ಪ್ರತಿಯೊಬ್ಬರನ್ನೂ ಒಳಗೊಳ್ಳುವ, ಸಮಾಜ ಬೆಸೆವ ಕಲೆ ಯಕ್ಷಗಾನ
13 ಫೆಬ್ರವರಿ 2023, ಉಡುಪಿ: ಭಾರತೀಯ ಸಂಸ್ಕೃತಿಯ ಮೂವರು ಮಕ್ಕಳಂತಿರುವ ವೇದ ವೇದಾಂತ, ಮಹಾಕಾವ್ಯಗಳ ಹೊರತು ಪುರಾಣ ಪ್ರಪಂಚದ ವಿರುದ್ಧ ಸೋ ಕಾಲ್ಡ್ ಬುದ್ಧಿ ಜೀವಿಗಳು ದಾಳಿ ನಡೆಸಿ ಸಮಾಜ ಒಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಉಡುಪಿ ಮೂಲದ ಬೆಂಗಳೂರಿನ ಲೇಖಕ ರೋಹಿತ್ ಚಕ್ರತೀರ್ಥ ಆರೋಪಿಸಿದ್ದಾರೆ.
ಅವರು ಕುಂಜಿಬೆಟ್ಟಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಂಗವಾಗಿ ಕೆರೆಮನೆ ಶಿವರಾಮ ಹೆಗಡೆ ವೇದಿಕೆಯಲ್ಲಿ ಗೋಷ್ಟಿಗಳನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ,
ಪೂರ್ಣ ಲಿಖಿತವೂ ಆಶುವೂ ಅಲ್ಲದ, ಪಠ್ಯ ಗದ್ಯಗಳ ಸಮ್ಮಿಲನ, ದೇಶಿ ಮತ್ತು ಮಾರ್ಗ, ಸಂಸ್ಕೃತಿ ಮತ್ತು ಪ್ರಾದೇಶಿಕತೆ, ಪೌರಾಣಿಕಮತ್ತು ಸಾಮಾಜಿಕ ಸಮಸ್ಯೆಗಳ ಸಮನ್ವಯವೇ ಯಕ್ಷಗಾನ.
ಬೌದ್ಧಿಕ, ಭಾವನಾತ್ಮಕತೆ ಪ್ರಚೋದಿಸುವ, ಪಂಡಿತ ಪಾಮರರನ್ನೂ ತಲುಪುವ ಯಕ್ಷಗಾನ ಮಾನಸಿಕ ಸಂಸ್ಕಾರ ನೀಡಬಲ್ಲದು.
ಜಗತ್ತಿನ ರಾಷ್ಟ್ರಗಳ ನಾಗರಿಕತೆ ಮ್ಯೂಸಿಯಂಗಳಲ್ಲಿದ್ದರೆ ಜೀವಂತವಾದ ಭಾರತೀಯ ನಾಗರಿಕತೆಯಲ್ಲಿ ಸಾಂಸ್ಕ?ತಿಕವಾಗಿ ಜೀವಂತಿಕೆಯುಳ್ಳ ಯಕ್ಷಗಾನ ಕಲೆಯ ಬಗ್ಗೆ ಹೆಮ್ಮೆ, ಗೌರವದ ಜತೆಗೆ ಎಚ್ಚರವೂ ಬೇಕು.
ಶ್ರೇಣೀಕೃತ ಸಮಾಜ ವ್ಯವಸ್ಥೆಗೆ ಮೊದಲೇ ಹುಟ್ಟಿದ ಯಕ್ಷಗಾನ ಕಲೆ ಪುರಾಣಗಳನ್ನು ಜನರಿಗೆ ತಲುಪಿಸುವ ಬದುಕು ಬದಲಿಸುವ, ಸುಲಭ, ಪ್ರಬಲ ಮಾಧ್ಯಮ.
ಜಗತ್ತಿಗೆ ಬೇಕಾದ ವೌಲ್ಯ ಪ್ರತಿಪಾದನೆ ಪುರಾಣ ಕಾವ್ಯಗಳಿಂದ ಸಾಧ್ಯ. ಈ ಬಾರಿಯ ನಿರ್ಣಯ ಮುಂದಿನ ಸಮ್ಮೇಳನಕ್ಕೆ ಬಾರದೆ ಜಾರಿಯಾಗಬೇಕು.
*ಅನ್ಯ ಜಿಲ್ಲೆಗಳಲ್ಲೂ ಯಕ್ಷಗಾನ ಸಮ್ಮೇಳನ ನಡೆಯಬೇಕು. ಶಾಲಾ ಪಠ್ಯಕ್ರಮದಲ್ಲಿ ಯಕ್ಷಗಾನ ಸೇರಬೇಕು. ಯಕ್ಷಗಾನದ ಆರೇಳು ಲಕ್ಷ ಪದ್ಯಗಳಿದ್ದು ಎನ್ ಇಪಿ ಹೊಸ ಪಠ್ಯದಲ್ಲಿ 6ರಿಂದ 10ನೇ ತರಗತಿಯ ಪಾಠದಲ್ಲಿ ಯಕ್ಷಗಾನದ ಪದ್ಯ ಅಳವಡಿಸಬೇಕು ಎಂದರು.
ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಉಪಸ್ಥಿತರಿದ್ದರು. ಬಳಿಕ ಯಕ್ಷ ಶಿಕ್ಷಣದ ಸವಾಲುಗಳು ಗೋಷ್ಟಿಯು ಡಾ.ಕೆ.ಎಂ.ರಾಘವ ನಂಬಿಯಾರ್‌ಅಧ್ಯಕ್ಷತೆ ಹಾಗೂ ಯಕ್ಷಗಾನ ಕನ್ನಡದ ಅಸ್ಮಿತೆ ಗೋಷ್ಟಿಯು ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಡಾ.ಆನಂದರಾಮ ಉಪಾಧ್ಯ(ಯಕ್ಷಗಾನದ ಪಾರಂಪರಿಕ ಹಾಗೂ ಪ್ರಾದೇಶಿಕ ಪಠ್ಯಗಳು) , ಗುಂಡ್ಮಿ ಸದಾನಂದ ಐತಾಳ್(ಆಧುನಿಕ ಶಿಕ್ಷಣ ಮಾದರಿಯ ಪಠ್ಯದ ಪ್ರಸ್ತುತತೆ), ತಾರಾನಾಥ ವರ್ಕಾಡಿ( ಯಕ್ಷಗಾನ ಮತ್ತು ಶಾಸೀಯತೆಯ ಇತಿಮಿತಿಗಳು), ಡಾ.ಪಾದೇಕಲ್ಲು ವಿಷ್ಣು ಭಟ್( ಕನ್ನಡ ಶಾಸೀಯ ಭಾಷೆಗೆ ಯಕ್ಷಗಾನದ ಕೊಡುಗೆ), ಡಾ.ದಿನಕರ ಪಚ್ಚನಾಡಿ(ಯಕ್ಷಗಾನ ಪ್ರಸಂಗ ಪಠ್ಯಗಳಲ್ಲಿ ಕಾವ್ಯ ಸೌಂದರ್ಯ), ಡಾ.ಶ್ರೀಧರ ಹೆಗಡೆ(ಯಕ್ಷಗಾನ ಮತ್ತು ಕನ್ನಡದ ಆಶು ಪರಂಪರೆಯ ಸ್ವರೂಪ) ಪ್ರಬಂಧ ಮಂಡಿಸಿದರು.
ಯಕ್ಷ ವೇಷ ಧರಿಸಿ, ನಟ ರಮೇಶ್ ಅರವಿಂದ್ ಜತೆ ಸೆಲ್ಛಿ ಸಂಭ್ರಮ!
ಒಂದು ಸಾವಿರ ರೂ. ನೀಡಿದರೆ ಮುಖಕ್ಕೆ ಬಣ್ಣ ಬಳಿದು, ವೇಷ ಭೂಷಣ ತೊಡಿಸಿ ಫೋಟೋ ತೆಗೆಯುವ ಸಂಭ್ರಮ ಒಂದೆಡೆಯಾದರೆ ಪ್ರಮಾಸೋದ್ಯಮ ಇಲಾಖೆ ಮಳಿಗೆ ಎದುರು ಯಕ್ಷ ವೇಷಧಾರಿ ನಟ ರಮೇಶ್ ಅವರಿಂದ ಜತೆ ಯಕ್ಷ ವೇಷ ಸ್ಟ್ಯಾಂಡಲ್ಲಿ ನಿಂತು ಹೆಣ್ಮಕ್ಕಳು, ಮಕ್ಕಳು, ಯುವಕರು, ಹಿರಿಯ ನಾಗರಿಕರು ಫೋಟೋ ತೆಗೆಸಿ ಸಂಭ್ರಮಿಸಿದರು.
ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ನಡೆಯುತ್ತಿರುವ ಕುಂಜಿಬೆಟ್ಟಿನ ಎ. ಎಲ್. ಎನ್. ಕ್ರೀಡಾಂಗಣದಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಹಣ್ಣು, ಐಸ್‌ಕ್ರೀಮ್, ತಂಪು ಪಾನೀಯ ಬಿಸಿಲ ದಾಹ ತಣಿಸಿ ಮೈ ಮನಸ್ಸಿಗೆ ತಂಪು ನೀಡಿದರೆ ಮಂಗಳೂರು ಮೂಡುಶೆಡ್ಡೆಯ ಶೋಭಿತ್ ಬೆಲ್ಲದಿಂದ ಹಲಸಿನ ಹೋಳಿಗೆ ಸ್ಥಳದಲ್ಲೇ ತಯಾರಿಸಿ(25ರೂ.) ನೀಡಿದರು.
ಚಂಡೆ, ಮದ್ದಳೆ ನಾದ, ಭಾಗವತಿಕೆಯ ಏರುಸ್ವರದ ನಿನಾದ
ಕೆರೆಮನೆ ಶಿವರಾಮ ಹೆಗಡೆ ವೇದಿಕೆಯಲ್ಲಿ ಗೋಷ್ಟಿ, ಪ್ರಬಂಧ ಮಂಡನೆಗಳ ಮೂಲಕ ಅಂದು, ಇಂದು, ಮುಂದಿನ ಯಕ್ಷಗಾನದ ಚಿಂತನ ಮಂಥನ ನಡೆಯಿತು. ಮಲ್ಪೆ ಶಂಕರನಾರಾಯಣ ಸಾಮಗ ವೇದಿಕೆಯಲ್ಲಿ ದುಬೈ ಕಲಾವಿದರ ತೆಂಕುತಿಟ್ಟಿನ ಪಾಂಚಜನ್ಯ ಯಕ್ಷಗಾನಕ್ಕೆ ಅಮೃತಾ ಹೆಗಡೆಯ ಭಾಗವತಿಕೆಯಿತ್ತು. ಅಳಿಕೆ ರಾಮಯ್ಯ ರೈ ವೇದಿಕೆಯಲ್ಲಿ ಹಿಡಿಂಬಾ ವಿವಾಹ ಬಡಗು ಯಕ್ಷಗಾನದ ಬಳಿಕ ಕಲ್ಲುರ್ಟಿ ಕಲ್ಕುಡ(ತೆಂಕು) ತುಳು ಯಕ್ಷಗಾನ ಪ್ರದರ್ಶನವಿತ್ತು.
ಸ್ವಾತಂತ್ರ್ಯ ಪೂರ್ವೋತ್ತರದ ಯಕ್ಷ ಪ್ರದರ್ಶಿನಿ
ಚಂಡೆ, ಮದ್ದಳೆ, ತಾಳದ ಸದ್ದು, ಭಾಗವತಿಕೆಯ ಏರು ಸ್ವರಕ್ಕೆ ಹಲವು ಕಲಾಪ್ರೇಮಿಗಳಿಗಂತೂ ನಿಂತಲ್ಲಿ ನಿಲ್ಲಲಾಗಲಿಲ್ಲ, ಕೂತಲ್ಲಿ ಕೂರಲಾಗದಂತಹ ಕಲಾಭಿಮಾನವನ್ನು ಕಲಾಪ್ರಿಯರು, ರಸಿಕರು ತೋರಿದರು. ಯಕ್ಷ ಪ್ರದರ್ಶಿನಿಯಲ್ಲಿ ಸ್ವಾತಂತ್ರ್ಯ ಹೋರಾಟದಿಂದ ತೊಡಗಿ ಚಂಡೆ, ಮದ್ದಳೆ, ಭಾಗವತರು, ವೇಷಧಾರಿಗಳಾಗಿ 200ಕ್ಕೂ ಅಧಿಕ ಕಲಾವಿದರ ಚಿತ್ರ ಪರಿಚಯಕ್ಕೆ ನಾಟ್ಯ ಭಂಗಿ ಗಣಪತಿಯ ಸನ್ನಿಧಾನ ಭಕ್ತಿಘಿ, ಭಾವದ ಹೊಸ ಕಳೆ ನೀಡಿತು.
ಸಾಂಪ್ರದಾಯಿಕ, ಆಧುನಿಕ ರಂಗಸ್ಥಳದ ಭಕ್ತಿ ಭಾವ
ಮಡಲ ಹಾಸು, ಆವರಣದಲ್ಲಿ ಕಾಜಾರಗುತ್ತಿನ ದಶಾವತಾರ ಯಕ್ಷಗಾನ ಕಲಾಮಂಡಳಿ ವತಿಯಿಂದ ಕಾಲು ದೀಪಗಳೊಂದಿಗೆ ಯಕ್ಷಗಾನದ ಪಾರಂಪರಿಕ ವೇಷಭೂಷಣ, ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿದ್ದು ವೇಷಭೂಷಣ ಒಯ್ಯುವ ಹಳೆಯ ಬೆತ್ತದ ಪೆಟ್ಟಿಗೆ ಗಮನ ಸೆಳೆಯಿತು. ಮತ್ತೊಂದೆಡೆ ಹಿಂದೆ ಗದ್ದೆಯಲ್ಲೇ ನೆಲ ರಂಗಸ್ಥಳ, ಬಾಳೆದಿಂಡಿನ ಕಂಬ, ಮಾವಿನ ಸೊಪ್ಪಿನ ಅಲಂಕಾರದ ಪಾರಂಪರಿಕ ರಂಗಸ್ಥಳಕ್ಕೆ ಕಾಲುದೀಪ, ದೊಂದಿ ವ್ಯವಸ್ಥೆಯ ಮೆರುಗಿತ್ತು.
ವೇಷಭೂಷಣ ಹೊಲಿದು ಕೊಡುವ ಹೆಣ್ಮಕ್ಕಳು
ಅಟ್ಟಣಿಗೆಯ ರಂಗಸ್ಥಳ ಆಧುನಿಕ ರಂಗವ್ಯವಸ್ಥೆಯನ್ನು ಪ್ರತಿಬಿಂಬಿಸಿದರೆ ಸಾಂಪ್ರದಾಯಿಕ ಚೌಕಿಯು ಗಣಪತಿ ಸಹಿತ ವೇಷಕ್ಕೆ ಅನುಗುಣವಾಗಿ ಪೆಟ್ಟಿಗೆಯನ್ನು ಜೋಡಿಸಿಡುವ ವ್ಯವಸ್ಥೆಯನ್ನು ಬಿಂಬಿಸಿತು. ಶೇಣಿ ಪುಸ್ತಕಗಳ ಮಳಿಗೆ, ವೇಷಭೂಷಣಗಳ ಮಳಿಗೆ, ವೇಷ ಹೊಲಿದು ಕೊಡುವ ಸಿದ್ಧಾಪುರ ಶಶಿಕಾಂತ ಶೆಟ್ಟರ ಯಕ್ಷಚಂದ್ರಿಕೆ ಬಳಗದ ಇಬ್ಬರು ಹೆಣ್ಮಕ್ಕಳು ಪುರುಸೊತ್ತಿಲ್ಲದಂತೆ ಹೊಲಿಗೆ ಯಂತ್ರವನ್ನು ತುಳಿಯುತ್ತಾ ಬ್ಯುಸಿಯಾಗಿದ್ದರು.
ಯಕ್ಷ ವೇಷಗಳ ಮಾಯಾ ಲೋಕ, ಚಂಡೆ ಮದ್ದಳೆ ತಯಾರಿ
ಮನೋಹರ್ ಎಸ್. ಕುಂದರ್ ಎರ್ಮಾಳು ಬಡಾ ನಾಲ್ಕೈದು ದಶಕಗಳಲ್ಲಿ ತೆಗೆದ ಯಕ್ಷ ವೇಷ, ಕಲಾವಿದರ, ದೊಡ್ಡಾಟ, ಮೂಡಲಪಾಡಯ, ಘಟ್ಟದ ಕೋರೆಯ ವೇಷಗಳ ಛಾಯಾಸಂಗ್ರಹದ ಯಕ್ಷ ಮಾಯಾ ಲೋಕವನ್ನೇ ತೆರೆದಿಟ್ಟಿದ್ದರು. ಸದಾಶಿವ ಪೆರ್ಡೂರು ಯಕ್ಷ ವೇಷಭೂಷಣಗಳ ದುರಸ್ಥಿ ಮಾತ್ರವಲ್ಲ ಹೊಸದು, ಚಂಡೆ ತಯಾರಿ, ದುರಸ್ಥಿಗೂ ಸಿದ್ಧರಿದ್ದರು. ಭಾಸ್ಕರ ದೇವಾಡಿಗ ಇಡಗುಂಜಿ ಹೊಸ ಮದ್ದಳೆ ರಚನೆ, ಹಳೆ ಮದ್ದಳೆ ದುರಸ್ಥಿಯಲ್ಲಿ ತಲ್ಲೀನರಾಗಿದ್ದರು.
ಪುಸ್ತಕ ಪ್ರದರ್ಶನ….
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಯಕ್ಷಗಾನ ಕೇಂದ್ರಘಿ, ಪ್ರಾದೇಶಿಕ ಸಂಶೋಧನಾ ಕೇಂದ್ರದ ಪ್ರಕಟಣೆಗಳನ್ನು ಪ್ರದರ್ಶನಕ್ಕಿಟ್ಟಿದ್ದರೆ ಯಕ್ಷಗಾನ ಕಲಾರಂಗ ಹಾಗೂ ಅಂಗ ಸಂಸ್ಥೆಗಳ ಚಟುವಟಿಕೆಯ ಮಾಹಿತಿಯನ್ನು ನೀಡಲಾಯಿತು.
ಮೌಢ್ಯದ ನೆಲೆಯಲ್ಲಿ ಭಕ್ತ, ಭಕ್ತಿಯ ಲೇವಡಿ:ಕೆರೆಮನೆ
ಪಾಶ್ಚಾತ್ಯ ಚಿಂತನೆಯ ಪ್ರಭಾವಕ್ಕೆ ಒಳಗಾದವರು ಪ್ರತಿಪಾದಿಸುವ ಮೌಢ್ಯದ ನೆಲೆಯಲ್ಲಿ ಭಕ್ತ ಮತ್ತು ಭಕ್ತಿ ಲೇವಡಿಯ ವಸ್ತುವಾಗಿದ್ದರೂ ದಕ್ಷಿಣ ಏಶ್ಯಾದ ಕಲಾಪ್ರಕಾರವನ್ನು ಆರಾಧನೆ, ಭಕ್ತಿ ಸೂತ್ರವೇ ಬೆಸೆದಿದೆ ಎಂದು ವಿದ್ವಾಂಸ ಶಿವಾನಂದ ಹೆಗಡೆ ಕೆರೆಮನೆ ಹೇಳಿದರು.
ಅವರು ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಂಗವಾಗಿ ಕುಂಜಿಬೆಟ್ಟಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದ ಕೆರೆಮನೆ ಶಿವರಾಮ ಹೆಗಡೆ ವೇದಿಕೆಯಲ್ಲಿ ಯಕ್ಷಗಾನ ಮತ್ತು ಭಾರತೀಯ ಚಿಂತನೆಗಳು ಗೋಷ್ಟಿಯಲ್ಲಿ ಯಕ್ಷಗಾನ ಮತ್ತು ಭಕ್ತಿ ಚಿಂತನೆಗಳು ವಿಷಯವಾಗಿ ಪ್ರಬಂಧ ಮಂಡಿಸಿ ಮಾತನಾಡಿ, ರಸಗಳ ತಾಯಿಯಾದ ಭಕ್ತಿ ನವರಸಗಳ ಬಳಿಕದ ದಶ ರಸವಾಗಿ ಒಪ್ಪಿತ. ಯಕ್ಷಗಾನ ಪಾತ್ರಕ್ಕೆ ವೈಚಾರಿಕ ನೆಲೆಗಟ್ಟು ಬೇಕು. ಶರಣಾಗತಿ, ಪ್ರೇಮ ಭಕ್ತಿ, ವೈರ ಭಕ್ತಿಯ ವಿವಿಧ ಭಾವಗಳ ಪ್ರಸಂಗ ಯಕ್ಷಗಾನದಲ್ಲಿದೆ.
ಭಕ್ತಿ ಪಂಥದ ಚಳವಳಿ ಎಲ್ಲ ಕಲಾ ಪ್ರಕಾರಗಳಂತೆ ಯಕ್ಷಗಾನವನ್ನೂ ಆವರಿಸಿದೆ. ಪರಂಪರೆ ಬಿಟ್ಟು ಹೋಯ್ತು ಎನ್ನುವ ಕೂಗಿಗೆ ಪೂರ್ವರಂಗದಿಂದ ದೂರವಾಗಿದ್ದು ಬಹಳಷ್ಟು ಕೆಲಸ ಮಾಡಿದೆ. ಪೂಜೆ, ಪುನಸ್ಕಾರಗಳು ಸಾಂಕೇತಿಕವಾಗಿರಬೇಕು.
ಜನರು ಧಾರ್ಮಿಕ, ಆಧ್ಯಾತ್ಮಿಕ ಲೋಕ ಪ್ರವೇಶಕ್ಕೆ ಜಾತಿ, ನೀತಿ, ದೇಶ, ಪ್ರಾಂತ್ಯ ಮೀರಿ ಭಕ್ತಿ ಅವಕಾಶ ನೀಡಿದೆ. ರಂಗಭೂಮಿ ಕಲಾತ್ಮಕವಾಗಿರಬೇಕೆನ್ನು ಉದ್ದೇಶದ ಬದಲು ಧಾರ್ಮಿಕ ಆಚರಣೆಗಳ ಬಂಧನ, ಭಕ್ತಿಯ ಅತಿರೇಕದ ಬಳಕೆ ಅನಾನುಕೂಲಕರವಾಗಿದೆ.
ರಂಗಭೂಮಿಗಿರುವ ನಿಷ್ಠೆಯೂ ಭಕ್ತಿಯಾಗಿದ್ದು ರಂಗನಿಷ್ಠೆ, ಭಕ್ತಿ ಸಮನ್ವಯವಿಲ್ಲದಿದ್ದರೆ ರಂಗ ಸಾಕ್ಷಾತ್ಕಾರವಾಗದು. ಭಾವನೆ, ಜೀವನಕ್ಕೆ ಸಂಬಂಧಿಸಿದ ಭಕ್ತಿ ವಿಚಾರಹೀನರ ಕೆಲಸವಲ್ಲ ಎಂದರು.
ಯಕ್ಷಗಾನ ಕಂಡ ಮಾತೃತ್ವ ವಿಷಯವಾಗಿ ಶಿಕ್ಷಣ ಚಿಂತಕ ಡಾ.ಚಂದ್ರಶೇಖರ ದಾಮ್ಲೆ ಪ್ರಬಂಧ ಮಂಡಿಸಿದರು. ಶ್ರೀಧರ ಡಿ.ಎಸ್.ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ ಉಪಸ್ಥಿತರಿದ್ದರು. ಡಾ.ಯೋಗೀಶ್ ಕೈರೋಡಿ ನಿರೂಪಿಸಿದರು.
ವೇದ, ಪುರಾಣಗಳು ಭಾರತೀಯ ಸಂಸ್ಕತಿಯ ಜೀವಾಳ: ಸೋದೆಶ್ರೀ
ಉಡುಪಿ: ಭಾರತೀಯ ಸಂಸ್ಕೃತಿಯ ಜೀವಾಳವಾದ ವೇದ, ಪುರಾಣ, ಇತಿಹಾಸವನ್ನು ಜನಮಾನಸಕ್ಕೆ ತಲುಪಿಸುವ, ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ಯಕ್ಷಗಾನ ಜಗತ್ತಿನ ಏಕೈಕ ಜೀವಂತ ಕಲೆ ಎಂದು ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಅವರು ಯಕ್ಷಗಾನ ಕಲೆಯನ್ನೇ
ಬದುಕಿನ ಉಸಿರಾಗಿಸಿದ ಕಲಾವಿದರು, ಸಹಾಯಕರು, ಸಂಘ ಸಂಸ್ಥೆಗಳು, ಪತ್ರಿಕೆಗಳ ಸಹಿತ 75 ಸಾಧಕರಿಗೆ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಂಗವಾಗಿ ಮಲ್ಪೆ ಶಂಕರ ನಾರಾಯಣ ಸಾಮಗ ವೇದಿಕೆಯಲ್ಲಿ ಭಾನುವಾರ ಸಮ್ಮೇಳನ ಸನ್ಮಾನ ನೆರವೇರಿಸಿ ಆಶೀರ್ವಚನ ನೀಡಿದರು.
ಸರ್ವಾಂಗ ಸುಂದರ ಮೂರ್ತಿಯನ್ನು ರೂಪಿಸುವ ಶಿಲ್ಪಿಗಳಂತೆ ಯಕ್ಷಗಾನ ಕಲಾವಿದರು ಕಣ್ಣಿಗೆ ಕಾಣದ ವ್ಯಕ್ತಿಗಳನ್ನು ಪಾತ್ರಗಳ ಮೂಲಕ ಬಿಂಬಿಸುತ್ತಾರೆ. ನಿಂತ ನೀರಾಗದೆ ಕಾಲಕ್ಕೆ ತಕ್ಕಂತೆ ಯಕ್ಷಗಾನದ ಸ್ವರೂಪ, ಚೌಕಟ್ಟಿಗೆ ಧಕ್ಕೆ ಆಗದಂತೆ ಪರಿವರ್ತನೆಗಳಾಗಬೇಕು ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಎನ್.ಪಂಜಾಜೆ ಹಾಗೂ ಸುರೇಂದ್ರ ಪಣಿಯೂರು ರಚಿತ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ, ಸಮ್ಮೇಳನ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಹಿರಿಯ ವೇಷಧಾರಿ ಡಾ.ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟರಮಣ ಭಟ್, ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಉಪಸ್ಥಿತರಿದ್ದರು.
ಕೆ.ಗೋವಿಂದ ಭಟ್, ಲೀಲಾವತಿ ಬೈಪಡಿತ್ತಾಯ, ಅರುವ ಕೊರಗಪ್ಪ ಶೆಟ್ಟಿ, ಐರೋಡಿ ಗೋವಿಂದಪ್ಪ, ತೋನ್ಸೆ ಜಯಂತ ಕುರ್ಮಾ, ಕರ್ಗಲ್ಲು ವಿಶ್ವೇಶ್ವರ ಭಟ್ ಮತ್ತಿತರರು ಚೆಂಡೆ, ಮದ್ದಳೆ,ತಾಳ ನಾದದ ಹಿನ್ನೆಲೆಯಲ್ಲಿ ತಲಾ 10,000ರೂ.ಚೆಕ್ ಸಹಿತ ಪ್ರಶಸ್ತಿ ಪತ್ರ ಸ್ವೀಕರಿಸಿದರು.
ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ವಿದ್ಯಾ ಪ್ರಸಾದ್ ನಿರೂಪಿಸಿದರು. ವೆಂಕಟೇಶ್ ಭಟ್ ವಂದಿಸಿದರು.
.
ಕನ್ನಡ ಶಾಲೆಯ ಉಳಿವಿಗೆ ಗಂಭೀರವಾಗಿ ಚಿಂತಿಸಿ: ಸರಕಾರಕ್ಕೆ ಡಾ.ಜೋಷಿ ತಾಕೀತು
ಉಡುಪಿ: ಸಾಂಪ್ರದಾಯಿಕ ವೇಷ ಭೂಷಣ, ಪರಿಕರ ಉಳಿದರಷ್ಟೇ ಸಾಲದು, ಕನ್ನಡ ಭಾಷೆ, ಸಂಸ್ಕ?ತಿಯೊಂದಿಗೆ ಯಕ್ಷಗಾನದ ಉಳಿವಿನ ನಿಟ್ಟಿನಲ್ಲಿ ರಾಜ್ಯ ಸರಕಾರ ಕನ್ನಡ ಶಾಲೆ ಉಳಿಸಲು ಗಂಭೀರ ಚಿಂತನೆ, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ ತಾಕೀತು ಮಾಡಿದ್ದಾರೆ.
ಅವರು ಯಕ್ಷಗಾನ ಮತ್ತು ಭಾರತೀಯ ಚಿಂತನೆಗಳು ಗೋಷ್ಟಿಯಲ್ಲಿ ಮಾತನಾಡಿ, ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರಷ್ಟೇ ಶ್ರೇಷ್ಟರಲ್ಲ, ಪ್ರಾಥಮಿಕ ಶಾಲಾ ಮಟ್ಟದಿಂದಲೇ ಇಂಗ್ಲೀಷ್ ಅವಲಂಬನೆಯಿಂದ ಕನ್ನಡ, ಯಕ್ಷಗಾನ ಸಹಿತ ಸಂಸ್ಕ?ತಿ ಉಳಿಯದು ಎಂದು ಹೇಳಿದರು.
ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ – 2023 ಸಮಾರೋಪ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು, ಜಿಲ್ಲಾಡಳಿತ, ಉಡುಪಿ ಜಿಲ್ಲೆ ವತಿಯಿಂದ ರಾಜ್ಯ ಮಟ್ಟದ “ಸಮಗ್ರ ಯಕ್ಷಗಾನ ಸಮ್ಮೇಳನ – 2023” ಫೆಬ್ರವರಿ 11 ಮತ್ತು 12 ರಂದು 2 ದಿನಗಳ ಕಾಲ ಎಂ.ಜಿ.ಎಂ ಮೈದಾನದಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಇಂದು ದಿನಾಂಕ 12-02-2023 ರಂದು ಶಾಸಕರು, ಸಮಗ್ರ ಯಕ್ಷಗಾನ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿದರು. ಕಾಸರಗೋಡು ಎಡನೀರ್ ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚಿಸಿದರು.
ಈ ಸಂದರ್ಭದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾl ಮೋಹನ್ ಆಳ್ವ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ ಗಂಗಾಧರ ರಾವ್, ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್, ಸಮಗ್ರ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾದ ಡಾl ಎಂ. ಪ್ರಭಾಕರ್ ಜೋಶಿ, ಕಾರ್ಯಾಧ್ಯಕ್ಷರಾದ ಜಿ.ಎಲ್ ಹೆಗ್ಡೆ, ಪ್ರಧಾನ ಸಂಚಾಲಕರಾದ ಮುರಳಿ ಕಡೆಕಾರ್, ಪಿ. ಕಿಶನ್ ಹೆಗ್ಡೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.