ಮಂಗಳೂರು: ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದ, ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೇರು ನಟ, ದಿ. ಅಳಿಕೆ ರಾಮಯ್ಯ ರೈ ಅವರ ಸ್ಮರಣಾರ್ಥ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ನೀಡುವ ಅಳಿಕೆ ಯಕ್ಷ ಸಹಾಯ ನಿಧಿಗೆ 2022-23ನೇ ಸಾಲಿಗೆ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳದ ಬಿ.ಕೆ.ಚೆನ್ನಪ್ಪ ಗೌಡ ಆಯ್ಕೆಯಾಗಿದ್ದಾರೆ.
ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ, ಲೇಖಕ – ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಹಿರಿಯ ಯಕ್ಷಗಾನ ಕಲಾವಿದ ಉಮೇಶ ಶೆಟ್ಟಿ ಉಬರಡ್ಕ ಅವರನ್ನೊಳಗೊಂಡ ಸಲಹಾ ಸಮಿತಿಯ ಸೂಚನೆಯಂತೆ ಸಂಕಷ್ಟದಲ್ಲಿರುವ ಹಿರಿಯ ಕಲಾವಿದ ಚೆನ್ನಪ್ಪ ಗೌಡರಿಗೆ ಯಕ್ಷ ಸಹಾಯ ನಿಧಿ ಘೋಷಿಸಲಾಗಿದೆ ಎಂದು ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ ರೈ ತಿಳಿಸಿದ್ದಾರೆ. ನಿಧಿಯು ರೂ.20,000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಎ.28ರಂದು ಗೃಹ ಸಮ್ಮಾನದೊಂದಿಗೆ ನಿಧಿ ಅರ್ಪಣೆ ಮಾಡಲಾಗುತ್ತದೆ.
ಬಿ.ಕೆ. ಚೆನ್ನಪ್ಪ ಗೌಡ :
ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಏಳು ದಶಕಗಳಷ್ಟು ದೀರ್ಘ ಕಾಲ ಸೇವೆ ಮಾಡಿರುವ ಬಿ.ಕೆ. ಚೆನ್ನಪ್ಪ ಗೌಡರಿಗೆ ಪ್ರಸ್ತುತ 92 ವರ್ಷ ಪ್ರಾಯ. ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಬಸ್ರಿಮೂಲೆ ದಿ. ವೀರಪ್ಪ ಗೌಡ ಮತ್ತು ಕಮಲಾಕ್ಷಿ ದಂಪತಿಗೆ 1931 ಅಕ್ಟೋಬರ್ 14ರಲ್ಲಿ ಜನಿಸಿದ ಚೆನ್ನಪ್ಪ ಗೌಡರು 6ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದರು. ದೇಲಂತಬೆಟ್ಟು ಕೃಷ್ಣ ಭಟ್ ಮತ್ತು ಮುಜುಕುಂಜ ವಾಸುದೇವ ಪ್ರಭುಗಳು ಅವರ ಯಕ್ಷಗಾನ ಗುರುಗಳು. 14ನೇ ವಯಸ್ಸಿಗೆ ಕೂಡ್ಲು ಮೇಳದಲ್ಲಿ ಗೆಜ್ಜೆ ಕಟ್ಟಿ ಮುಂದೆ ಧರ್ಮಸ್ಥಳ ಮತ್ತು ಮೂಲ್ಕಿ ಮೇಳಗಳಲ್ಲಿ ತಿರುಗಾಟ ನಡೆಸಿದರು. ಮೂಲ್ಕಿ ಮೇಳದ ಪ್ರಧಾನ ಸ್ತ್ರಿವೇಷಧಾರಿಯಾಗಿದ್ದ ಅವರು ‘ಪಾಪಣ್ಣ ವಿಜಯ’ದ ಗುಣಸುಂದರಿ ಪಾತ್ರದಲ್ಲಿ ಹೆಚ್ಚು ಜನಪ್ರಿಯರಾದರು. ಬಳಿಕ ಕೊಲ್ಲೂರು, ಬಪ್ಪನಾಡು, ನಂದಾವರ, ಪುತ್ತೂರು, ಅರುವ, ಪೇಜಾವರ, ಭಗವತಿ, ಉಪ್ಪೂರು, ಇಡಗುಂಜಿ ಮೇಳಗಳಲ್ಲಿ ಕಲಾವಿದರಾಗಿ ಸೇರಿ ಯಕ್ಷಗಾನದ ಎಲ್ಲಾ ಬಗೆಯ ಪಾತ್ರಗಳಲ್ಲಿ ಪರಿಣತಿ ಗಳಿಸಿದರು. ಎಂ.ಭೀಮ ಭಟ್ಟರ ಮಳೆಗಾಲದ ತಿರುಗಾಟ ತಂಡದಲ್ಲಿಯೂ ಅವರು ಕಲಾವಿದರಾಗಿದ್ದರು.
ದೇವಿ, ದಾಕ್ಷಾಯಿಣಿ, ಕಯಾದು, ಸತ್ಯಭಾಮೆ, ದ್ರೌಪದಿ, ಗುಣಸುಂದರಿ, ದೇಯಿ, ಕಿನ್ನಿದಾರು ಮುಂತಾದ ಸ್ತ್ರೀ ವೇಷಗಳಲ್ಲದೆ ದೇವೇಂದ್ರ, ಅರ್ಜುನ, ಭೀಮ, ಹಿರಣ್ಯಾಕ್ಷ, ರಾವಣ, ಶುಂಭ, ಅರುಣಾಸುರ, ಧೂಮ್ರಾಕ್ಷ, ಹಿಡಿಂಬಾಸುರ ಹೀಗೆ ಯಾವ ಪಾತ್ರಗಳಿಗೂ ಸಲ್ಲುವ ಆಪತ್ಕಾಲದ ಕಲಾವಿದರಾಗಿದ್ದವರು ಗೌಡರು. ಒಟ್ಟು 10 ಯಕ್ಷಗಾನ ಮೇಳಗಳಲ್ಲಿ ಸೇವೆ ಸಲ್ಲಿಸಿ 11ನೇ ಮೇಳವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉಡುಪಿ ಕಲಾರಂಗ, ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷಧ್ರುವ ಪಟ್ಲ ಫೌಂಡೇಶನ್, ಕರಾವಳಿ ಯಕ್ಷಗಾನ ಸಮ್ಮೇಳನ, ನೇತಾಜಿ ಯುವಕ ಸಂಘ ಸಜಿಪ ಮುಂತಾದ ಸಂಘಟನೆಗಳಿಂದ ಅವರಿಗೆ ಪ್ರಶಸ್ತಿ ಗೌರವಗಳು ಲಭಿಸಿವೆ. ಯಕ್ಷರಂಗದಲ್ಲಿ ಸರಿಸುಮಾರು 70 ವರ್ಷಗಳ (1949 – 2019) ದಾಖಲೆ ತಿರುಗಾಟ ಮಾಡಿದ ಬಿ.ಕೆ. ಚೆನ್ನಪ್ಪ ಗೌಡರು ಇದೀಗ ಇಳಿ ವಯಸ್ಸಿನಲ್ಲಿ ಪತ್ನಿ ಕಮಲ, ಪುತ್ರ ಸುನೀಲ್ ಕುಮಾರ್ ಹಾಗೂ ವಿವಾಹಿತ ಪುತ್ರಿ ರಕ್ಷಿತಾ ಇವರೊಂದಿಗೆ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ.
ಗೃಹಸಂಮಾನ – ನಿಧಿ ಸಮರ್ಪಣೆ :
ಇದೇ ಏಪ್ರಿಲ್ 28ರಂದು ಶುಕ್ರವಾರ ಪ್ರಸ್ತುತ ಇರಾ ಗ್ರಾಮದ ಕೆಂಜಿಲಪದವಿನಲ್ಲಿರುವ ಬಿ.ಕೆ. ಚೆನ್ನಪ್ಪ ಗೌಡರ ನಿವಾಸಕ್ಕೆ ತೆರಳಿ ಗೃಹಸಮ್ಮಾನದೊಂದಿಗೆ ನಿಧಿ ಸಮರ್ಪಣೆ ಮಾಡಲಾಗುವುದು. ಈ ಸಂದರ್ಭ ಸಲಹಾ ಸಮಿತಿ ಸದಸ್ಯರು ಮತ್ತು ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.