ಬೆಂಗಳೂರು: ದಿನಾಂಕ 15-04-2023ರಂದು ವಿಶ್ವ ಕಲಾ ದಿನ ಪ್ರಯುಕ್ತ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ “ದಾಕಹವಿಸ” ಎರ್ಪಡಿಸಿದ ಕಲಾ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಶ್ರೀ ವಿ. ಹರಿರಾಮ ಅವರು ಮಾತನಾಡುತ್ತಾ “ನಭದ ನೀಲಿ ಅನಂತವನ್ನು ಸೂಚಿಸಿದರೆ, ಎಲ್ಲವನ್ನೂ ಮೀರಿ ಭಗವಂತ ಅಪ್ರಮೇಯನಾದ. ಹಾಗೆಯೇ ಎಲ್ಲ ಚೌಕಟ್ಟುಗಳನ್ನು ಮೀರಿ ರಚಿಸುವ ಕಲೆಯೇ ಅಮೂರ್ತ ಕಲೆ.” ಎಂದು ತಮ್ಮ ನಿರರ್ಗಳವಾದ ಮಾತಿನಿಂದ ಕಲೆಯ ಬಗ್ಗೆ ತಮಗಿರುವ ಆಳವಾದ ಅಧ್ಯಯನ, ಜ್ಞಾನವನ್ನು ತೆರೆದಿಟ್ಟರು.
ಸೃಷ್ಟಿಯ ಜೊತೆ ಸದಾ ಸ್ಪಂದಿಸುತ್ತ ಜ್ಞಾನವನ್ನು ಬೆಳೆಸಿಕೊಂಡು ಸೃಜನಶೀಲತೆಯೊಂದಿಗೆ ಮನೋವಿಕಾಸದ ಹಾದಿಯೇ ಕಲೆ. ಮೊದಲು ಕ್ಯಾನ್ವಾಸಿನ ಮೇಲೆ ವಿವಿಧ ಬಣ್ಣಗಳನ್ನು ಹರಡಿ ನಂತರ, ನಿರಂತರ, ಅಂತ್ಯವಿಲ್ಲದ ಭಾವನೆಗಳನ್ನು ನೀಡುವ ನೀಲಿ Cobalt ಬಣ್ಣವನ್ನು ಹೆಚ್ಚಿನ ಭಾಗದಲ್ಲಿ ಹರಡಿದ್ದು ನಮ್ಮನ್ನು ವಿಶಾಲದೆಡೆಗೆ ಕರೆದೊಯ್ಯುವಂತೆ ಭಾಸವಾಗತ್ತಿತ್ತು. ಇಂತಹ ಚಿತ್ರಗಳೇ ಮನುಕುಲಕ್ಕೆ ಭಗವಂತನು ಕರುಣಿಸಿದ ಸಂಜೀವಿನಿ ಎಂಬಂತೆ ಗೋಚರವಾಗುತ್ತಿತ್ತು. ಲೌಕಿಕದ ಅನುಭವ ಮತ್ತು ಪಾರಮಾರ್ಥಿಕದಲ್ಲಿ ಅವರಿಗಿರುವ ಆಸಕ್ತಿ ಅವರ ಮಾತು ಮತ್ತು ಕಲೆಯಲ್ಲಿ ಪ್ರತಿಧ್ವನಿಸುತ್ತಿತ್ತು. ಕೇಳುಗರ ಪ್ರಶ್ನೆಗೆ ಸಮಂಜಸ ಉತ್ತರ ನೀಡುತ್ತಾ ಪ್ರಾತ್ಯಕ್ಷಿಕೆ ನೀಡಿದ್ದು ವಿಶೇಷವಾಗಿತ್ತು. 50 ವರ್ಷಗಳ ಅವರ ಕಲಾ ಅನುಭವ ಅವರನ್ನು ಒಬ್ಬ ದಾರ್ಶನಿಕರನ್ನಾಗಿಸಿತ್ತು. ಹಿರಿಯ ಕಲಾವಿದ ಶ್ರೀ ಕೃಷ್ಣ ಶೆಟ್ಟಿಯವರು ಉಪಸ್ಥಿತರಿದ್ದು ಅನೇಕ ಕಲಾವಿದರು ಕಲಾಭಿಮಾನಿಗಳು ಇದಕ್ಕೆ ಸಾಕ್ಷಿಯಾದರು. ವಿಶ್ವ ಕಲಾ ದಿನ ಸಾರ್ಥಕ್ಯದ ದಿನವಾಗಿತ್ತು.