ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಕೊಂಕಣಿಯನ್ನು ಉಳಿಸಿ, ಬೆಳೆಸಿ, ಶೃಂಗರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ತನ್ನ ಧ್ಯೇಯವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಪ್ರತಿಭಾ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದು ಈ ಸಾಲಿನ ನವದಿನಗಳ ವೋಪ್ (ಒಪ್ಪ) ಶಿಬಿರದ ಉದ್ಘಾಟನೆ 27-04-24 ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು.
ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ಈ ಶಿಬಿರಕ್ಕೆ ಮಾನ್ಯತೆ ದೊರೆತ ಈ ಶಿಬಿರವನ್ನು ಗಾಯಕ ಮತ್ತು ಸಂಗೀತಗಾರ ರಿತೇಶ್ ಒಝೇರಿಯೊ ಮಣ್ಣಿನ ಮೂರ್ತಿಗೆ ಚಿನ್ನದ ಬಣ್ಣ ಬಳಿದು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು. ಪ್ರಸಿದ್ಧ ನಾಟಕಕಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಮುಖ್ಯ ಅತಿಥಿಯಾಗಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಡಲಾಯಿತು. ಅಧ್ಯಕ್ಷ ಲುವಿ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರುಣ್ ರಾಜ್ ರೊಡ್ರಿಗಸ್ ಪ್ರಸ್ತಾವಿಕವಾಗಿ ಮಾತನಾಡಿ, ಶಿಬಿರ ವ್ಯವಸ್ಥಾಪಕ ವಿಕ್ಟರ್ ಮತಾಯಸ್ ಶಿಬಿರದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಕೇರನ್ ಮಾಡ್ತಾ ನಿರೂಪಿಸಿದರು.
ಈ ಶಿಬಿರದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ 31 ಹೆಣ್ಮಕ್ಕಳು ಮತ್ತು 27 ಗಂಡು ಮಕ್ಕಳು ಒಟ್ಟು 58 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದು, ನೃತ್ಯ , ನಾಟಕ, ಗಾಯನ, ಕೊಂಕಣಿ ಭಾಷೆ-ಸಂಸ್ಕೃತಿ, ಭಾಷಣ, ಟಿವಿ ಕಾರ್ಯಕ್ರಮ ನಿರೂಪಣೆ ಬಗ್ಗೆ ತರಗತಿಗಳು ನಡೆಯಲಿವೆ. ಶಿಬಿರಾರ್ಥಿಗಳ ಪ್ರತಿಭಾ ಪ್ರದರ್ಶನವು ಮೇ 5 ರಂದು ನಡೆಯುವ 269ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ನಡೆಯಲಿದೆ.
1999 ರಿಂದ ಈ ಶಿಬಿರಗಳು ನಡೆಯುತ್ತಿದ್ದು ತಮ್ಮ ಪ್ರತಿಭೆಗಳಿಗೆ ಸಾಣೆ ಹಿಡಿದ ಸಾವಿರಾರು ಶಿಬಿರಾರ್ಥಿಗಳು ಸಾಂಸ್ಕೃತಿಕ ಲೋಕದಲ್ಲಿ ಮೆರೆಯುತ್ತಿದ್ದಾರೆ.