ಬಳ್ಳಾರಿ : ಬಳ್ಳಾರಿಯ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಆಯೋಜಿಸಿದ್ದ ನಾಡೋಜ ಬೆಳಗಲ್ಲು ವೀರಣ್ಣ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 27 ಏಪ್ರಿಲ್ 2025ರ ಭಾನುವಾರ ಸಂಜೆ ಧಾರವಾಡದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಹಾಗೂ ಸಾಹಿತಿಯಾದ ಡಾ. ವಸುಂಧರಾ ಭೂಪತಿ ಮಾತನಾಡಿ “ತೊಗಲು ಗೊಂಬೆ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಕರ್ನಾಟಕ ಸರಕಾರ ಪ್ರಶಸ್ತಿ ಆರಂಭಿಸಬೇಕು. ಅಳಿವಿನಂಚಿನಲ್ಲಿರುವ ತೊಗಲುಗೊಂಬೆಯಾಟಕ್ಕೆ ಆಧುನಿಕ ಸ್ಪರ್ಶ ನೀಡಿ ದೇಶ ವಿದೇಶಗಳಲ್ಲಿ ತಮ್ಮ ಮೇಳದ ಮೂಲಕ ಪ್ರದರ್ಶನ ನೀಡಿರುವ ಇವರ ಜೀವನ, ಜಾನಪದ ಮತ್ತು ರಂಗಭೂಮಿಯ ಕೊಡುಗೆಯನ್ನು ಪಠ್ಯದಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಐದು ದಶಕಗಳಕಾಲ ವಾಸವಿದ್ದ ನಿವಾಸದ ಸಮೀಪದ ರೇಡಿಯೋ ಪಾರ್ಕ್ ರಸ್ತೆಗೆ ನಾಡೋಜ ಬೆಳಗಲ್ಲು ವೀರಣ್ಣ ಹೆಸರಿಡಬೇಕು ಎಂದು ಮಹಾನಗರ ಪಾಲಿಕೆಗೆ ಮನವಿ ಮಾಡಿದರು. ನಾಡೋಜ ಬೆಳಗಲ್ಲು ವೀರಣ್ಣ ಮತ್ತು ಸಂಡೂರಿನ ನಾಡೋಜ ಡಾ. ವಿ. ಟಿ. ಕಾಳೆ ಅಖಂಡ ಬಳ್ಳಾರಿ ಜಿಲ್ಲೆಯ ಕಲಾ ಕ್ಷೇತ್ರದ ದಿಗ್ಗಜರು. ಇವರಿಬ್ಬರೂ ಬಸವ ಪ್ರಜ್ಞೆ, ಅಂಬೇಡ್ಕರ್ ಸಮಾನತೆಯನ್ನು ಅಳವಡಿಸಿಕೊಂಡು ತಮ್ಮ ಕ್ಷೇತ್ರಗಳನ್ನು ಶ್ರೀಮಂತ ಗೊಳಿಸಿದವರು. ಬಸವ ಜಯಂತಿ ಸಂದರ್ಭದಲ್ಲಿ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಹೆಸರಾಂತ ಚಿತ್ರ ಕಲಾವಿದ ಡಾ. ವಿ. ಟಿ. ಕಾಳೆ ಇವರಿಗೆ ಲಭಿಸುತ್ತಿರುವುದು ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ಹರುಷ, ಹೆಮ್ಮೆ ತಂದಿದೆ ಎಂದರು.
ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತ ಜಂಗಮಶೆಟ್ಟಿ ಮಾತನಾಡಿ “ಅಖಂಡ ಬಳ್ಳಾರಿ ಜಿಲ್ಲೆ ರಂಗಭೂಮಿಯ ತವರೂರು. ಇಲ್ಲಿಕಾಣುವಷ್ಟು ನಾಟಕ ಪ್ರದರ್ಶನ, ರಂಗ ಕಲಾವಿದರು ಬೇರೆಲ್ಲೂ ಕಾಣಸಿಗುವುದಿಲ್ಲ. ನಾಡೋಜ ಬೆಳಗಲ್ಲು ವೀರಣ್ಣ ಅವರು ಬದುಕಿದ್ದರೆ 2030ಕ್ಕೆ ಶತಾಯುಷಿಗಳಾಗುತ್ತಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ವೀರಣ್ಣ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ನಾಡಿನ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಬೆಳಗಲ್ಲು ವೀರಣ್ಣ ಅವರ ಕುರಿತು ಮಹಾ ಪ್ರಬಂಧ (ಪಿ.ಎಚ್. ಡಿ.)ಗಳನ್ನು ರಚಿಸಬೇಕು” ಎಂದರು.
ರಂಗ ಕರ್ಮಿ, ಚಿತ್ರನಟ ಮೈಸೂರು ರಮಾನಂದ ಮಾತನಾಡಿ “ರಂಗಭೂಮಿ ಮತ್ತು ಜಾನಪದ ಕ್ಷೇತ್ರಕ್ಕೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಮರಣೋತ್ತರವಾಗಿ ಬೆಳಗಲ್ಲು ವೀರಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು” ಎಂದು ಒತ್ತಾಯಿಸಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ವಿ. ಟಿ. ಕಾಳೆ ಮಾತನಾಡಿ “ಅಪ್ರತಿಮ ರಂಗ, ಜಾನಪದ ಕಲಾವಿದರಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗಿದೆ. ತೊಗಲುಗೊಂಬೆ ಚಿತ್ರಗಳನ್ನು ಹೇಗೆ ರಚಿಸಬೇಕು ಎಂದು ಕಲಿಸಿದ್ದು ವೀರಣ್ಣ ಅವರು. ಸೌಮ್ಯ, ಸರಳ ಸಜ್ಜನಿಕೆಯ ವೀರಣ್ಣ ಬೌತಿಕವಾಗಿಯಷ್ಟೇ ನಮ್ಮನ್ನು ಅಗಲಿದ್ದಾರೆ. ಅವರ ಕಲಾ ಚೇತನ ಎಂದೆಂದೂ ಅಮರ” ಎಂದರು.
ಕಮ್ಮರಚೇಡು ಸಂಸ್ಥಾನಮಠದ ಶ್ರೀ ಕಲ್ಯಾಣ ಸ್ವಾಮಿಗಳು ಆಶೀರ್ವಚನ ನೀಡಿದರು. ಹಿರಿಯ ರಂಗ ಕಲಾವಿದ ಗಾದಿಗನೂರು ಹಾಲಪ್ಪ ಮಾತನಾಡಿದರು. ಹಿರಿಯ ಸಾಹಿತಿ ಟಿ. ಕೆ. ಗಂಗಾಧರ ಪತ್ತಾರ್ ಮತ್ತು ರಂಗ ಕಲಾವಿದ ಎ. ಎಂ. ಪಿ. ವೀರೇಶ ಸ್ವಾಮಿ ಅವರು ವೀರಣ್ಣ ಅವರ ವ್ಯಕ್ತಿತ್ವ ಪರಿಚಯಿಸುವ ಕವಿತೆಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಉದ್ಯಮಿ ಎಂ. ಜಿ. ಗೌಡ, ರಂಗತೋರಣದ ಪ್ರಭುದೇವ ಕಪ್ಪ ಗಲ್ಲು, ರಂಗ ಸಂಘಟಕ ಮೈಸೂರಿನ ಬಿ. ಎಂ. ರಾಮಚಂದ್ರ, ಕ. ಸಾ. ಪ. ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಟಿ. ಕೊಟ್ರಪ್ಪ, ಬಳ್ಳಾರಿ ಕಲಾವಿದರ ಸಂಘದ ಅಧ್ಯಕ್ಷರಾದ ಯಲ್ಲನಗೌಡ ಶಂಕರಬಂಡೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತರಾದ ಸಿ. ಮಂಜುನಾಥ್, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವೀರಣ್ಣ ಅವರ ಧ್ವನಿಯಲ್ಲಿರುವ ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ ನೆರೆದಿದ್ದ ಸಭಿಕರ ಮೆಚ್ಚುಗೆ ಪಡೆಯಿತು.
ಟ್ರಸ್ಟ್ ನ ಗಗನ್‌ಕುಮಾರ್ ಸ್ವಾಗತಿಸಿ, ಮೇಳದ ಟ್ರಸ್ಟಿ ಬೆಳಗಲ್ಲು ಹನುಮಂತು ಪ್ರಾಸ್ತಾವಿಕವಾಗಿ ಮಾತನಾಡಿ, ಅಧ್ಯಾಪಕಿ ವೀಣಾ ನಿರೂಪಿಸಿ, ರಂಗ ಕಲಾವಿದ ಡಾ. ಗಂಗಾಧರ ದುರ್ಗಂ, ಲಕ್ಷ್ಮೀ ಬೆಳಗಲ್ಲು, ರೇಖಾ ಬೆಳಗಲ್ಲು ನಿರ್ವಹಿಸಿದರು.