ಮಂಗಳೂರು : ಸ್ವರ ಲಯ ಸಾಧನ ಫೌಂಡೇಶನ್, ಕಲಾ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಆಶ್ರಯದಲ್ಲಿ ಆಯೋಜಿಸಿರುವ ‘ಸ್ವರ ಸಂಕ್ರಾಂತಿ ಉತ್ಸವ-24’ ಇದರ ಅಂಗವಾಗಿ ಸಂಗೀತ ಕಛೇರಿಯು ದಿನಾಂಕ 15-01-2024ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ನಿಡಸೊಸಿ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನದ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಅವರು, “ಸ್ವರ ಸಂಕ್ರಾಂತಿ ಉತ್ತಮ ಪರಿಕಲ್ಪನೆ ಅದ್ಭುತವಾಗಿ ಮೂಡಿಬಂದಿದೆ. ಈ ಮೂಲಕ ಸಂಸ್ಕೃತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಂಗೀತದ ಮೂಲಕ ಮಕ್ಕಳನ್ನು ಭವಿಷ್ಯಕ್ಕೆ ಅಣಿಯಾಗಿಸುತ್ತಿರುವ ಕಾರ್ಯ ಶ್ಲಾಘನೀಯ” ಎಂದರು.
ಈ ಸಮಾರಂಭದಲ್ಲಿ ‘ಸ್ವರ ರತ್ನ ಪ್ರಶಸ್ತಿ’ ಸ್ವೀಕರಿಸಿದ ವಿದ್ವಾನ್ ವಿಟ್ಠಲ ರಾಮಮೂರ್ತಿ ಮಾತನಾಡುತ್ತಾ “ಸಂಗೀತ ಎಲ್ಲಾ ಮನಸ್ಸುಗಳಿಗೆ ಮುದ ನೀಡುತ್ತದೆ. ಸಂಗೀತಕ್ಕೆ ಮಕ್ಕಳನ್ನು ಸೆಳೆಯುವಂತೆ ಮಾಡಬೇಕು. ಸಂಗೀತ ಅಭ್ಯಾಸ ಮಾಡುವುದರಲ್ಲಿ ತೃಪ್ತಿ ಇದೆ. ಇಂದಿನ ಪೀಳಿಗೆ ಸಂಗೀತ ಕಲಿಯುವತ್ತ ಹೆಚ್ಚು ಆಕರ್ಷಿತರಾಗಬೇಕು. ಸಂಗೀತ ಪಯಣ ಆನಂದಿಸುವುದರ ಜತೆಗೆ ಹೊಸತನದೊಂದಿಗೆ ಮುಂದುವರೆಯಬೇಕು. ಆಧುನಿಕತೆ ಬೆಳೆಯುತ್ತಿರುವಂತೆ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಅಭ್ಯಾಸವನ್ನು ಕೈಗೊಳ್ಳಬೇಕು. ಸಂಗೀತ ಕೇವಲ ಕಲಿಯುವುದು ಮಾತ್ರವಲ್ಲದೆ, ಆನಂದಿಸುವುದು ಅಗತ್ಯ. ಶ್ರಮವಹಿಸಿ ಒಳ್ಳೆಯ ಗುರುಗಳಲ್ಲಿ ಸಂಗೀತ ಕಲಿತಲ್ಲಿ ಸರ್ವತೋಮುಖ ಪ್ರಗತಿಯಾಗಲಿದೆ. ಮುಂದಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸಂಗೀತಕ್ಕೆ ಸಂಬಂಧಿಸಿ ಉನ್ನತ ಶಿಕ್ಷಣದ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ” ಎಂದು ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, “ಮಂಗಳೂರಿನ ಮಕ್ಕಳಿಗೆ ಸಂಗೀತ ಅಭ್ಯಾಸ ಮಾಡಲು ಅನೇಕ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸಂಗೀತದತ್ತ ಸೆಳೆಯಲು ಪ್ರೋತ್ಸಾಹ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳು ಕೂಡ ಸಂಗೀತ ಕಲಿಯಲು ಆಸಕ್ತಿ ತೋರಿಸಬೇಕಾಗಿದೆ. ಸ್ವರ ಸಂಕ್ರಾಂತಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ” ಎಂದರು.
ಆಳ್ವಾಸ್ ಶಿಕ್ಷಣ ಪತ್ರಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಮಾತನಾಡಿ, “ಶಾಸ್ತ್ರೀಯ ಸಂಗೀತ ಸಹಿತ ಇತರ ಸಂಗೀತ ದೇಶದ ಸಂಪತ್ತು. ದೇಶದಲ್ಲಿ ವಿದ್ಯಾರ್ಥಿಗಳೇ ಅತ್ಯಧಿಕ ಸಂಖ್ಯೆಯಲ್ಲಿದ್ದು, ಸಂಗೀತ ಕಲಿಯುವತ್ತ ಒಲವು ಹೊಂದಬೇಕು. ಪೋಷಕರು ಇವರಿಗೆ ಸೂಕ್ತ ಸಲಹೆಯೊಂದಿಗೆ ಪ್ರೋತ್ಸಾಹ ನೀಡಬೇಕು. ಮೌಲ್ಯಗಳೊಂದಿಗೆ ಸಂಗೀತವನ್ನು ಮೈಗೂಡಿಸಿಕೊಳ್ಳುವುದರಿಂದ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ” ಎಂದರು.
ಈ ಸಮಾರಂಭದಲ್ಲಿ ಜಿಲ್ಲೆಯ ಹೆಮ್ಮೆಯ ವಯಲಿನ್ ಕಲಾವಿದ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಸಾಧಕ ವಿದ್ವಾನ್ ವಿಟ್ಠಲ ರಾಮಮೂರ್ತಿಯವರಿಗೆ ಅವರ ಜೀವಮಾನದ ಸಂಗೀತ ಸೇವೆಯನ್ನು ಪರಿಗಣಿಸಿ ಈ ಬಾರಿಯ ‘ಸ್ವರ ರತ್ನ ಪ್ರಶಸ್ತಿ’ ಮತ್ತು ಕರಾವಳಿ ಕರ್ನಾಟಕದ ಮೂವರು ಹಿರಿಯ ಸಂಗೀತ ಗುರುಗಳಾದ ವಿದ್ವಾನ್ ನಾಗೇಶ್ ಎ. ಬಪ್ಪನಾಡು, ವಿದುಷಿ ಪ್ರತಿಭಾ ಎಂ.ಎಲ್. ಸಾಮಗ ಹಾಗೂ ವಿದ್ವಾನ್ ಯು.ಜಿ. ನಾರಾಯಣ ಶರ್ಮ ಕುಂಬ್ಳೆ ಇವರುಗಳಿಗೆ ‘ಸ್ವರ ಸಾಧನ ಪ್ರಶಸ್ತಿ-24’ ನೀಡಿ ಗೌರವಿಸಲಾಯಿತು. ‘ಸ್ವರ ರತ್ನ’ ಪುರಸ್ಕೃತ ವಿದ್ವಾನ್ ವಿಟ್ಠಲ ರಾಮಮೂರ್ತಿಯವರನ್ನು ಶ್ರೀಕೃಷ್ಣ ನೀರಮೂಲೆ ಸಭೆಗೆ ಪರಿಚಯಿಸಿದರು.
ಮಧ್ಯಾಹ್ನ ಗಂಟೆ 2ರಿಂದ ಸ್ವರಾಲಯ ಬಳಗದ ವಿದ್ಯಾರ್ಥಿಗಳಿಂದ ಅತ್ಯಪೂರ್ವವಾದ ವಯಲಿನ್ ಕಛೇರಿ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಚೆನೈಯ ವಿಶ್ವ ವಿಖ್ಯಾತ ವಯಲಿನ್ ಕಲಾವಿದ ಸಹೋದರರಾದ ವಿದ್ವಾನ್ ಗಣೇಶ್ ರಾಜಗೋಪಾಲನ್ ಮತ್ತು ವಿದ್ವಾನ್ ಕುಮಾರೇಶ್ ರಾಜಗೋಪಾಲನ್ ಇವರಿಂದ ನಡೆದ ದ್ವಂದ್ವ ವಯಲಿನ್ ಕಛೇರಿಗೆ ವಿದ್ವಾನ್ ಅನಂತ ಆರ್. ಕೃಷ್ಣನ್ ಮೃದಂಗದಲ್ಲಿ ಹಾಗೂ ವಿದ್ವಾನ್ ಸುಂದರ ಕುಮಾರ್ ಖಂಜೀರದಲ್ಲಿ ಸಾಥ್ ನೀಡಿದರು.
ಟ್ರಸ್ಟಿ ಶ್ರೇಷ್ಠಲಕ್ಷ್ಮೀ, ವಿ. ಪನ್ನಗ ಶರ್ಮಾ, ಸುಹಾಸ್, ರಜಾಕ್ ಪೈಯನ್ನೂರು, ವಿದುಷಿ ವಾಣಿ ಪ್ರಮೋದ್, ವಿದುಷಿ ರಶ್ಮಿ ಶ್ರೀನಿವಾಸ್ ಉಪಸ್ಥಿತರಿದ್ದರು. ಪ್ರೊ. ರಮೇಶ್ ಕೆ.ಜಿ. ಸ್ವಾಗತಿಸಿ, ಸ್ವರಾಲಯದ ಸಂಸ್ಥಾಪಕ ವಿಶ್ವಾಸ್ ಕೃಷ್ಣ ವಂದಿಸಿ, ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.