ಉಡುಪಿ : ಯಕ್ಷ ಆರಾಧನಾ ಕಿದಿಯೂರು ಟ್ರಸ್ಟಿನ ಪ್ರಥಮ ವಾರ್ಷಿಕೋತ್ಸವವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ದಿನಾಂಕ 28-05-2023 ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ವಿದ್ವಾನ್ ಗಣಪತಿ ಭಟ್ ಅವರಿಗೆ ‘ಯಕ್ಷ ಆರಾಧನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಯವರು “ಯಕ್ಷಗಾನ ಅನಕ್ಷರಸ್ಥರಿಗೂ ನಮ್ಮ ಪುರಾಣಗಳ ಬಗ್ಗೆ ತಿಳಿಸಿ ಅವರಲ್ಲಿ ಅಧ್ಯಾತ್ಮಿಕ ಜಾಗೃತಿ ಮೂಡಿಸಿದೆ. ಯಕ್ಷಗಾನದಂತಹ ಕಲೆಗಳು ಬರೀ ಮನೋರಂಜನೆಗೆ ಮಾತ್ರವಲ್ಲ, ಸಮಾಜಕ್ಕೂ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿವೆ. ಈ ಜಾನಪದ ಕಲೆಗಳು ಸಂಸ್ಕಾರ, ನೀತಿವಂತ ಸಮಾಜವನ್ನು ನಿರ್ಮಿಸಿವೆ. ಎಲ್ಲಾ ಕಲೆಗಳನ್ನು ಮೇಳೈಸಿಕೊಂಡಿರುವ ಯಕ್ಷಗಾನಕ್ಕೆ ಇಂದು ರಾಜಾಶ್ರಯ ತಪ್ಪಿದರೂ, ಸಮಾಜ, ಮಠ ಮಂದಿರಗಳ ಪ್ರೋತ್ಸಾಹದಲ್ಲಿ ಬೆಳೆಯುತ್ತಿದೆ. ಆಧುನಿಕತೆಯ ಪ್ರಭಾವದಲ್ಲಿ ಈ ಕಲೆ ತನ್ನ ನೈಜತೆಯನ್ನು ಕಳೆದುಕೊಂಡು ವಿಕಾರವಾಗಬಾರದು. ಈ ಪ್ರಜ್ಞೆ ಕಲಾವಿದರಲ್ಲಿರಬೇಕು” ಎಂದು ಅವರು ಮಾರ್ಮಿಕವಾಗಿ ನುಡಿದರು.
ಅಭ್ಯಾಗತರಾಗಿ ಆಗಮಿಸಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ, ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ “ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಟ್ರಸ್ಟನ್ನು ಹುಟ್ಟು ಹಾಕಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ ಅಂಬಲಪಾಡಿಯ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕೆ.ಜೆ.ಗಣೇಶ್ ಮತ್ತು ಸಹೋದರರ ಯಕ್ಷ ಸೇವೆ ಸ್ತುತ್ಯಾರ್ಹ. ಯಕ್ಷಗಾನದಂತಹ ಕಲೆಗಳು ಉಳಿಯಬೇಕಾದರೆ ಪ್ರೇಕ್ಷಕರು ಅತ್ಯಗತ್ಯ. ಹೀಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ನೀಡಿದರೆ ಭವಿಷ್ಯದಲ್ಲಿ ಅವರು ಉತ್ತಮ ಕಲಾವಿದರಾಗಬಹುದು ಅಥವಾ ಉತ್ತಮ ಪ್ರೇಕ್ಷಕರೂ ಆಗಬಲ್ಲರು. ಅಲ್ಲದೆ ಯಕ್ಷಗಾನವನ್ನು ಅಭ್ಯಾಸಿಸಿದ ಮಕ್ಕಳು ಶಿಕ್ಷಣದಲ್ಲಿಯೂ ಅತ್ಯುತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡಿರುವುದು ಕಂಡು ಬಂದಿದೆ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡಲು ಹಿಂಜರಿಯಬಾರದು. ಈ ಕಲೆ ನಮ್ಮ ಪೌರಾಣಿಕ ಕಥಾ ಪ್ರಸಂಗಗಳ ಬಗ್ಗೆ ಅರಿವು ಮೂಡಿಸುವುದಲ್ಲದೆ ಉತ್ತಮ ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಕೆ.ಜೆ.ಗಣೇಶ್ ಸೇರಿದಂತೆ ತ್ರಿವಳಿ ಸಹೋದರರು ಯಕ್ಷಗಾನಕ್ಕೆ ನೀಡುತ್ತಿರುವ ಕೊಡುಗೆ ಅಭಿನಂದನೀಯ” ಎಂದು ಹೇಳಿದರು.
ಶುಭಾಶಂಸನೆಗೈದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ ಅವರು, “ಯಕ್ಷಗಾನ ಒಂದು ಕಲೆಯಷ್ಟೇ ಅಲ್ಲ, ಅದೊಂದು ಥೆರಪಿ ಕೂಡಾ ಹೌದು. ಇದು ಶಾರೀರಿಕವಾಗಿ, ಮಾನಸಿಕವಾಗಿ ಹಾಗೂ ಅಧ್ಯಾತ್ಮಿಕವಾಗಿಯೂ ಮಕ್ಕಳನ್ನು ಸದೃಢಗೊಳಿಸುತ್ತದೆ. ನಮ್ಮೆಲ್ಲಾ ಕಾಯಿಲೆಗಳಿಗೆ ಬಹುತೇಕ ಕಾರಣ, ನಾವು ಕೂರುವ, ನಿಲ್ಲುವ, ನಡೆಯುವ ಭಂಗಿ ಸರಿಯಾಗಿಲ್ಲದಿರುವುದು. ಯಕ್ಷ ಶಿಕ್ಷಣ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬುದನ್ನು ಒಬ್ಬ ವೈದ್ಯನಾಗಿಯೂ ಕಂಡುಕೊಂಡಿದ್ದೇನೆ. ಮುಂದೆ ಇನ್ನಷ್ಟು ಅಧ್ಯಯನ ನಡೆಯಬಹುದು. ಒಟ್ಟಾರೆ ಕೆ.ಜೆ. ಗಣೇಶ್ ಸಹೋದರರು ನಡೆಸುತ್ತಿರುವ ಈ ಅಭಿಯಾನಕ್ಕೆ ಸಮಾಜ ಪ್ರೋತ್ಸಾಹ ನೀಡುವುದು ಅತ್ಯಗತ್ಯ” ಎಂದರು.
ಕಾರ್ಯಕ್ರಮದಲ್ಲಿ ಭಾಗವತ ಕೆ.ಜೆ.ಗಣೇಶ್ ಅವರ ಗುರು ವಿದ್ವಾನ್ ಗಣಪತಿ ಭಟ್ ಅವರಿಗೆ ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್ ಕೊಡಮಾಡುವ ಪ್ರಥಮ ಪುರಸ್ಕಾರವನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಸಿದ್ಧ ಸ್ತ್ರಿ ವೇಷಧಾರಿ ಎಂ.ಕೆ.ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಗಂಗಾಧರ ಆಚಾರ್ಯ, ಅಂಬಲಪಾಡಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಬಿ.ಕೆ.ಸೋಮನಾಥ, ಕಲಾ ಪ್ರೋತ್ಸಾಹಕ ಜಿ.ಟಿ.ಆಚಾರ್ಯ ಮುಂಬಾಯಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.