ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುತ್ತಿರುವ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯ ನಾಟ್ಯ ತರಗತಿಯ ಅಭಿಯಾನದಡಿ ಯಕ್ಷಗಾನ ತರಬೇತುದಾರ ಶಿಕ್ಷಕರಿಗೆ ಬಿ.ಸಿ.ರೋಡ್ ರಂಗೋಲಿ ಹೊಟೇಲಿನಲ್ಲಿ ಯಕ್ಷಗಾನ ಶಿಕ್ಷಣದ ಕಾರ್ಯಾಗಾರ ದಿನಾಂಕ 22-08-2023ರಂದು ನಡೆಯಿತು.
ಯಕ್ಷಗಾನ ಸೂರಿಕುಮೇರು ಗೋವಿಂದ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ತೆಂಕುತಿಟ್ಟು ನಾಟ್ಯ ಪರಂಪರೆ, ತಾಳ ಪ್ರಸ್ತುತಿಯಲ್ಲಿರುವ ಅಭಿಪ್ರಾಯ ಬೇಧವನ್ನು ಪರಿಗಣಿಸಿ ತೆಂಕುತಿಟ್ಟು ಯಕ್ಷಗಾನ ಲೋಕದಲ್ಲಿ ಏಕರೂಪದ ಯಕ್ಷ ಶಿಕ್ಷಣ ಮುಂದಿನ ಪೀಳಿಗೆಗೆ ದೊರಕಬೇಕೆಂಬ ಸದುದ್ದೇಶದಿಂದ ತಯಾರಿಸಿದ ಯಕ್ಷಧ್ರುವ-ಯಕ್ಷ ಶಿಕ್ಷಣದ ಪಠ್ಯದ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಕೈಪಿಡಿ ತಯಾರಿಕೆಯ ಹಂತ ಮತ್ತು ಯಕ್ಷಧ್ರುವ ಯಕ್ಷ ಶಿಕ್ಷಣದ ಧ್ಯೇಯೋದ್ದೇಶಗಳ ಬಗ್ಗೆ ಯಕ್ಷಧ್ರುವ ಯಕ್ಷಶಿಕ್ಷಣದ ನಿರ್ದೇಶಕ ಭಾಗವತ ಪಟ್ಲ ಸತೀಶ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಪ್ರಸಕ್ತ ಯೋಜನೆಯ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಪ್ರಸ್ತಾವನೆಗೈದರು. ಯಕ್ಷಗಾನ ವಿದ್ವಾಂಸರಾದ ಡಾ. ಎಂ.ಪ್ರಭಾಕರ ಜೋಶಿ, ಪ್ರೊ. ಎಂ.ಎಲ್.ಸಾಮಗ, ಯಕ್ಷಗಾನ ಹಿರಿಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ, ಸಂಜಯ್ ಕುಮಾರ್ ಗೋಣಿಬೀಡು, ಉಮೇಶ್ ಶೆಟ್ಟಿ ಉಬರಡ್ಕ, ಶಿವರಾಮ ಜೋಗಿ, ಪದ್ಮನಾಭ ಉಪಾಧ್ಯಾಯ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಪಣಂಬೂರು ವಾಸುದೇವ ಐತಾಳ್ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಕಾರ್ಯಾಗಾರ ನಿರ್ವಹಿಸಿದರು. ಯಕ್ಷ ಶಿಕ್ಷಣದ ಹೊಸ ಕೈಪಿಡಿಯನ್ನು ಯಕ್ಷ ಶಿಕ್ಷಕ ದೀವಿತ್ ಪೆರಾಡಿ ಪರಿಚಯಿಸಿದರು. ಪಠ್ಯ ಪ್ರಾತ್ಯಕ್ಷಿಕೆಯ ಮುಮ್ಮೇಳದಲ್ಲಿ ರಾಕೇಶ್ ರೈ ಅಡ್ಕ, ರಕ್ಷಿತ್ ಶೆಟ್ಟಿ ಪಡ್ರೆ ಹಿಮ್ಮೇಳದಲ್ಲಿ ಪ್ರಸಾದ್ ಚೇರ್ಕಾಡಿ, ರಾಮ್ ಪ್ರಕಾಶ್ ಕಲ್ಲೂರಾಯ, ಯಜೇಶ್ ರೈ ಕಟೀಲು ಭಾಗವಹಿಸಿದ್ದರು. ಸುಮಾರು 25ಕ್ಕೂ ಅಧಿಕ ಯಕ್ಷಗಾನ ಶಿಕ್ಷಕರ ಪಾಲ್ಗೊಳ್ಳುವಿಕೆಯೇ ಈ ಕಾರ್ಯಾಗಾರದ ವಿಶೇಷತೆ.