ಮಂಗಳೂರು : ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ 50 ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಚಾಲನೆ ದೊರೆತಿದ್ದ ಕರ್ನಾಟಕ ಸುವರ್ಣ ಸಂಭ್ರಮ – 50 ರಥಯಾತ್ರೆಯು ದಿನಾಂಕ 3 ಅಕ್ಟೋಬರ್ 2024ರ ಗುರುವಾರದಂದು ಮಂಗಳೂರು ನಗರಕ್ಕೆ ಆಗಮಿಸಿತು.
ಚಿಕ್ಕಮಗಳೂರಿನಿಂದ ಬೆಳ್ತಂಗಡಿ ತಾಲೂಕಿನ ಮೂಲಕ ಜಿಲ್ಲೆಗೆ ಆಗಮಿಸಿದ ರಥ ಕಡಬ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ಮೂಲಕ ಮಂಗಳೂರು ತಾಲೂಕು ಪ್ರವೇಶಿಸಿದ್ದು, ಶುಕ್ರವಾರ ಮೂಡುಬಿದಿರೆ ತಾಲೂಕಿನ ಮೂಲಕ ಕಾರ್ಕಳ ತಾಲೂಕಿನ ಮೂಲಕ ಉಡುಪಿ ಜಿಲ್ಲೆಯ ಪ್ರವೇಶಿಸಲಿದೆ. ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಥಕ್ಕೆ ಪುರಭವನದ ಆವರಣದಲ್ಲಿ ಸರಳವಾಗಿ ಸ್ವಾಗತ ಕೋರಲಾಯಿತು. ನೀತಿಸಂಹಿತೆ ಹಿನ್ನೆಲೆಯಲ್ಲಿ ರಥದ ತಾಲೂಕು ಸಂಚಾರ ಮೆರವಣಿಗೆಗೆ ಅವಕಾಶ ಇರಲಿಲ್ಲ. ರಥವನ್ನು ಕದ್ರಿಯ ಸರಕಾರಿ ಅಧಿತಿಗೃಹದಲ್ಲಿ ನಿಲ್ಲಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ರಥದಲ್ಲಿರುವ ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್, ಮಂಗಳೂರು ನಗರ ಪೊಲೀಸ್ ಅಧೀಕ್ಷಕ ಯತೀಶ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಮಂಗಳೂರು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹೇಶ್ ಅಂಬೇಕಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಬಿ.ಇ.ಒ. ಜೇಮ್ಸ್ ಕುಟಿನ್ಹೋ, ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ ರೇವಣ್ಕರ್, ಕ.ಸಾ.ಪ. ರಾಜ್ಯ ಮಾರ್ಗದರ್ಶಿ ಸಮಿತಿ ಸದಸ್ಯ ಮುರಲೀ ಮೋಹನ ಚೂಂತಾರು, ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಸಾಹಿತಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.