29 ಮಾರ್ಚ್ 2023, ಕಾರ್ಕಳ: ಯಕ್ಷ ರಂಗಾಯಣದ ಆಶ್ರಯದಲ್ಲಿ ದಿನಾಂಕ 27-03-2023ರಂದು ಕಾರ್ಕಳದ ಕೋಟಿಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ಏರ್ಪಡಿಸಿದ “ವಿಶ್ವರಂಗಭೂಮಿ ದಿನಾಚರಣೆ”ಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾದ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ಉದ್ಘಾಟಿಸಿ, “ರಂಗಭೀಷ್ಮ ಬಿ.ವಿ.ಕಾರಂತರ ಕನಸಿನ ಕರ್ನಾಟಕದ ಆರನೇ ರಂಗಾಯಣವಾಗಿರುವ ಕಾರ್ಕಳದ ಯಕ್ಷ ರಂಗಾಯಣವು ನಾಡಿನ ಸಾಂಸ್ಕೃತಿಕ ಕಿರೀಟವಾಗಿದೆ. ರಂಗಭೂಮಿ ಅನ್ನೋದು ಭಾವನೆಗಳ ಸಮುದ್ರ. ಸಂಬಂಧಗಳನ್ನು ಕಟ್ಟುವ ಕಾರ್ಯ ಮತ್ತು ಬದುಕಿನ ಪಾಠ ಕಲಿಯಲು ರಂಗಭೂಮಿ ಪೂರಕವಾಗಿದೆ” ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಮುಖ್ಯ ಅತಿಥಿ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಕೋಟ್ಯಾನ್ ಮಾತನಾಡಿ ‘ಯಕ್ಷ ರಂಗಾಯಣ ನಮ್ಮೂರಿಗೆ ಹೆಮ್ಮೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಆಸಕ್ತಿಯನ್ನು ಅರಳಿಸುತ್ತಿರುವ ರಂಗಾಯಣಕ್ಕೆ ನಮ್ಮ ಬೆಂಬಲ ಯಾವತ್ತೂ ಇದೆ’ ಎಂದರು. ರಂಗ ಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷರಾದ ಎಸ್.ನಿತ್ಯಾನಂದ ಪೈ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಯಕ್ಷ ರಂಗಾಯಣದ ನಿರ್ದೇಶಕರದ ಡಾ. ಜೀವನ್ ರಾಂ ಸುಳ್ಯ ಮಾತನಾಡಿ ‘ಇಂದು ರಂಗಭೂಮಿಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದ ದಿನ. ಮಕ್ಕಳು ಮತ್ತು ಯುವಜನತೆ ರಂಗಭೂಮಿಯ ಕಡೆಗೆ ಹೆಚ್ಚು ತೊಡಗಿಸಿಕೊಳ್ಳುವಂತೆ ಯಕ್ಷ ರಂಗಾಯಣವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ’ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ ಬಿ.ವಿ. ಕಾರಂತ ಪ್ರಶಸ್ತಿಗೆ ಈ ವರ್ಷ ಭಾಜನರಾದ ಡಾ.ಬಿ.ವಿ.ರಾಜಾರಾಂ ಇವರನ್ನು ಸನ್ಮಾನಿಸಲಾಯಿತು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿದರು. ಶ್ರೀಮತಿ ಸುಮನಾ ಪ್ರಸಾದ್ ಆಶಯಗೀತೆ ಹಾಡಿದರು. ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅಭಿವೃದ್ದಿ ಸಮಿತಿ ಸದಸ್ಯರಾದ ಕರುಣಾಕರ ಕೋಟ್ಯಾನ್ ವಂದಿಸಿದರು. ನಿವೃತ್ತ ಮುಖ್ಯೋಪಧ್ಯಾಯರಾದ ವಸಂತ ಎಂ.ಕಾರ್ಕಳ ಇವರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ತುಂಬಿದ ಪ್ರೇಕ್ಷಾಂಗಣದೆದುರು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದ್ರೆ ಇಲ್ಲಿನ ಕಲಾವಿದರಿಂದ ಕೆ.ಜಿ.ಕೃಷ್ಣಮೂರ್ತಿ ರಚಿಸಿ, ಜೀವನ್ ರಾಂ ಸುಳ್ಯ ನಿರ್ದೇಶಿಸಿದ “ಮಕ್ಕಳ ಮಾಯಾಲೋಕ” ನಾಟಕ ಪ್ರದರ್ಶನಗೊಂಡಿತು.