರ್ದೇಶಕರು, ಸಂಗೀತ ನಿರ್ದೇಶಕರು ಶಿಬಿರಾರ್ಥಿಗಳೊಂದಿಗೆ ಚರ್ಚೆ ಸಂವಾದಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೇ ಪ್ರಸ್ತುತ ವಿದ್ಯಮಾನಗಳ ಆಗು ಹೋಗುಗಳ ಬಗ್ಗೆ ವಿಸ್ತೃತ ಚರ್ಚೆ ಕೈಗೊಂಡು, ಇದಕ್ಕೆ ಪೂರಕವಾದ ನಾಟಕವನ್ನು ಶಿಬಿರಾರ್ಥಿಗಳಿಂದಲೇ ಮಾಡಿಸಲಾಗುತ್ತದೆ. ಹಿಂದಿನ ಶಿಬಿರಗಳಲ್ಲಿ ‘ದಾರಿ’, ‘ಭೋಮ’, ‘ಮಹಾತ್ಮರ ಪ್ರತಿಮೆ’, ‘ಇದೆ’, ‘ಇತ್ತು’, ‘ಇರುತ್ತದೆ..’, ‘ಮೆರವಣಿಗೆ’, ‘ಬರ ಅಂದ್ರೆ ಎಲ್ಲರಿಗೂ ಇಷ್ಟ’, ‘ಸಾಯೋಆಟ’, ‘ಬಹುಮುಖಿ ರಾಮಯಣ’, ‘ಗಾಂಧಿ ಆಲ್ಬಂ’, ಎಂಬ ನಾಟಕಗಳನ್ನು ರೂಪಿಸಿ ಪ್ರದರ್ಶನ ನೀಡಲಾಗಿದೆ. ಅಲ್ಲದೇ, ಮೈಸೂರಿನ ಪ್ರಮುಖ ಕಾಲೇಜುಗಳಲ್ಲಿ ಜಾಥಾ ಹಮ್ಮಿಕೊಂಡು ಈ ನಾಟಕಗಳನ್ನು ಪ್ರದರ್ಶಿಸಲಾಗಿದೆ. ಅಷ್ಟೆ ಅಲ್ಲದೆ, ರಾಜ್ಯದ ಬೇರೆ ಬೇರೆ ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ಪ್ರದರ್ಶನ ನೀಡಲಾಗಿದೆ.
ಪ್ರಾಸ್ತಾವಿಕ ನುಡಿಗಳನ್ನಾಡಿದ ನಿರಂತರ ಮೈಸೂರಿನ ರಂಗ ನಿರ್ದೇಶಕರಾದ ಸುಗುಣ ಎಂ. ಎಂ. ಮಾತನಾಡುತ್ತಾ “ರಂಗಭೂಮಿ ಸದಾ ಪ್ರಯೋಗಶೀಲತೆಯನ್ನು ಒಳಗೊಂಡಿರುತ್ತದೆ ಕಳೆದ ಮೂರು ದಶಕದಿಂದ ‘ನಿರಂತರ ಫೌಂಡೇಶನ್’ ರಂಗಭೂಮಿಯನ್ನು ಒಂದು ಭಾಷೆಯಂತೆ ಬಳಸುತ್ತಾ ಸಮಾಜದ ಜೊತೆ ಸಂಧಿಸುತ್ತಿದೆ. ರಂಗಭೂಮಿಯ ವಿಸ್ತರಣೆಯಾಗಿ ನೂರಾರು ಸೃಜನಶೀಲ ಕಾರ್ಯಕ್ರಮಗಳನ್ನು ಈವರೆಗೂ ಹಮ್ಮಿಕೊಂಡು, ರಾಜ್ಯದಾದ್ಯಂತ ಸಂಚರಿಸಿದೆ. ಇದರ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸಹಜರಂಗ’ ಎಂಬ ರಂಗತರಬೇತಿ ಶಿಬಿರವನ್ನು ಪ್ರತಿ ವರ್ಷವೂ ನಡೆಸಿಕೊಂಡು ಬರುತ್ತಿದೆ. ಇದು 17ನೇ ‘ಸಹಜರಂಗ’. ಪ್ರತಿ ವರ್ಷವೂ ಒಂದೊಂದು ಪ್ರಚಲಿತ ವಿದ್ಯಮಾನವನ್ನು ಆಶಯವನ್ನಾಗಿಸಿಕೊಂಡು ಶಿಬಿರವನ್ನು ರೂಪಿಸುತ್ತಾ ಶಿಬಿರಾರ್ಥಿಯನ್ನು ಸಂವೇದನೀಯನನ್ನಾಗಿಸುವುದೇ ಮುಖ್ಯ ಗುರಿ. ಸಹಜ ಬದುಕಿನಿಂದ ವಿಮುಖರಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಆಶಯ, ಆದರ್ಶ, ಮೌಲ್ಯಗಳೆಲ್ಲವೂ ಒಂದು ರೀತಿಯ ‘ಉಟೋಪಿಯಾ’ ದಂತೆ ಕಾಣುತ್ತಿದೆ. ಹಾಗಾಗಿ ಇವು ನಮ್ಮನ್ನು ಸಂಧಿಸುವ ಬಿಂದುವನ್ನು ಹುಡುಕುತ್ತಾ, ಅನನ್ಯತೆಯೆಡೆಗೆ ಮುಖಾಮುಖಿಯಾಗುವುದು ಈ ಸಹಜರಂಗದ ಉದ್ದೇಶ. ನಮ್ಮೊಳಗೆ ಒಂದು ಪ್ರಕೃತಿಯಿದೆ ಅಂತೆಯೇ ನಮ್ಮ ಹೊರಗೂ ಒಂದು ಪ್ರಕೃತಿಯಿದೆ. ಎರಡರಲ್ಲೂ ಅಗಾಧ ವೈವಿಧ್ಯತೆಯಿದೆ. ಆದರೂ ಪರಸ್ಪರ ಸಮಗ್ರತೆಯನ್ನು ಕಾಯ್ದುಕೊಂಡಿವೆ. ಹಾಗಾಗಿಯೇ ಏಕತೆಯ ಬೇರು ಅನನ್ಯತೆಯಲ್ಲಡಗಿದೆ. ಜಗತ್ತಿನಲ್ಲಿ ಪ್ರತಿಯೊಂದು ಕಣಕ್ಕೂ ತನ್ನದೇ ಆದ ಅಸ್ಥಿತ್ವವಿರುವಂತೆ ಪ್ರತಿಯೊಬ್ಬ ಮನುಷ್ಯನಿಗೂ ಇದೆ. ಒಂದು ಚಿತ್ರ ಅಥವಾ ದೃಶ್ಯದಲ್ಲಿರುವ ಪ್ರತಿಯೊಂದು ಬಣ್ಣಕ್ಕೂ ತನ್ನದೇ ಮಹತ್ವವಿರುವಂತೆ. ಹಲವು ಬಣ್ಣಗಳು ಸೇರಿ ಒಂದು ಉತ್ತಮ ಚಿತ್ರವಾಗುತ್ತದೆ. ಬಣ್ಣಗಳು ಒಂದು ಚಿತ್ರದಲ್ಲಿ ವಹಿಸುವ ಪಾತ್ರವನ್ನು ನಮ್ಮ ಬದುಕಿನಲ್ಲೂ ವಹಿಸುತ್ತವೆ. ಬಣ್ಣಗಳು ರೂಪಕವೂ ಹೌದು ಹಾಗೆಯೇ ಅನನ್ಯತೆಯ ಸಂಕೇತವೂ ಹೌದು. ನಮ್ಮ ಸುತ್ತಲೂ ಇರುವ ಈ ಬಣ್ಣಗಳು ಬದುಕನ್ನು ಒಂದು ಸುಂದರ ಚಿತ್ರವನ್ನಾಗಿಸುತ್ತದೆವಂತೆ ಮಾಡುವುದೇ ‘ಸಹಜ ರಂಗ’ದ ಉದ್ದೇಶ.” ಎಂದು ಹೇಳಿದರು.
ಚಿಂತಕರಾದ ಪ್ರೊ. ಕಾಳಚೆನ್ನೇಗೌಡ ಮಾತನಾಡಿ “ರಂಗ ತರಬೇತಿ ಶಿಬಿರಗಳು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ. ಯುವಕರಿಗೆ ಸುಲಭ ಮಾರ್ಗದಲ್ಲಿ ತಮ್ಮ ಆಸಕ್ತಿಯನ್ನು ವಿಸ್ತ್ರತಗೊಳಿಸಿಕೊಳ್ಳಲು ಇರುವ ಆಯಾಮವೇ ಇಂತಹ ರಂಗ ಶಿಬಿರಗಳು.” ಎಂದು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ರಾಮು ಮಾತನಾಡಿ “ರಂಗಾಯಣ ರಂಗಭೂಮಿ ಎಲ್ಲರನ್ನೂ ಒಳಗೊಳ್ಳುತ್ತದೆ. ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ನಾಟಕದ ಅಭಿರುಚಿಯಿರುವ ಅಧ್ಯಾಪಕರ ಅವಶ್ಯಕತೆ ಇದೆ ಎಂದರು.
ಹಸಿರು ಫೌಂಡೇಶನ್ ನ ಹೊನ್ಗಳ್ಳಿ ಗಂಗಾಧರ್ ಕಾರ್ಯಕ್ರಮದ ಕುರಿತು ಮಾತನಾಡುತ್ತಾ, ನಿರಂತರವಾಗಿ ಹದಿನಾರು ವರ್ಷಗಳಿಂದ ಆಯೋಜಿಸುತ್ತಿರುವ ‘ಸಹಜರಂಗ’ ಯುವಕರ ಹವ್ಯಾಸಗಳಿಗೆ ದಾರಿಯಾಗಿದೆ ಮತ್ತು ರಂಗಭೂಮಿಯನ್ನೇ ವೃತ್ತಿಯಾಗಿಸಿಕೊಳ್ಳಲೂ ಸಹಾಯಕವಾಗಿದೆ, ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
‘ಸಹಜರಂಗ’ದ ವಿದ್ಯಾರ್ಥಿಯಾದ ವೇಣುಗೋಪಾಲ್ “ ನಿರಂತರ ಎಂಬ ನದಿಯಲ್ಲಿ ಬಿಂದುವಾಗಿ ಸೇರಿಕೊಂಡಿದ್ದೇವೆ, ಈ ಶಿಬಿರ ನಮ್ಮನ್ನು ಸಂವೇದನಾ ಶೀಲರಾದ ಮನುಷ್ಯರಾಗಲು ಪ್ರೇರೇಪಿಸಿದೆ” ಅನಿಸಿಕೆ ವ್ಯಕ್ತಪಡಿಸಿದರು.ನಿರಂತರ ತಂಡದ ಆಶಯವನ್ನು ಅರಗಿಸಿಕೊಂಡು. ಅಳವಡಿಸಿಕೊಂಡು ಮುಂದುವರೆಯಲು ಪ್ರಯತ್ನ ಪಡಬೇಕಾಗಿದೆ.ಇಲ್ಲಿ ಸ್ಪಂದನೆಯನ್ನು ಗಳಿಸಿಕೊಳ್ಳುವ ಅವಕಾಶ ದಕ್ಕಿದೆ. ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.