ಬೆಂಗಳೂರು : ಸಂಚಾರಿ ಥಿಯೇಟರ್ ಇದರ ವತಿಯಿಂದ 20 ವರ್ಷದ ರಂಗ ಸಂಭ್ರಮದ ಪ್ರಯುಕ್ತ ಆರು ತಿಂಗಳ ವಾರಾಂತ್ಯ ‘ಅಭಿನಯ ತರಗತಿಗಳು’ ದಿನಾಂಕ 19 ಅಕ್ಟೋಬರ್ 2024ರಿಂದ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಸಂಚಾರಿ ಥಿಯೇಟರ್ ಎಂಟಿಸ್ಪೇಸಿನಲ್ಲಿ ಪ್ರಾರಂಭವಾಗಲಿವೆ. ಹೆಚ್ಚಿನ ಮಾಹಿತಿಗಾಗಿ 8884345569, 8971186882, 9844115903 ಮತ್ತು 9611234993 ಸಂಪರ್ಕಿಸಿರಿ.
ಸಂಚಾರಿ ಥಿಯೇಟರ್ : 2004ರಲ್ಲಿ ಅಸ್ತಿತ್ವಕ್ಕೆ ಬಂದ ಸಂಚಾರಿ ಥಿಯೇಟರ್, ಬೆಂಗಳೂರಿನ ಪ್ರಮುಖ ರಂಗ ಸಂಸ್ಥೆಗಳಲ್ಲಿ ಒಂದು. ನಾಟಕಗಳು, ಅಭಿನಯ ಕಾರ್ಯಾಗಾರಗಳು, ನೇಪಥ್ಯ ಹಾಗೂ ರಂಗ ಸಂಗೀತ ಕುರಿತ ಶಿಬಿರಗಳನ್ನು ಪ್ರತಿವರ್ಷ ನಡೆಸುತ್ತಾ ಬಂದಿರುವ ಸಂಚಾರಿ ಥಿಯೇಟರ್ ಮಕ್ಕಳ ರಂಗಭೂಮಿ ಕುರಿತಂತೆ ನಿರಂತರವಾಗಿ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಾಹಿತ್ಯಿಕ ಚಟುವಟಿಕೆಗಳು ಮತ್ತು ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವ ರಂಗ ಪ್ರಯೋಗಗಳೊಂದಿಗೆ ಯುವಕರನ್ನು ರಂಗಭೂಮಿಗೆ ಕರೆತರುವ ನಿಟ್ಟಿನಲ್ಲಿ “ಪೂರ್ವರಂಗ” ಅಭಿನಯ ಕಾರ್ಯಾಗಾರವನ್ನು ಪ್ರತಿವರ್ಷ ನಡೆಸುತ್ತಾ ಬಂದಿದೆ. ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇರುವ ಉತ್ಸಾಹಿ, ಪ್ರತಿಭಾವಂತ ಯುವಕರ ತಂಡವನ್ನು ಹೊಂದಿರುವ ಸಂಚಾರಿ ಥಿಯೇಟರ್ ತಾನು ಅಸ್ತಿತ್ವಕ್ಕೆ ಬಂದಂದಿನಿಂದ ಸೃಜನಶೀಲ, ಸಾಂಸ್ಕೃತಿಕ ಹಾಗೂ ಆರೋಗ್ಯವಂತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಕನ್ನಡ ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳನ್ನು ಸಂಚಾರಿ ಥಿಯೇಟರ್ ತನ್ನ ರಂಗ ಪ್ರಯೋಗಕ್ಕೆ ಬಳಸಿಕೊಂಡಿದೆ. ಸುಮಾರು 29 ನಾಟಕಗಳನ್ನು ರಂಗದ ಮೇಲೆ ತಂದಿದೆ. ಅವುಗಳಲ್ಲಿ ಮುಖ್ಯವಾದವು ಊರ್ಮಿಳಾ, ಧರೆಯೊಳಗಿನ ರಾಜಕಾರಣ, ಅರಹಂತ, ಕಮಲಮಣಿ ಕಾಮಿಡಿ ಕಲ್ಯಾಣಿ, ನರಿಗಳಿಗೇಕೆ ಕೋಡಿಲ್ಲ ? ಹೀಗೆರಡು ಕತೆಗಳು, ವೈದೇಹಿಯವರ ಕವನಗಳ ರಂಗಪ್ರಯೋಗ “ವ್ಯಾನಿಟಿ ಬ್ಯಾಗ್”, ಪಿನೋಕಿಯೋ, ಮಿಸ್ ಅಂಡರ್ ಸ್ಟ್ಯಾಂಡಿಂಗ್, ವೆನಿಸ್ಸಿನ ವ್ಯಾಪಾರ, ರಂಗ ಜಂಗಮ, ಕೈಲಾಸಂ ಕೀಚಕ ಮುಂತಾದ ನಾಟಕಗಳನ್ನು ರಂಗದ ಮೇಲೆ ಯಶಸ್ವಿಯಾಗಿ ತಂದಿದೆ.