ಮೂಡಬಿದಿರೆ : ಬೆಳುವಾಯಿಯ ಯಕ್ಷದೇವ ಮಿತ್ರಕಲಾ ಮಂಡಳಿಯ 27ನೇ ವರ್ಷದ ‘ಯಕ್ಷ ಸಂಭ್ರಮ’ ಕಾರ್ಯಕ್ರಮವು 27 ಜುಲೈ 2024ರಂದು ಮೂಡಬಿದಿರೆಯ ಬೆಳುವಾಯಿ ಇಲ್ಲಿನ ಪ್ರೀತಂ ಗಾರ್ಡನ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಲಾವಿದರಿಗೆ ಪ್ರಶಸ್ತಿ ಪ್ರದಾನಿಸಿ ಆಶೀರ್ವಚನ ನೀಡಿದ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ “ಭಾರತೀಯ ಸಂಸ್ಕೃತಿ ಅನಾವರಣಗೊಳ್ಳುವುದೇ ಕಲೆಗಳಿಂದ. ಯಕ್ಷಗಾನವು ಪುರಾಣದ ಕತೆಗಳನ್ನು ಜನರಿಗೆ ತಲುಪಿಸುತ್ತದೆ. ಸಂಸ್ಕಾರ ಮತ್ತು ಸಂಸ್ಕೃತಿಯ ಚಟುವಟಿಕೆಗಳು ಹೆಚ್ಚಾದಾಗ ಸಮಾಜದಲ್ಲಿ ವಿಕೃತಿಗಳು ದೂರವಾಗುತ್ತದೆ.” ಎಂದು ಹೇಳಿದರು.
ಯಕ್ಷದೇವ ಮಿತ್ರಕಲಾ ಮಂಡಳಿ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳವಾದಕ ಪೆರುವಾಯಿ ನಾರಾಯಣ ಭಟ್, ಹಿರಿಯ ವೇಷಧಾರಿ ರಾಮಕುಮಾರ್ ದಾಸನಡ್ಕ ಇವರುಗಳಿಗೆ ‘ಯಕ್ಷ ದೇವ ಪ್ರಶಸ್ತಿ’ ಹಾಗೂ ನಿವೃತ್ತ ಶಿಕ್ಷಕಿ ಕೆ. ಕಲಾವತಿ ಇವರಿಗೆ ‘ವನಜಾಕ್ಷಿ ಅಮ್ಮ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಬಿ. ಜೆ. ಪಿ. ಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಜಿ. ಎಂ. ಬೊಕ್ಕಸ ಚಂದ್ರಶೇಖರ ರಾವ್, ವಿದ್ವಾನ್ ಪ್ರಸನ್ನ ತಂತ್ರಿ, ಮುಡಾ ಅಧ್ಯಕ್ಷ ಹರ್ಷ ವರ್ಧನ ಪಡಿವಾಳ್, ಉದ್ಯಮಿ ಜನಾರ್ದನ ಎಸ್. ರಾವ್, ಪಡುಬಿದ್ರಿ ದಿವಾಕರ ರಾವ್, ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬಹ್ಮನ್ ರಾಮಪ್ರಸಾದ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ದೇವಾನಂದ ಭಟ್ ಸ್ವಾಗತಿಸಿ, ಕಲಾವಿದ ಜನಾರ್ದನ ಅಮ್ಮುಂಜೆ ನಿರೂಪಿಸಿ, ಕಾರ್ಯದರ್ಶಿ ರವಿ ಪ್ರಸಾದ್ ಕೆ. ಶೆಟ್ಟಿ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಕಲಾವಿದರಿಂದ ತೆಂಕು ಬಡಗು ಕೂಡಾಟ, ‘ವೀರ- ವೈಷ್ಣವ’ ಹಾಗೂ ‘ನವರಸ ರಾಮಾಯಣ’ ತೆಂಕು ತಿಟ್ಟು ಯಕ್ಷಗಾನ ಪ್ರದರ್ಶನ ಗೊಂಡಿತು.