ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ಯಕ್ಷ ವಸುಂದರ’ ಕಾರ್ಯಕ್ರಮವನ್ನು ದಿನಾಂಕ 12 ಏಪ್ರಿಲ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಗುರುಪುರದಲ್ಲಿರುವ ಮಾಣಿಬೆಟ್ಟು ಗುತ್ತು ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಮಾಜಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಅಧ್ಯಕ್ಷತೆಯಲ್ಲಿ ಗೋಳಿದಡಿ ಗುತ್ತು ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. 11-00 ಗಂಟೆಗೆ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ‘ತೆಂಕುತಿಟ್ಟಿ ಯಕ್ಷಗಾನದ ಸ್ಥಿತ್ಯಂತರಗಳು’ ಎಂಬ ವಿಷಯದ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದರಾದ ಡಾ. ತಾರಾನಾಥ ವರ್ಕಾಡಿ ಇವರು ಪ್ರಸ್ತಾವನೆ ಮಾಡಲಿದ್ದು, ‘ಭಾಗವತಿಕೆ’ ಬಗ್ಗೆ ಉಪನ್ಯಾಸಕ ಸುನೀಲ್ ಪಲ್ಲಿಮಜಲು, ‘ಅರ್ಥಗಾರಿಕೆ’ ಬಗ್ಗೆ ಯಕ್ಷಗಾನ ಬಹುಶ್ರುತರಾದ ಶಾಂತರಾಮ ಕುಡ್ವ, ‘ಮುಖವರ್ಣಿಕೆ’ ಬಗ್ಗೆ ಉಪನ್ಯಾಸಕ ಕುಮಾರಿ ಮೈತ್ರಿ ಭಟ್, ‘ವೇಷಭೂಷಣ’ ಬಗ್ಗೆ ಹಿರಿಯ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ, ‘ಸ್ತ್ರೀ’ ವೇಷ’ದ ಬಗ್ಗೆ ಸಂಜಯ ಕುಮಾರ್ ಶೆಟ್ಟಿ ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 1-30 ಗಂಟೆಗೆ ‘ವ್ಯಾಸ ಸಂಪ್ರದಾನ’ ಎಂಬ ಪ್ರಸಂಗದ ತಾಳಮದ್ದಳೆ, ಸಂಜೆ 4-30 ಗಂಟೆಗೆ ಸಮಾರೋಪ ಸಮಾರಂಭ ಮತ್ತು ರಾತ್ರಿ 10-30 ಗಂಟೆಗೆ ಅಹೋರಾತ್ರಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.