ಸುಮಾರು ನಾಲ್ಕು ದಶಕಗಳಿಂದ ಕರಾವಳಿ ಕರ್ನಾಟಕದಲ್ಲಿ ತುಳು, ಕನ್ನಡ, ಕೊಂಕಣಿ -ಈ ಮೂರೂ ಭಾಷೆಗಳಲ್ಲಿ ಕೃಷಿ ಮಾಡುತ್ತ ಬಂದವರು ಕ್ಯಾಥರಿನ್ ರೋಡ್ರಿಗಸ್. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿಯಲ್ಲಿ ಜಾನ್ ರೋಡ್ರಿಗಸ್ ಹಾಗೂ ಮಾಗ್ದಲಿನ್ ರೋಡ್ರಿಗಸ್ ಇವರ ಪುತ್ರಿಯಾಗಿ ಜನಿಸಿದ ಕ್ಯಾಥರಿನ್ ಎಳವೆಯಿಂದಲೇ ನಾಟಕ ರಚನೆಯಲ್ಲಿ ತೊಡಗಿದವರು. ಮಂಗಳೂರು ಆಕಾಶವಾಣಿಯಲ್ಲಿ ತುಳು ನಾಟಕಗಳು ಪ್ರಸಾರವಾಗುವಾಗಲೆಲ್ಲ ʻಇದು ಕ್ಯಾಥರಿನ್ ಅವರ ನಾಟಕವೇ ಇರಬೇಕುʼ ಎಂದು ಕೇಳುಗರು ಕುತೂಹಲದಿಂದ ಕೇಳಿ, ಕೊನೆಯಲ್ಲಿ ʻನಾಟಕ ರಚನೆ, ಕ್ಯಾಥರಿನ್ ರೋಡ್ರಿಗಸ್ʼ ಎಂದು ಉದ್ಘೋಷಿಸುವಾಗ ʻನಮ್ಮ ಊಹೆ ಸರಿಯಾಗಿತ್ತುʼ ಎಂದವರೇ ಹೆಚ್ಚು. ಅಷ್ಟರ ಮಟ್ಟಿಗೆ ಅವರ ತುಳು ನಾಟಕಗಳು ಜನಪ್ರಿಯತೆ ಗಳಿಸಿದ್ದುವು.
ನಾಟಕ ಮಾತ್ರವಲ್ಲ, ಕೊಂಕಣಿ ಸಣ್ಣಕಥಾ ರಚನೆಯಲ್ಲೂ ಅವರಿಗೆ ಆಸಕ್ತಿ. ಸ್ನಾತಕೋತ್ತರ ಪದವೀಧರೆಯಾದ ಕ್ಯಾಥರಿನ್ ‘ದಾಯ್ಜ್ ದಂಬಯ್ ಕೊಂಕಣಿ ಕಥಾ ಪ್ರಶಸ್ತಿ’ಯನ್ನು ಮೂರು ಬಾರಿ ಪಡೆದುಕೊಂಡಿದ್ದಾರೆ. ಬೆಹ್ರೈನ್ ದಶಮಾನೋತ್ಸವ ಕಥಾ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದಾರೆ. ಇವಲ್ಲದೆ ಕವನ, ಪ್ರಬಂಧ, ಕಾದಂಬರಿ ಪ್ರಕಾರಗಳಲ್ಲೂ ಅವರು ವ್ಯವಸಾಯ ಮಾಡಿದ್ದಾರೆ.
ಕ್ಯಾಥರಿನ್ ಅವರ ಬಹುಮುಖ್ಯ ಸಾಹಿತ್ಯ ರಚನಾ ಪ್ರಕಾರವೇ ನಾಟಕ. ಅದೂ ಮೂರು ಭಾಷೆಗಳಲ್ಲಿ! ತುಳುವಿನಲ್ಲಿ 56 ನಾಟಕಗಳನ್ನು ರಚಿಸಿದ ಅವರು ಕೊಂಕಣಿಯಲ್ಲಿ ಹನ್ನೊಂದು ನಾಟಕಗಳನ್ನೂ ಕನ್ನಡದಲ್ಲಿ ಎಂಟು ನಾಟಕಗಳನ್ನೂ ರಚಿಸಿದ್ದಾರೆ. ಅವರ ಜಯವಿಜಯ, ಬಂಗಾರ್ದ ದೊಡ್ಡಿ ನಾಟಕಗಳು ಹಲವಾರು ಪ್ರದರ್ಶನಗಳನ್ನು ಕಂಡು ಕ್ಯಾಥರಿನ್ ಅವರ ನಾಟಕ ರಚನಾ ಸಾಮರ್ಥ್ಯವನ್ನು ರುಜುವಾತುಗೊಳಿಸಿದೆ.
ಮಂಗಳೂರು ಆಕಾಶವಾಣಿಯ ಹಲವಾರು ಸಾಹಿತ್ಯ ಸಂಬಂಧೀ ಕಾರ್ಯಕ್ರಮಗಳಲ್ಲಿ ಅವರ ಪರಿಶ್ರಮವಿದೆ. ಅದು ತುಳು ಅಥವಾ ಕೊಂಕಣಿ ರಂಗಭೂಮಿಯ ಕುರಿತಾದ ಚರ್ಚೆಗಳಿರಬಹುದು, ಕವನ, ಕಥಾ ವಾಚನಗಳಿರಬಹುದು, ಇತರ ಸಾಹಿತ್ಯ ಚರ್ಚೆಗಳೇ ಇರಬಹುದು. ಮೂರು ಭಾಷೆಗಳಿಗೂ ಅವರು ಬೇಕಾದವರು. ತ್ರಿಭಾಷೆಗಳ ನಡುವೆ ಅನುವಾದಗಳನ್ನೂ ಅವರು ಮಾಡಿದ್ದಾರೆ.
ಕೇವಲ ಬರವಣಿಗೆಯಷ್ಟೇ ಕ್ಯಾಥರಿನ್ ಅವರ ಬದುಕಲ್ಲ; ಸಮಾಜಸೇವೆಯಲ್ಲೂ ಅವರಿಗೆ ಹೆಸರಿದೆ. ಕರಾವಳಿ ಪ್ರಾಧಿಕಾರದ ಸದಸ್ಯೆಯಾಗಿ, ಸ್ಥಳೀಯ ಚರ್ಚಿನ ಸದಸ್ಯೆಯಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಅವರು ಸೇವೆಗೈದಿದ್ದಾರೆ. ಅವರದು ಸಾಮರಸ್ಯದ ಬದುಕು. ಎಲ್ಲರೊಂದಾಗಿ ಬದುಕು ನಿರ್ವಹಿಸುವ ಕುರಿತ ಆಸಕ್ತಿ ಅವರ ಹಲವಾರು ಕೃತಿಗಳಲ್ಲಿ ವ್ಯಕ್ತವಾಗಿವೆ.
ಕ್ಯಾಥರಿನ್ ಅವರ ಸಾಹಿತ್ಯ ಸೇವೆಯನ್ನು ಗಣಿಸಿ ರಾಜ್ಯದ ಹಾಗೂ ಪರದೇಶದ ಹಲವಾರು ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ದೋಹಾ ಖತಾರ್ನ ಎಂ.ಸಿ.ಎ. ಕೊಡಮಾಡಿದ ಕಲಾ ಪುರಸ್ಕಾರ, ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರತಿಷ್ಠಾನವು ನೀಡಿದ ‘ಸಂದೇಶ ತುಳು ಸಾಹಿತ್ಯ ಪ್ರಶಸ್ತಿ’, ‘ಧರ್ಮಸ್ಥಳ ದಿ. ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ಪುರಸ್ಕಾರ’, ಕೊಂಕಣಿ ಸಾಹಿತ್ಯ ಪರಿಷತ್ ಇದರ ‘ಏಕಾಂಕ ನಾಟಕ ಪುರಸ್ಕಾರ’, ‘ದಿ. ಕಲ್ಪನಾ ತುಳು ನಾಟಕ ರಚನಾ ಪ್ರಶಸ್ತಿ’ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಕ್ಯಾಥರಿನ್ ರೋಡ್ರಿಗಸ್ ಅವರು ಭಾಜನರಾಗಿದ್ದಾರೆ. ಹೆಚ್ಚು ಸದ್ದುಗದ್ದಲಗಳಿಲ್ಲದೆ ತನ್ನ ಪಾಡಿಗೆ ತಾನು ಸಾಹಿತ್ಯ ಕೃಷಿ ಮಾಡುತ್ತಾ ಸಾಗಿದ ಕ್ಯಾಥರಿನ್ ರೋಡ್ರಿಗಸ್ ಅವರಿಗೆ ಇನ್ನಷ್ಟು ಸಾಮಾಜಿಕ ಮನ್ನಣೆ ಪ್ರಾಪ್ತವಾಗಲಿ ಎಂದು ಹಾರೈಸುವೆ.
-ನಾ. ದಾಮೋದರ ಶೆಟ್ಟಿ
ಹಿರಿಯ ಸಾಹಿತಿ ಮತ್ತು ವಿಮರ್ಶಕರು