ಕೋಟ : ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನ ಹಂದಟ್ಟು –ಕೋಟ ಇಲ್ಲಿ ವರ್ಷಂಪ್ರತಿ ಅಕ್ಷಯ ತೃತೀಯಾದಂದು ನಡೆಯುವ ರಥೋತ್ಸವದ ಮುನ್ನಾ ದಿನದ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ದಿನಾಂಕ 09-05-2024ರಂದು ಸಂಪನ್ನಗೊಂಡಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಅಮರ ಹಂದೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಧಾರ್ಮಿಕ ಉಪನ್ಯಾಸ ನೀಡಿದರು. ಯಕ್ಷಗಾನ ಕಲಾ ಸಂಘಟಕ ಹಾಗೂ ಚಿಂತಕರಾದ ಜನಾರ್ದನ ಹಂದೆ, ಹಂದೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಜಾರಾಮ ಹಂದೆ, ಕಟ್ಟೆ ಗೆಳೆಯರು ಹಂದಟ್ಟು ಕೋಟ ಇದರ ಸುರೇಶ ಪೂಜಾರಿ, ಉದಯ ಹಂದೆ ಬೆಂಗಳೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೃಷ್ಣಮೂರ್ತಿ ಉರಾಳ, ಜಯರಾಮ ಶೆಟ್ಟಿ, ಯಕ್ಷಗಾನ ನೇಪಥ್ಯ ಕಲಾವಿದರಾದ ರಾಜು ಪೂಜಾರಿ, ಸಮಾಜ ಸೇವಾ ನಿರತೆ ಭಾರತಿ ವಿ. ಮಯ್ಯ, ಡಾಕ್ಟರೇಟ್ ಪದವಿ ಪಡೆದ ಡಾ. ಗಣೇಶ ಉರಾಳ, ಸ್ಥಳ ದಾನಿಗಳಾದ ಮಹಾಲಕ್ಷ್ಮೀ ಹಂದೆ, ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ರಾಧಾ ಮರಕಾಲ್ತಿ ಇವರಿಗೆ ದೇವಳದ ವತಿಯಿಂದ ವಿಶೇಷ ಪುರಸ್ಕಾರ ನೀಡಲಾಯಿತು. ರಾಷ್ಟ್ರ ಮಟ್ಟದ ಅಬಾಕಸ್ ವಿಜೇತ ಅದ್ವಿತ್, ರಾಷ್ಟ್ರ ಮಟ್ಟದ ಕರಾಟೆಯಲ್ಲಿ ವಿಜೇತ ಪ್ರಜಿತ್, ವಿಭಾಗ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸಾಧಕ ಮನ್ವಿತ್ ಇವರಿಗೂ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ನಿವೃತ್ತ ಶಿಕ್ಷಕ ಹಂದಟ್ಟು ಸೂರ್ಯನಾರಾಯಣ ಹಂದೆ ಮತ್ತು ಯಶೋದಾ ಹಂದೆ ಅವರ ಪ್ರಾಯೋಜಕತ್ವದಲ್ಲಿ ಮಂದಾರ್ತಿ ಮೇಳದ ಕಮಲಶಿಲೆ ಮಹಾಬಲ ದೇವಾಡಿಗ, ಹಟ್ಟಿಯಂಗಡಿ ಮೇಳದ ಹಳ್ಳಾಡಿ ಜಯರಾಮ ಶೆಟ್ಟಿ, ಮಡಾಮಕ್ಕಿ ಮೇಳದ ಹೊಳೆಮಗೆ ನಾಗಪ್ಪ, ಮಕ್ಕೆಕಟ್ಟು ಮೇಳದ ರಮೇಶ್ ಭಂಡಾರಿ ಮೂರುರು, ಕಮಲಶಿಲೆ ಮೇಳದ ಲಕ್ಷ್ಮಣ ಭಂಡಾರಿ, ಸಾಲಿಗ್ರಾಮ ಮೇಳದ ಕ್ಯಾದಿಗಿ ಮಹಾಬಲೇಶ್ವರ ಭಟ್ ಈ ಆರು ಮಂದಿ ಹಾಸ್ಯ ಕಲಾವಿದರಿಗೆ ತಲಾ ಐದು ಸಾವಿರ ರೂಪಾಯಿಗಳ ನಗದಿನೊಂದಿಗೆ ಸನ್ಮಾನಿಸಲಾಯಿತು. ದಿ. ನರಸಿಂಹ ಸೋಮಯಾಜಿ ಹಂದಟ್ಟು ಇವರು ಕೊಡಮಾಡಿದ ಹತ್ತು ಸಾವಿರ ರೂಪಾಯಿಗಳನ್ನೊಳಗೊಂಡ ಕಲಾ ಪೋಷಕ ನರಸಿಂಹ ಸೋಮಯಾಜಿ ಪ್ರಶಸ್ತಿಯನ್ನು ಪ್ರಸಿದ್ಧ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಇವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಂದಟ್ಟು ವಿನಾಯಕ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಡಾ. ಹೆಚ್. ವೆಂಕಟರಮಣ ಸೋಮಯಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿ, ಶಿಕ್ಷಕಿ ಆಶಾ ಕಿರಣ್ ಸನ್ಮಾನ ಪತ್ರ ವಾಚಿಸಿ, ಆನೆಗುಡ್ಡ ದೇವಸ್ಥಾನದ ನಿವೃತ್ತ ಪ್ರಬಂಧಕ ಆನಂದರಾಮ ಉರಾಳ ಧನ್ಯವಾದಗೈದರು. ಸುಜಾತ ಬಾಯ್ರಿ, ಮಂಜುನಾಥ ಉರಾಳ, ಜಾನಕಿ ಹಂದೆ ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕೆ. ಮೋಹನ್ ನಿರ್ದೇಶನದಲ್ಲಿ ಸುದರ್ಶನ ಉರಾಳ ಸಂಯೋಜನೆಯ ‘ಯಕ್ಷದೇಗುಲ’ ಬೆಂಗಳೂರು ಇಲ್ಲಿಯ ಕಲಾವಿದರು ಪ್ರಸ್ತುತಪಡಿಸಿದ `ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನಗೊಂಡಿತು. ಪ್ರದರ್ಶನದಲ್ಲಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ಸುಜಯೀಂದ್ರ ಹಂದೆ, ಉದಯ ಕಡಬಾಳ, ತಮ್ಮಣ್ಣ ಗಾಂವ್ಕರ್, ಸ್ಫೂರ್ತಿ ಭಟ್, ಆದಿತ್ಯ ಭಟ್, ರಾಜು ಪೂಜಾರಿ, ನಾಗರಾಜ ಪೂಜಾರಿ ಕಲಾವಿದರಾಗಿ ಭಾಗವಹಿಸಿದ್ದರು.