ಸುಳ್ಯ : ಸುಳ್ಯದ ರಂಗ ಮಯೂರಿ ಕಲಾ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಯಕ್ಷಗಾನ ಗೋಷ್ಠಿ ಮತ್ತು ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 06-07-2024ರಂದು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗ ಮಯೂರಿ ಕಲಾಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಹಿರಿಯ ಉದ್ಯಮಿ ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಅರಂಬೂರುರವರು ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಯಕ್ಷಗಾನ ಕಲಾವಿದ ಡಾ. ಪ್ರಭಾಕರ ಶಿಶಿಲ ಇವರು ‘ಯಕ್ಷಗಾನದ ಬೆಳವಣಿಗೆಯಲ್ಲಿ ಸಹಭಾಗಿತ್ವ’ ಎಂಬ ವಿಷಯದಲ್ಲಿ, ಲೇಖಕರು ಯಕ್ಷಗಾನ ಕಲಾವಿದ ಶ್ರೀ ನಾರಾಯಣ ದೇಲಂಪಾಡಿಯವರು ‘ಯಕ್ಷಗಾನ ಸಂಘಟನೆಯ ಸವಾಲುಗಳು ಮತ್ತು ಪರಿವಾರ’ ವಿಷಯದ ಕುರಿತು ಹಾಗೂ ಲೇಖಕರು, ಸಂಶೋಧಕರಾದ ಡಾ. ಸುಂದರ ಕೇನಾಜೆಯವರು ‘ಯಕ್ಷಗಾನವನ್ನು ತಲೆಮಾರಿಗೆ ವರ್ಗಾಯಿಸುವ ಸಾಧ್ಯತೆಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.
ಪೋಷಕ ಕಮಿಟಿ ಸದಸ್ಯ ಭವಾನಿ ಶಂಕರ ಅಡ್ತಲೆ, ರಂಗ ಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗ ಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ, ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕವಿ ಮೂಲಿಕೆ ರಾಮಕೃಷ್ಣಯ್ಯ ವಿರಚಿತ ‘ಭಕ್ತ ಸುಧನ್ವ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಯನ್ನು ಖ್ಯಾತ ಕಲಾವಿದರು ಪ್ರಸ್ತುತಪಡಿಸಿದರು.