ಮಂಗಳೂರು: ಯಕ್ಷಗಾನ ಕರಾವಳಿಯಲ್ಲಿ ಹುಟ್ಟಿ ಮಲೆನಾಡಿನವರೆಗೂ ಹಬ್ಬಿರುವ ಆಕರ್ಷಕ ಕಲೆ. ಕರಾವಳಿಯ ಈ ಗಂಡುಕಲೆ ಕನ್ನಡದ ಕಂಪನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟಕ್ಕೆ ಬಿತ್ತರಿಸಿದೆ. ಕರಾವಳಿ ತೀರದ ಸಮುದ್ರದ ಅಲೆಗಳಂತೆ ಯಕ್ಷಗಾನಕ್ಕೂ ಸಮುದ್ರದ ಅಲೆಗಳ ನಾದವಿದೆ; ಭೋರ್ಗರೆತವಿದೆ. ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ.
ಯಕ್ಷಗಾನದ ಮೊದಲ ಉಲ್ಲೇಖ ಶಾರ್ಣದೇವನ “ಸಂಗೀತ ರತ್ನಾಕರ”ದಲ್ಲಿ (೧೨೧೦ ಕ್ರಿಶ) “ಜಕ್ಕ” ಎಂದು ಆಗಿದ್ದು ಮುಂದೆ “ಯಕ್ಕಲಗಾನ” ಎಂದು ಕರೆಯಲ್ಪಟ್ಟಿತು ಎಂಬುದು ಒಂದು ಅಭಿಪ್ರಾಯ. ಕ್ರಿಶ ೧೫೦೦ರ ವೇಳೆಗೆ ವ್ಯವಸ್ಥಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ. ಜಾಗತಿಕ ರಂಗಭೂಮಿಯನ್ನು ಅವಲೋಕಿಸಿದರೆ ಇಷ್ಟು ಸುದೀರ್ಘ ಕಾಲದಲತ್ತ ಬಂದಿರುವ ಕಲೆಗಳಾದ ಕಥಕಳಿ, ಮೋಹನಿ ಅಷ್ಟಂ, ಸದೀರ್ ನೃತ್ಯ, ಷೇಕ್ಸ್ ಫಿಯರ್ ನಾಟಕಗಳಂತೆ ಯಕ್ಷಗಾನವೂ ಒಂದು. ಶುದ್ಧ ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ. ಇದು ಸಮಾಜದಲ್ಲಿ ಪೌರಾಣಿಕ ಪ್ರಜ್ಞೆ ಮೂಡಿಸಿದ ಕಲೆ. ಯಕ್ಷಗಾನದ ಮೇಲೆ ದಾಸ ಪಂಥದ ಪ್ರಭಾವವೂ ಗಮನಾರ್ಹ. ಇದನ್ನು ಯಕ್ಷಗಾನದ ಪ್ರಸಂಗ ಸಾಹಿತ್ಯದಲ್ಲಿ ಕಾಣಬಹುದು.
2014ರಂದು ಶ್ರೀಯುತ ಪ್ರಶಾಂತ್ ಉಡುಪ ಅವರ ಮೂಲಕ ಪ್ರಾರಂಭಗೊಂಡ ಯಕ್ಷ ಅಭಿಮಾನಿ ಬಳಗ whatsaap ಬಳಗ ನಂತರದ ದಿನಗಳಲ್ಲಿ ಸಮಾನ ಮನಸ್ಕ ಯಕ್ಷಗಾನ ಕಲೆಯ ಅಭಿಮಾನಿಗಳ ಒಗ್ಗೂಡುವಿಕೆಯಿಂದ ರೂಪುಗೊಂಡ ನಮ್ಮ ಈ ಬಳಗವು ಸಾಮಾಜಿಕ ಜಾಲತಾಣದ ಮೂಲಕವಾಗಿ ಕರಾವಳಿಯ ಶ್ರೀಮಂತ ಕಲೆಯ ಬೆಳವಣಿಗೆಯ ಮಹತ್ತರ ಆಶಯವನ್ನು ಹೊಂದಿಕೊಂಡು ಕಲಾಮಾತೆಯ ಕೃಪಾಕಟಾಕ್ಷ, ಕಲಾ ಪೋಷಕರ ಪ್ರೋತ್ಸಾಹ ಹಾಗೂ ಕಲಾಭಿಮಾನಿಗಳ, ಕಲಾವಿದರ ಸಹಕಾರದಿಂದ 2016ರಲ್ಲಿ ಐದು ಮಂದಿ ಹಿರಿಯ ಕಲಾವಿದರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ, ವಿಶಿಷ್ಟ ಸಂಯೋಜನೆಯೊಂದಿಗೆ “ಶ್ರೀ ದೇವಿ ಮಹಾತ್ಮೆ” ಎಂಬ ಪುಣ್ಯ ಕಥಾಭಾಗವನ್ನು ಹಾಗೂ 2018ರಲ್ಲಿ ಮೂರು ಮಂದಿ ಹಿರಿಯ ಕಲಾವಿದರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ “ಪಾರ್ಥ ಏವ ಧನುರ್ಧರ” ಎಂಬ ಯಕ್ಷಗಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ.
ಈ ಎರಡು ಸಂಘಟನೆಯ ಯಶಸ್ವಿಯ ನಾಲ್ಕು ವರ್ಷಗಳ ನಂತರ ಮತ್ತೆ ನಮ್ಮ ತೃತೀಯ ಕಾರ್ಯಕ್ರಮವಾಗಿ ಹಿರಿಯ ಕಲಾವಿದರಿಗೆ ಸನ್ಮಾನ ಹಾಗೂ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ನಿಡ್ಲೆ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
“ಕುಂಭ ಸಂಭವ, ಉಭಯ ಕುಲ ಬಿಲ್ಲೋಜ” ಎಂಬ ಪ್ರಸಂಗದ ಬಯಲಾಟವನ್ನು ಆಯೋಜಿಸಿದ್ದೇವೆ.
“ಶಾಪಾದಪಿ ಶರಾದಪಿ” ಎಂದು ನೆಗಳ್ತೆಯನ್ನು ಪಡೆದ ಗುರು ದ್ರೋಣಾಚಾರ್ಯರ ಜೀವನ ಚರಿತ್ರೆಯ ಅಪರೂಪದ ಕಥಾಭಾಗಗಳನ್ನು ನೋಡಲು ಮರೆಯದಿರಿ.
ಕಲಾಪೋಷಕರಾದ, ಕಲಾಭಿಮಾನಿಗಳಾದ ತಾವುಗಳು ಉದಾರ ಹೃದಯಿಗಳಾಗಿ ತನು ಮನ ಧನಗಳಿಂದ ಯಕ್ಷಗಾನ ಸಂಘಟಕರನ್ನು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿಕೊಳುತ್ತಿದ್ದೇವೆ.
ಯಕ್ಷಗಾನ ಕಂಪನ್ನು ಪಸರಿಸಿ, ಕಲೆಗೆ ಪ್ರೋತ್ಸಾಹ ನೀಡಿ ಹಾಗೂ ಸಂಘಟಕರನ್ನು ಪ್ರೋತ್ಸಾಹಿಸಿ…..
23.09.2023ರ ಸಂಜೆ 6 ಗಂಟೆಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ ಇಡ್ಯಾ, ಸುರತ್ಕಲ್ ಮಂಗಳೂರು.
ಕಲಾಭಿಮಾನಿಗಳಾದ ನಾವೆಲ್ಲರೂ ಭೇಟಿಯಾಗೋಣ..
ಸರ್ವರಿಗೂ ಆದರದ ಸ್ವಾಗತ. ಯಕ್ಷಗಾನಂ ವಿಶ್ವಗಾನಂ.
- ಶ್ರವಣ್ ಕಾರಂತ್ ಕೆ.