ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 05-02-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಧೀಮಹಿ ಮಟ್ಟು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಶ್ರೀಮತಿ ಭಾಗ್ಯಲಕ್ಷ್ಮಿ ಹಾಗೂ ಶ್ರೀ ಪ್ರಸಾದ್ ರಾವ್ ಮಟ್ಟು ದಂಪತಿಗಳ ಸುಪುತ್ರಿಯಾದ ವಿದುಷಿ ಕು. ಧೀಮಹಿ ನೃತ್ಯನಿಕೇತನ ಕೊಡವೂರು (ರಿ)ನ ನಿರ್ದೇಶಕರಾದ ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರಿಂದ ಕಳೆದ ಇಪ್ಪತ್ತು ವರ್ಷಗಳಿಂದ ನೃತ್ಯಾಭ್ಯಾಸವನ್ನು ಪಡೆಯುತ್ತಿದ್ದಾಳೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನ ಪಡೆದಿರುವ ಈಕೆ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುತ್ತಾಳೆ.
2017ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳೂಂದಿಗೆ ಉತ್ತೀರ್ಣಳಾಗಿದ್ದಾಳೆ. ಸಂಸ್ಥೆಯ ಮೂಲಕ ದೇಶದಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ಶಬರಿ, ಚಿತ್ರ ಮೊದಲಾದ ನೃತ್ಯ ನಾಟಕಗಳಲ್ಲಿ ಪಾತ್ರವಹಿಸಿದ್ದಾಳೆ. ಗುರು ನಿರುಪಮಾ ರಾಜೇಂದ್ರ ಅವರಿಂದ ದೇಶೀ- ಮಾರ್ಗ ಅಡವುಗಳ ತರಬೇತಿಯನ್ನು ಪಡೆದಿದ್ದಾಳೆ.
ರಥಬೀದಿ ಗೆಳೆಯರು (ರಿ) ಉಡುಪಿ ಹಾಗೂ ಸಂಗಮ ಕಲಾವಿದೆರ್ (ರಿ) ಮಣಿಪಾಲ ಇವರ ಹಲವು ನಾಟಕಗಳಲ್ಲಿ ಅಭಿನಯಿಸಿರುತ್ತಾಳೆ. ನೃತ್ಯ ಹಾಗೂ ನಾಟಕಾಭಿನಯದೊಂದಿಗೆ ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಿ ಬೆಳೆಸಿಕೊಂಡಿರುವ ಈಕೆ ಪ್ರಸ್ತುತ ಬೆಂಗಳೂರಿನ ಗುರು ನಿರ್ಮಲಾ ಬೆಳವಳ್ಳಿ ಅವರಿಂದ ಹಿಂದೂಸ್ತಾನಿ ಸಂಗೀತವನ್ನು ಕಲಿಯುತ್ತಿದ್ದಾಳೆ. ಪ್ರಸ್ತುತ, ಬೆಂಗಳೂರಿನ ಜೆ.ಎನ್.ಸಿ.ಎ.ಎಸ್.ಆರ್. ನ ಮಟೀರಿಯಲ್ ಸೈನ್ಸ್ ವಿಭಾಗದಲ್ಲಿ ಪಿ.ಎಚ್.ಡಿ. ಪದವಿಗೆ ಸಂಶೋಧನೆ ನಡೆಸುತ್ತಿದ್ದಾಳೆ.