ಉಜಿರೆ: ಯಕ್ಷ ಭಾರತಿ ಕನ್ಯಾಡಿ (ರಿ)ಬೆಳ್ತಂಗಡಿ ಇದರ 9ನೇ ವಾರ್ಷಿಕೋತ್ಸವು ದಿನಾಂಕ 10-09 2023 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಇವರಿಗೆ ಯಕ್ಷಭಾರತಿ ಪ್ರಶಸ್ತಿ 2023 ಪ್ರದಾನ ಮಾಡಿ ಗೌರವಿಸಲಾಯಿತು. ಯಕ್ಷ ಭಾರತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನ ನುಡಿಗಳನ್ನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ಯಕ್ಷಗಾನ ನನ್ನ ಉಸಿರು, ಇದು ಬರೀ ಮನೋರಂಜನೆ ಅಲ್ಲ ಇದು ಮನಃ ಪರಿವರ್ತನೆಗೊಳ್ಳುವ ವಿಧಾನ. ಇತ್ತೀಚೆಗಿನ ದಿನಗಳಲ್ಲಿ ಅಧಿಕವಾದ ನೃತ್ಯ, ಭಾಗವತರು ಇನ್ನೊಬ್ಬರ ಅನುಕರಣೆ ಮಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸನ್ನಿವೇಶಗಳು ಬಹಳ ಬೇಸರವನ್ನುಂಟುಮಾಡಿದೆ. ನಾವು ಒಂದು ಮೂರ್ತಿಯನ್ನು ಕಂಡಾಗ ಹೇಗೆ ಅದನ್ನು ಪೂಜಿಸುತ್ತೇವೆಯೋ, ಹಾಗೆಯೇ ಅಂತಹ ದೇವರ ಪುರಾಣಗಳನ್ನು ಜನರಿಗೆ ತಲುಪಿಸುವ ಸನಾತನ ಧರ್ಮದ ಒಂದು ಭಾಗ ನಾವು. ಇದನ್ನು ಹಿಂದಿನಿಂದ ಹಾಗೂ ಪ್ರತ್ಯಕ್ಷದರ್ಶಿಗಳಾಗಿ ಗಮನಿಸುವ ಜನರಿದ್ದಾರೆ. ಜೊತೆಗೆ ಮಕ್ಕಳು ಇವೆಲ್ಲವನ್ನೂ ಗಮನಿಸಿ ಮುಂದುವರಿಸಿಕೊಂಡು ಹೋಗುವವರಾಗಿದ್ದು ಅವರಿಗೆ ಸನಾತನ ಧರ್ಮದ ಎಚ್ಚರಿಕೆಯನ್ನು ನೀಡುವ ಜವಾಬ್ದಾರಿ ಕಲಾವಿದರ ಮೇಲಿದೆ.” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಶರತ್ ಕೃಷ್ಣ ಪಡುವೆಟ್ನಾಯ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕಲಾಪೋಷಕ ಶ್ರೀಪತಿ ಭಟ್ ಮೂಡಬಿದಿರೆ, ನ್ಯಾಯವಾದಿ ಧನಂಜಯ ರಾವ್ ಬೆಳ್ತಂಗಡಿ, ಸುಬ್ರಹ್ಮಣ್ಯ ಭಟ್ ಅರ್ಚಕರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಲಂಂಗಾರು ಮತ್ತು ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಉಪಸ್ಥಿತರಿದ್ದರು.