ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಆದರೆ ಯಕ್ಷಗಾನ ಮಹಿಳಾ ಪ್ರಸಂಗಕರ್ತರು ಕಾಣ ಸಿಗುವುದು ಅಪರೂಪ. ಇಂತಹ ಪ್ರಸಂಗಕರ್ತೆ ಪೈಕಿ ಮಿಂಚುತ್ತಿರುವವರು ಶ್ರೀಮತಿ ಶಾಂತಾ ವಾಸುದೇವ ಪೂಜಾರಿ.
ಮಹಾಬಲ ಪೂಜಾರಿ, ದೇವಲ್ಕುಂದ ಹಾಗೂ ನೀಲು ಪೂಜಾರ್ತಿ,ಆನಗಳ್ಳಿ ಇವರ ಮಗಳಾಗಿ 11.07.1976ರಂದು ಜನನ. ಶ್ರೀ ಶಾರದ ಕಾಲೇಜು, ಬಸ್ರೂರುನಲ್ಲಿ ಬಿ.ಎ.ಪದವಿ ಹಾಗೂ ಕಂಪ್ಯೂಟರ್ ಶಿಕ್ಷಣ ಇವರ ವಿದ್ಯಾಭ್ಯಾಸ.
ತವರುಮನೆ, ಅಜ್ಜ ಬಳ್ಕೂರು ನಂದಿ ಪೂಜಾರಿ ಮತ್ತು ಅಜ್ಜಿ ರುಕ್ಮಿಣಿ ಪೂಜಾರ್ತಿ ಯವರಿಂದ ರಕ್ತಗತವಾಗಿ ಹರಿದು ತಾಯಿಯಿಂದ ವರಪ್ರಸಾದವಾಗಿ ಪಡೆದ ಯಕ್ಷಗಾನದ ಮೇಲಿನ ಅದಮ್ಯ ಪ್ರೇಮ ಬರವಣಿಗೆಯಲ್ಲಿ ಚಿರಂತನವಾಯಿತು. ತಂದೆ ಮಹಾಬಲ ಪೂಜಾರಿಯವರ ಕಲಾಸೇವೆ, ಸೋದರಮಾವ ಕೃಷ್ಣ ಪೂಜಾರಿಯವರು ಮತ್ತು ಅಣ್ಣ ರವಿಕುಮಾರ್, ಹಾಗೂ ತಮ್ಮ ಸಂತೋಷ ಕುಮಾರ್ ರವರು ಶ್ರೀ ಲಕ್ಷ್ಮೀ ಚೆನ್ನಕೇಶವ ಯಕ್ಷಗಾನ ಕಲಾ ಮಂಡಳಿ, ಆನಗಳ್ಳಿ ಯಲ್ಲಿ ಹವ್ಯಾಸಿ ಕಲಾವಿದರಾಗಿ ಸಲ್ಲಿಸಿದ ಸೇವೆ ಇವರ ಬರವಣಿಗೆಗೆ ಪ್ರೇರಣೆ.
ಶ್ರೀಮತಿ ಶಾಂತಾ ವಾಸುದೇವ ಪೂಜಾರಿ ಅವರು ಬರೆದಿರುವ ಪ್ರಸಂಗಗಳು:-
೧. ಅಚ್ಚೋದ ಸರಸಿ( ಬಾಣಭಟ್ಟನ ಕಾದಂಬರಿಯಾಧಾರಿತ)
೨. ಕಾವ್ಯ ತರಂಗಿಣಿ
೩. ಮಧುರ ಸಿಂಚನ
೪. ಮೇಘ ಮಂಜರಿ
೫. ಶ್ರೀಕೃಷ್ಣ ಕಾರುಣ್ಯ
೬. ವಿಧಿ ವಂಚಿತೆ
೭. ಅಗ್ನಿ ನಂದನ
೮. ಅಂಬರ ತಾರೆ
೯. ಅಮೋಘ ಚಂದ್ರಿಕೆ
೧೦. ರಸ ಪೌರ್ಣಮಿ
ಬೇರೆಯವರ ಕತೆಗಳಿಗೆ ಪದ್ಯ ರಚನೆ:-
೧. ಧರ್ಮದೇವತೆ ಚಿಕ್ಕಮ್ಮ
೨. ಮಾತಾಂತರಂಗ
೩. ಸಿಂಧೂರ ಮಂದಾರ
೪. ಕಾಮಿತಾರ್ಥ ಪ್ರಧಾಯಿನಿ
೫. ರಜತಪುರ ರಕ್ತೇಶ್ವರಿ
೬. ಅಗ್ನಿ ದುರ್ಗಾ ಮಹಾತ್ಮೆ
೭. ಶೌರ್ಯ ಶೃಂಗಾರ
ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ಅಭಿಪ್ರಾಯ:-
ಇತ್ತೀಚಿನ ದಿನಗಳಲ್ಲಿ ಹೊಸ ಪ್ರಸಂಗಗಳು ಸಾಂಪ್ರದಾಯಿಕ ಚೌಕಟ್ಟನ್ನು ಮೀರುತ್ತಿರುವುದು ವಿಷಾದನೀಯ. ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನಿಟ್ಟುಕೊಂಡು ಪ್ರಸಂಗಗಳು ಸಿನಿಮಾ ಹಾಡುಗಳು, ಅನಗತ್ಯ ಹಾಸ್ಯಗಳಿಂದ ತನ್ನ ವರ್ಚಸ್ಸನ್ನು ಕಳೆದುಕೊಳ್ಳದಿರಲೆಂಬ ಆಶಯ.
ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು:-
ಪ್ರಸಂಗಕರ್ತರಾಗಬೇಕೆಂಬ ಸಂಬಂಧವಿರುವ ಪ್ರತಿಯೊಬ್ಬ ವ್ಯಕ್ತಿಯೂ ಪದ್ಯ ಬರೆಯುವಲ್ಲಿ ಪ್ರಯತ್ನಶೀಲರಾಗಬೇಕು.
ತಾಳಮದ್ದಳೆ ಕ್ಷೇತ್ರದಲ್ಲಿ ಆಸಕ್ತಿ ಇದೆಯಾ? ಆ ಬಗ್ಗೆ ಮುಂದಿನ ಯೋಜನೆಗಳೇನು:-
ಆಸಕ್ತಿಯಿದೆ…ಆದರೆ ಪೂರಕ ವಾತಾವರಣವಿಲ್ಲ…ಸಂಸಾರ ಮತ್ತು ವೃತ್ತಿ (ಟೈಲರಿಂಗ್) ಬದುಕು ಮತ್ತು ಸಂಘಗಳ ನಿರ್ವಹಣೆ ಮತ್ತು ಬರವಣಿಗೆಯಲ್ಲಿಯೇ ಸಮಯ ಸಾಗುತ್ತದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದು ಯಕ್ಷಗಾನವು ಕಾಲಮಿತಿಯ ಲಕ್ಷ್ಮಣರೇಖೆಯಲ್ಲಿ ಒಮ್ಮೊಮ್ಮೆ ಸುಂದರವೆನಿಸಿದರೂ, ಬೆಳಕಿನ ಸೇವೆ ಬೆಳಕು ಹರಿಯುವ ತನಕ ಕಂಡಾಗಲೇ ಆತ್ಮ ತೃಪ್ತಿ ಭಾವ. ಅನಗತ್ಯ ಹಾಸ್ಯ, ಸಿನಿಮೀಯ ಶೈಲಿ ಬೇಕಿಲ್ಲವೆನಿಸುತ್ತದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಸಮಯದ ಅಭಾವವಿರುವ, ಒತ್ತಡದ ವೃತ್ತಿ ಬದುಕಿನಲ್ಲಿ ಪ್ರೇಕ್ಷಕರು, ವ್ಯಕ್ತಿಗತವಾದ ಅಭಿಮಾನವುಳ್ಳವರಿಂದ ಒಳ್ಳೆಯದನ್ನು ಅಸ್ವೀಕಾರ ಮಾಡುವವರಿಂದ ಪ್ರತಿಭಾವಂತ ಬರಹಗಾರರು, ಕಲಾವಿದರೂ ಕೈಚೆಲ್ಲುವಂತಹ ಪರಿಸ್ಥಿತಿ ಒದಗಿ ಬರುವುದರಲ್ಲಿ ಸಂದೇಹವಿಲ್ಲ. ಪ್ರೇಕ್ಷಕರ ಸ್ಪೂರ್ತಿಯೇ ಕವಿಗೂ, ಕಲಾವಿದರಿಗೂ ಪ್ರೇರಣೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:-
ಕೊನೆಯುಸಿರ ತನಕ ಕಲಾಕುಸುಮಗಳನ್ನು ಸಮರ್ಪಿಸುವ ಆಸೆಯಿದೆ. ದೈವದತ್ತವಾಗಿ ಬಂದ ಈ ಕಲೆ ನನ್ನ ಪೂರ್ವ ಜನ್ಮದ ಪುಣ್ಯಫಲ.
ಓದುವುದು, ಬರವಣಿಗೆ, ಕತೆ, ಕವನ, ಲೇಖನ ,ಸಂಗೀತ, ಕೋಲಾಟ, ಯಕ್ಷಗಾನ ವೀಕ್ಷಣೆ, ಪ್ರಹಸನ ರಚನೆ, ನಿರ್ದೇಶನ, ಕಸೂತಿ, ಹೊಲಿಗೆ, ಸ್ವಸಹಾಯ ಸಂಘಟನೆ ಮತ್ತು ನಿರ್ವಹಣೆ ಇವರ ಹವ್ಯಾಸಗಳು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮದ್ದುಗುಡ್ಡೆ ಒಕ್ಕೂಟದಲ್ಲಿ ಅಧ್ಯಕ್ಷೆಯಾಗಿ, ಮಹಿಳಾ ಸಂಪದ ಮದ್ದುಗುಡ್ಡೆ, ಶ್ರೀನಿಧಿ ಸ್ವಸಹಾಯ ಸಂಘ , ಶ್ರೀ ದುರ್ಗಾ ಸ್ವಸಹಾಯ ಸಂಘ, ಶ್ರೀಗೌರಿ ಸ್ವಸಹಾಯ ಸಂಘಗಳ ರಚನೆ ಮತ್ತು ನಿರ್ವಹಣೆ ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಶ್ರೀಮತಿ ಶಾಂತಾ ವಾಸುದೇವ ಪೂಜಾರಿ.
ಕನರಾಡಿ ವಾದಿರಾಜ ಭಟ್, ಗೋಪಾಲ ಗಾಣಿಗ ಆನಗಳ್ಳಿ, ಪ್ರಭಾಕರ ಆಚಾರ್ಯ, ಹೆಮ್ಮಾಡಿ, ತಾರಾನಾಥ್ ವರ್ಕಾಡಿ, ರಾಘವೇಂದ್ರ ಆಚಾರ್ಯ, ಜನ್ಸಾಲೆ ಅಣ್ಣ ರವಿಕುಮಾರ್, ಚಂದ್ರಕಾಂಚನ್ ಕೊಂಡಳ್ಳಿ ಯಕ್ಷರಂಗದಲ್ಲಿ ತುಂಬಾ ಮಾರ್ಗದರ್ಶನವನ್ನು ನೀಡಿರುತ್ತಾರೆ.
ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಗಳು. ಯಕ್ಷ ಸಿಂಚನ ಪ್ರಶಸ್ತಿ ಮತ್ತು ಯಕ್ಷ ಕವಯಿತ್ರಿ ಬಿರುದು ಹೀಗೆ ಹಲವು ಸನ್ಮಾನ ಹಾಗೂ ಪ್ರಶಸ್ತಿಗಳು ದೊರೆತಿರುತ್ತದೆ.
ಶಾಂತಾ ವಾಸುದೇವ ಪೂಜಾರಿ ಅವರು ವಾಸುದೇವ ಪೂಜಾರಿ ಮದ್ದುಗುಡ್ಡೆ ಇವರನ್ನು ೨೩.೦೪.೨೦೦೦ ರಂದು ಮದುವೆಯಾಗಿ ಮಗಳು ವೈಷ್ಣವಿ ಹಾಗೂ ಮಗ ಶ್ರೀರಾಮ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು