ತೆಕ್ಕಟ್ಟೆ: ರಸರಂಗ ಕೋಟ ಇವರು ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಸಹಕಾರದಿಂದ ಆಯೋಜಿಸಿದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ದಿ. ಗೋಪಾಲಕೃಷ್ಣ ನಾಯರಿಯವರ ಹೆಸರಿನಲ್ಲಿ ‘ಯುವ ರಂಗ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 30 ಮಾರ್ಚ್ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ನಟ, ನಿರ್ದೇಶಕ ಹಾಗೂ ಸಿನೆಮಾ ಕಲಾವಿದ ರಘು ಪಾಂಡೇಶ್ವರ ಮಾತನಾಡಿ “ಬದುಕಿಗೊಂದು ಶಿಸ್ತು ಮತ್ತು ಸಂಯಮವನ್ನು ಕಲಿಸುವುದು ರಂಗಭೂಮಿ. ಯಶಸ್ಸನ್ನು ತಲೆಗೇರಿಸಿಕೊಳ್ಳದೇ ನಿರಂತರ ಬದ್ಧತೆಯೊಂದಿಗೆ ಇದರಲ್ಲಿ ತೊಡಗಿಕೊಳ್ಳುವ ಕಲಾವಿದ ಹೆಚ್ಚಿನದನ್ನು ಕಲಿಯಲು ಸಾಧ್ಯವಿದೆ” ಎಂದುರು.
ಮುಖ್ಯ ಶಿಕ್ಷಕಿ ಸುಲೋಚನ ನಾಯರಿ ಇವರು ಮಾತನಾಡಿ “ನೆಮ್ಮದಿ ಹಾಗೂ ಮನಃಶಾಂತಿಯನ್ನು ನೀಡುವ ಕಲೆಯ ಕುರಿತಾದ ಆಸಕ್ತಿಯನ್ನು ನಾನು ನನ್ನ ವಿದ್ಯಾರ್ಥಿಗಳಲ್ಲಿ ಸದಾ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದೇನೆ. ಹದಿನಾರರ ವಸಂತದಲ್ಲಿರುವ ‘ರಸರಂಗ’ ಸಂಸ್ಥೆಗೆ ಶುಭವಾಗಲಿ” ಎಂದು ಹಾರೈಸಿದರು. ಕಲಾ ಪೋಷಕರಾದ ಶ್ರೀಧರ್ ಪುರಾಣಿಕ್ ಮಾತನಾಡಿ “ನಿರಂತರವಾಗಿ ರಂಗ ಚಟುವಟಿಕೆಗಳನ್ನು ರಂಗದಲ್ಲಿ ಜೀವಂತಗೊಳಿಸಿದ ಸಂಸ್ಥೆ ರಸರಂಗ” ಎಂದರು. ಯುವ ನೇತಾರ ಪ್ರಸಾದ್ ಬಿಲ್ಲವ ಮಾತನಾಡಿ “ರಂಗದ ಚಟುವಟಿಕೆಗಳಿಂದ ಜೀವನೋಲ್ಲಾಸ ಸಾಧ್ಯ” ಎಂದರು.
ರಂಗಕರ್ಮಿ ಪ್ರಶಾಂತ್ ಶೆಟ್ಟಿ ವಿಶ್ವ ರಂಗದಿನದ ಸಂದೇಶವನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಧಮನಿ ತೆಕ್ಕಟ್ಟೆಯ ಶ್ರೀಷ ತೆಕ್ಕಟ್ಟೆ ಇವರಿಗೆ ‘ಯುವ ರಂಗ ಪುರಸ್ಕಾರ’ ನೀಡಿ ಗೌರವಿಸಲಾಯಿತು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸುಪ್ರೀತಾ ಪುರಾಣಿಕ್ ಕಾರ್ಯಕ್ರಮ ನಿರ್ವಹಿಸಿ, ಭಾಗ್ಯಲಕ್ಷ್ಮೀ ವೈದ್ಯ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ರಸರಂಗ ತಂಡದವರಿಂದ ರಂಗಗೀತೆ, ರೂಪಕ, ನಾಟಕ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಸಂಸ ಬಯಲು ರಂಗಮಂದಿರದಲ್ಲಿ ರಂಗಭೂಮಿ ದಿನಾಚರಣೆ ಹಾಗೂ ಪುಸ್ತಕಗಳ ಲೋಕಾರ್ಪಣೆ
Next Article ಬೆಂಗಳೂರಿನಲ್ಲಿ ಸೇವಾ ಸಾಧಕರ ಸಂಗಮೋತ್ಸವ 2025 | ಏಪ್ರಿಲ್ 30