ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ, ಕಾದಂಬರಿಕಾರ, ‘ಹಳ್ಳ ಬಂತು ಹಳ್ಳ’ ಖ್ಯಾತಿಯ ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಅವರು ಬೆಂಗಳೂರಿನಲ್ಲಿ ದಿನಾಂಕ 21-04-2023 ಶುಕ್ರವಾರ ನಿಧನರಾದರು. ಮೃತರಿಗೆ 87 ವರ್ಷ ವಯಸ್ಸಾಗಿತ್ತು. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣಗೊಳಿಸಿದರು. ಮುಂಬೈ ಕೆನರಾ ಬ್ಯಾಂಕ್ ಅಧಿಕಾರಿಯಾಗಿ ಸೇರಿ 1996ರಲ್ಲಿ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.
‘ಹಳ್ಳ ಬಂತು ಹಳ್ಳ’ ಕಾದಂಬರಿ ಕನ್ನಡ ಸಾಹಿತ್ಯದ ಮಹತ್ವದ ಕೃತಿ. ನಿವೃತ್ತಿಯ ನಂತರ ಬರೆಯಲು ಕುಳಿತ ಬ್ಯಾಂಕ್ ನ ಅಧಿಕಾರಿಯೊಬ್ಬರ ಈ ಬರವಣಿಗೆಯನ್ನು ಕನ್ನಡ ಲೋಕ ಅಚ್ಚರಿಯಿಂದ ಆಹ್ವಾನಿಸಿತ್ತು. ನಾನು ‘ಹರಿವ ನೀರು’ ಎಂದು ಅವರು ತನ್ನನ್ನು ಹೇಳಿಕೊಳ್ಳುತ್ತಿದ್ದರು. ‘ಅಪರಂಜಿ’ಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಶ್ರೀನಿವಾಸ ವೈದ್ಯರು ಲಲಿತ ಪ್ರಬಂಧ, ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ‘ಮನಸುಖರಾಯನ ಮನಸು’,’ ತಲೆಗೊಂದು ತರತರ’, ‘ರುಚಿಗೆ ಹುಳಿಯೊಗರು’, ‘ಕರ್ನಲ್ ಗೆ ಯಾರೂ ಬರೆಯುವುದಿಲ್ಲ’ ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರ ಇವರಿಗೆ ಸಂದಿದೆ.
ಧಾರವಾಡ ಜಿಲ್ಲೆಯ ನವಲಗುಂದದ ಶ್ರೀನಿವಾಸ ವೈದ್ಯರು ಓದಿದ್ದು ಚರಿತ್ರೆ. ಕೆಲಸ ಮಾಡಿದ್ದು ಅರ್ಥಶಾಸ್ತ್ರ ಕ್ಷೇತ್ರದಲ್ಲಿ. ಸಮೀಪವಾದುದು ಸಾಹಿತ್ಯ. ಆದರೆ ಈಗ ಸಾಹಿತ್ಯ ಲೋಕ ಒಂದು ಮಹತ್ವದ ಸಾಹಿತಿಯನ್ನು ಕಳೆದುಕೊಂಡಿದೆ.