ಬದಿಯಡ್ಕ : ಸಂಗೀತ ಪ್ರತಿಷ್ಠಾನಮ್ (ರಿ) ಉಬ್ರಂಗಳ ಇದರ ಅಂಗ ಸಂಸ್ಥೆ ವೀಣಾವಾದಿನಿ ಸಂಗೀತ ವೇದಿಕ್ ತಾಂತ್ರಿಕ ಪ್ರತಿಷ್ಠಾನದ 25ನೇ ವರ್ಷದ ವಾರ್ಷಿಕ ಉತ್ಸವ ‘ವೇದ ನಾದ ಯೋಗ ತರಂಗಿಣಿ’ ಬಹಳ ವಿಜೃಂಭಣೆಯಿಂದ ದಿನಾಂಕ 01-02-2024ರಿಂದ 04-02-2024ರವರೆಗೆ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯಲ್ಲಿ ಜರಗಿತು.
ದಿನಾಂಕ 01-02-2024ರಂದು ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಮತ್ತು ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಇವರು ಮಹಾ ಶ್ರೀ ಚಕ್ರ ನವಾವರಣ ಪೂಜೆ ಮತ್ತು ಲಕ್ಷಾರ್ಚನೆ ಸಮಾರಂಭವನ್ನು ನೆರವೇರಿಸಿದರು. ದಿನಾಂಕ 02-02-2024ರಂದು ಭದ್ರದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕೊಂಡೆಯೂರು ಸ್ವಾಮೀಜಿಯವರು ಉದ್ಘಾಟಿಸಿದರು. ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂತಿರಿ, ನಿಶ್ಚಲ ಯೋಗದ ಶ್ರೀ ಪ್ರವೀಣ್ ಕುಮಾರ್, ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಇವರು ಉಪಸ್ಥಿತರಿದ್ದರು. ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೆರಿ ಅವರಿಗೆ ಗೌರವಾರ್ಪಣೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಎಡನೀರು ಮಠಾಧಿಪತಿ ಸ್ವಾಮಿ ಸಚ್ಚಿದಾನಂದ ಭಾರತಿ ಪಾದಂಗಳವರ ಸಾನ್ನಿಧ್ಯದಲ್ಲಿ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂತಿರಿಯವರು ಮಹಾ ಶ್ರೀಚಕ್ರ ನವಾವರಣ ಪೂಜೆಯನ್ನು, ಜೊತೆಗೆ ವೀಣಾವಾದಿನಿ ಸದಸ್ಯರು ನವಾವರಣ ಕೃತಿಗಳ ಸಂಗೀತಾರ್ಚನೆಯನ್ನು ನಡೆಸಿಕೊಟ್ಟರು.
ದಿನಾಂಕ 03-02-2024ರಂದು ಬೆಳಗ್ಗೆ ನವಗ್ರಹ ಕೃತಿ ಸಹಿತ ನವಗ್ರಹ ಪೂಜೆಯೂ, ಬಳಿಕ ಶ್ರೀ ಹೊಸಹಳ್ಳಿ ವೆಂಕಟ್ರಾಮ್, ಶ್ರೀ ಹೊಸಹಳ್ಳಿ ಸುಬ್ಬರಾವ್ ಮತ್ತು ಶ್ರೀ ಹೊಸಹಳ್ಳಿ ರಘುರಾಮ್ ಅವರಿಂದ ಪಿಟೀಲು ಕಛೇರಿಯೂ ಜರಗಿತು. ವಿದ್ಯಾರ್ಥಿ ಕಲಾವಿದರಾದ ರಿಕಿಶಾ, ವಿಷ್ಣು ಶರ್ಮಾ, ರಮ್ಯಾ ನಂಬೂದಿರಿ, ಪಲ್ಲವಿ ಅವರಿಂದ ರಸಿಕಪ್ರಿಯ ಕಾರ್ಯಕ್ರಮವು ನಡೆಯಿತು. ಶ್ರೀ ಹೊಸಹಳ್ಳಿ ವೆಂಕಟ್ ರಾಮ್, ಶ್ರೀ ನೆಡುಮಂಗಾಡ್ ಶಿವಾನಂದನ್ ಮತ್ತು ಶ್ರೀ ತಿರುವಿಳ ಶಿವಾನಂದನ್ ಎಂಬ ಹಿರಿಯ ಗುರುಕಲಾವಿದರಿಗೆ ಗುರುಪೂಜೆಯನ್ನು ಮಾಡಲಾಯಿತು. ಬಳಿಕ ಶ್ರೀ ಹರಿಪ್ರಸಾದ್ ಅವರ ತಂಡದಿಂದ ಕೊಳಲು ವಾದನ ಕಚೇರಿಯೂ ವಿದುಷಿ ಶ್ರೀಮತಿ ವಿನೀತ ನೆಡುಂಗಾಡಿ ಅವರ ತಂಡದಿಂದ ಮೋಹಿನಿಯಾಟ್ಟಂ ಕೂಡ ನಡೆಯಿತು.
ಸಮಾರೋಪದ ದಿನ ಮುಂಜಾನೆ ಈಶ ಹಠಯೋಗದ ಯೋಗ ಕಾರ್ಯಕ್ರಮವನ್ನು ಶ್ರೀ ಪ್ರವೀಣ್ ಕುಮಾರ್ ಅವರು ನಡೆಸಿಕೊಟ್ಟರು. ಬಳಿಕ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಅಲಾಪನೆ, ವೀಣಾವಾದಿನಿ ವಿದ್ಯಾರ್ಥಿ ತಂಡಗಳಿಂದ ನಾದೋಪಾಸನೆ ನಡೆಯಿತು. ವಾಗ್ಗೆಯಕಾರ ಶ್ರೀ ಎಂ ಬಾಲಮುರಳಿಕೃಷ್ಣ ಅವರ ಸ್ಮರಣೆಗಾಗಿ ಅವರ 72 ಮೇಳಕರ್ತಾ ಕೃತಿಗಳಲ್ಲಿ ಆಯ್ದ ಕೆಲವು ಕೃತಿಗಳನ್ನು ಮುರಲೀರವಂ ಕಾರ್ಯಕ್ರಮದ ಮೂಲಕ ಪ್ರಸ್ತುತಪಡಿಸಲಾಗಿದೆ.
ಬಳಿಕ ನಡೆದ ಸಮಾರೋಪ ಸಭೆಯಲ್ಲಿ ಚೇರ್ತಲ ಜಿ. ಕೃಷ್ಣಕುಮಾರ್ ಅವರಿಗೆ ‘ವೀಣಾವಾದಿನಿ ಪ್ರಶಸ್ತಿ’ ಪ್ರದಾನವನ್ನು ಮಾಡಲಾಯಿತು. ಎಡನೀರು ಮಠಾಧಿಪತಿ ಸ್ವಾಮಿ ಸಚ್ಚಿದಾನಂದ ಭಾರತಿ ಪಾದಂಗಳವರು ಆಶೀರ್ವಚನವನ್ನು ನಡೆಸಿಕೊಟ್ಟರು. ಶಾಸಕ ಶ್ರೀ ಎನ್.ಎ. ನೆಲ್ಲಿಕುನ್ನು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪ್ರಕಾಶ್ ಮತ್ತಿಹಳ್ಳಿ, ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿಯವರು, ನೆಡುಮಂಗಾಡ್ ಶಿವಾನಂದನ್ ಮಾತನಾಡಿದರು. ಪ್ರಸಿದ್ಧ ಗಾಯಕ ಶ್ರೀ ಶಂಕರನ್ ನಂಬೂದಿರಿ ಅವರ ಅದ್ಭುತ ಸಂಗೀತ ಕಚೇರಿಯೊಂದಿಗೆ ನಾಲ್ಕು ದಿನಗಳ ‘ವೇದ ನಾದ ಯೋಗ ತರಂಗಿಣಿ’ ಕಾರ್ಯಕ್ರಮ ಪರಿಸಮಾಪ್ತಿಗೊಂಡಿತು.