ಕಾಸರಗೋಡು : ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ಹಾಗೂ ವೈದಿಕ – ತಾಂತ್ರಿಕ ವಿದ್ಯಾಪೀಠದ ವಾರ್ಷಿಕೋತ್ಸವ ‘ವೇದ ನಾದ ಯೋಗ ತರಂಗಿಣಿ’ ಸಾಂಸ್ಕೃತಿಕ ವೈಭವವು ದಿನಾಂಕ 25ರಿಂದ 28 ಡಿಸೆಂಬರ್ 2025ರವರೆಗೆ ವೈದಿಕ, ತಾಂತ್ರಿಕ, ಯೋಗ, ಸಂಗೀತ, ನೃತ್ಯ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ನಡೆಯಲಿದೆ.
ದಿನಾಂಕ 25 ಡಿಸೆಂಬರ್ 2025ರಂದು ಬೆಳಗ್ಗೆ 5-00 ಗಂಟೆಗೆ ಮಹಾಗಣಪತಿ ಹೋಮ, ಲಕ್ಷಾರ್ಚನೆ, ಚಕ್ರಾಬ್ಬಪೂಜೆ ಮತ್ತು ಸಂಜೆ 6-30ಕ್ಕೆ ನವಗ್ರಹಪೂಜೆ ಹಾಗೂ ಪೂಜೆಯ ಜೊತೆ ವೀಣಾವಾದಿನಿಯ ವಿದ್ಯಾರ್ಥಿ ಕಲಾವಿದರಿಂದ ನವಗ್ರಹ ಕೃತಿಗಳ ಹಾಡುಗಾರಿಕೆ ಇರುತ್ತದೆ.
ದಿನಾಂಕ 26 ಡಿಸೆಂಬರ್ 2025ರಂದು ಬೆಳಗ್ಗೆ ಗಂಟೆ 9-30ಕ್ಕೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಇವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರಗಲಿದೆ. ಬಳಿಕ ವಿವಿಧ ವಾದ್ಯವಾದನಗಳ ಸಾಂಗತ್ಯದಲ್ಲಿ, ‘ಸಮನ್ವಯ’ ಎಂಬ ವಿಶೇಷ ಕಾರ್ಯಕ್ರಮ ಜರಗಲಿದ್ದು, ಮಹಾಶ್ರೀಚಕ್ರ ನವಾವರಣ ಪೂಜೆ, ತತ್ಸಂಬಂ ನವಾವರಣ ಕೃತಿಗಳ ಆಲಾಪನೆ, ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಇವರಿಂದ ‘ನಾದಮಾಧುರಿ’ ಎಂಬ ಸಂಗೀತಸೇವೆ ಏರ್ಪಡಲಿದೆ. ಇದಕ್ಕೂ ಎಡನೀರು ಮಠಾಧೀಶರು ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿ ಇರಲಿದೆ.
ದಿನಾಂಕ 27 ಡಿಸೆಂಬರ್ 2025ರಂದು ಸಂಸ್ಥೆಯ ವಿದ್ಯಾರ್ಥಿ ಕಲಾವಿದರಿಂದ ‘ರಸಿಕಪ್ರಿಯ’ ಎಂಬ ಹೆಸರಿನಲ್ಲಿ ಹಾಡುಗಾರಿಕೆಯ ಕಛೇರಿಗಳು, ತಂತ್ರಿವರ್ಯರಾದ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಪೈರುವುಣಿ ಇವರಿಗೆ ಗುರುಪೂಜೆ, ದೆಹಲಿಯ ಸ್ವರಾಂಜಲಿ ಸಂಸ್ಥೆಯ ನಿವೇದಿತಾ ಭಟ್ಟಾಚಾರ್ಜಿ ಹಾಗೂ ತಂಡದಿಂದ ಹಿಂದೂಸ್ವಾನೀ ಸಂಗೀತ ಕಛೇರಿ ಹಾಗೂ ಬೆಂಗಳೂರಿನ ವಿದುಷಿ ಅನುಷಾ ಇವರಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ.
ದಿನಾಂಕ 28 ಡಿಸೆಂಬರ್ 2025ರಂದು ಮುಂಜಾನೆ ಯೋಗ ಕಾರ್ಯಕ್ರಮ, ತ್ಯಾಗರಾಜರ ಪಂಚರತ್ನ ಕೃತಿಗಳ ಹಾಡುಗಾರಿಕೆ, ವಿದ್ಯಾರ್ಥಿಗಳಿಂದ ನಾದೋಪಾಸನಾ ಸಂಗೀತಾರ್ಚನೆ ಮತ್ತು ವಾಗ್ಗೇಯಕಾರ ಡಾ. ಎಂ. ಬಾಲಮುರಳಿಕೃಷ್ಣ ಇವರಿಗೆ ಗೌರವಪೂರ್ವಕವಾಗಿ ‘ಮುರಳೀರವಂ’ ಎಂಬ ಸಂಗೀತ ಕಾರ್ಯಕ್ರಮ ನಡೆಯಲಿವೆ. ಸಂಜೆ 4-30ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವರ್ಷದ ‘ವೀಣಾವಾದಿನಿ ಪುರಸ್ಕಾರ’ವನ್ನು ವಯಲಿನ್ ಕಲಾವಿದ ಎಡಪಳ್ಳಿ ಅಜಿತ್ ಕುಮಾರ್ ಮತ್ತು ಹಿರಿಯ ಮೃದಂಗ ಕಲಾವಿದ ಬಾಲಕೃಷ್ಣ ಕಾಮತ್ ಇವರಿಗೆ ನೀಡಲಾಗುತ್ತಿದೆ. ಬಳಿಕ ಮಧುರೈ ಟಿ.ಎನ್.ಎಸ್. ಕೃಷ್ಣ ಇವರಿಂದ ಸಂಗೀತ ಕಛೇರಿಯೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.


