ಸಂಪೆಕಟ್ಟೆ : ಕಡಕೋಡು ಶ್ರೀ ಸತ್ಯಗಣಪತಿ ದೇವಸ್ಥಾನ ಸಂಪೆಕಟ್ಟೆಯಲ್ಲಿ ದೇಗುಲದ ಹನ್ನೊಂದನೇ ವರ್ಧಂತಿ ಉತ್ಸವದ ಪ್ರಯುಕ್ತ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ‘ಕಂಸವಧೆ’ ಯಕ್ಷಗಾನ ಪ್ರದರ್ಶನವು ದಿನಾಂಕ 10 ಮೇ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾಗವತ ಲಂಬೋದರ ಹೆಗಡೆ ನಿಟ್ಟೂರು ಮಾತನಾಡಿ “ಜಾಲ ತಾಣಗಳ ಭರಾಟೆಯಲ್ಲಿ ರಂಗದ ಮುಂದೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದ ಕಾಲಘಟ್ಟದಲ್ಲಿ ಸಂಪೆಕಟ್ಟೆಯಂತಹ ಪ್ರದೇಶದಲ್ಲಿ ಕಿಕ್ಕಿರಿದ ಜನಸಂದಣಿ ಪುರಾತನ ಕಾಲದ ನೆನಪನ್ನು ಮರುಕಳಿಸಿತು. ಸದ್ಯದ ಪ್ರೇಕ್ಷಕರ ಮನೋಭಿರುಚಿ ಬದಲಾಗಿದೆ. ದುಃಖದ ಪ್ರಸ್ತುತಿಗೂ ಕರತಾಡನ ಮಾಡುವ ಸ್ಥಿತಿ ಉಂಟಾಗಿದೆ. ದುಃಖ ಭಾವದ ಪ್ರಸ್ತುತಿಯಲ್ಲಿ ಕರತಾಡನವೆನ್ನುವುದು ಕಥಾ ಪ್ರಸ್ತುತಿಗೆ ಭಂಗ ಉಂಟಾಗುತ್ತದೆ” ಎಂದು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ, ಶ್ರೀಷ ತೆಕ್ಕಟ್ಟೆ, ಸುಹಾಸ ಕರಬ, ವೆಂಕಟೇಶ ವೈದ್ಯ ಹಾಗೂ ಕಲಾವಿದರು ಉಪಸ್ಥಿತರಿದ್ದರು.