ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಇಂಗ್ಲೀಷ್ ವಿಭಾಗ, ಕನ್ನಡ ಸಂಘ, ಯಕ್ಷಕಲಾ ಕೇಂದ್ರ ಹಾಗೂ ಎನ್.ಎಸ್. ಕಿಲ್ಲೆ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ‘ಇಂಗ್ಲೀಷ್ ಭಾಷಾ ದಿನ’ವನ್ನು ದಿನಾಂಕ 24-04-2024ರಂದು ಆಚರಿಸಿಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊರವರು ‘ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಮೂಲಗಳು ಬೇರೆಯಾಗಿದೆ. ಆದರೂ ಈ ಆಧುನಿಕ ಯುಗದಲ್ಲಿ ಒಂದು ಭಾಷೆಯ ಪದಗಳು ನಮಗರಿವಿಲ್ಲದಂತೆ ಇನ್ನೊಂದು ಭಾಷೆಯಲ್ಲಿ ಸೇರಿಕೊಂಡಿವೆ. ಈ ಭಾಷಾ ಸಂಬಂಧವು ಪ್ರತಿ ಭಾಷೆಯನ್ನು ಶ್ರೀಮಂತಗೊಳಿಸುವುದಲ್ಲದೆ, ಮಾತನಾಡುವವರ ನಡುವೆ ಸಂಭಾಷಣೆಯನ್ನು ಸುಗಮಗೊಳಿಸುತ್ತದೆ. ಮಾತುಗಾರಿಕೆಯೇ ಜೀವಾಳವಾಗಿರುವ ತಾಳಮದ್ದಳೆ ಒಂದು ಸುಂದರ ಕಲಾಪ್ರಕಾರವಾಗಿದೆ. ಇಲ್ಲಿ ಕಲಾವಿದರ ಭಾಷಾ ಜ್ಞಾನಕ್ಕೆ ಮಹತ್ವವಿದೆ. ಇಂದಿನ ದ್ವಿಭಾಷಾ ಯಕ್ಷಗಾನ ತಾಳಮದ್ದಳೆಯಲ್ಲಿ ಕಲಾವಿದರು ಎರಡು ಭಾಷೆಗಳಲ್ಲಿ ನಿರರ್ಗಳವಾಗಿ ಸಂಭಾಷಿಸಬೇಕಾಗಿದೆ. ದ್ವಿಬಾಷಾ ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸುವ ನೂತನ ಪ್ರಯೋಗದ ಮೂಲಕ ಇಂಗ್ಲೀಷ್ ಭಾಷಾ ದಿನಾಚರಣೆಯು ಅರ್ಥಪೂರ್ಣವಾಗಿ ನಡೆಯುತ್ತಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ‘ಮಂಥರೆ’ ಪ್ರಸಂಗವನ್ನು ಪ್ರಸ್ತುತ ಪಡಿಸಲಾಯಿತು. ದ್ವಿಭಾಷೆಯಲ್ಲಿ ಮನೋಜ್ಞವಾಗಿ ಮೂಡಿ ಬಂದ ಯಕ್ಷ ಸಂವಾದ ‘ಮಂಥರೆ’ ಪ್ರೇಕ್ಷಕರ ಮನಸೂರೆಗೊಂಡಿತು. ಮಂಥರೆಯಾಗಿ ಕಿರಣ ಕುಮಾರ ಪವನಕೆರೆ ಮತ್ತು ಕೈಕೇಯಿಯಾಗಿ ಹಿರಿಯ ಯಕ್ಷಗಾನ ವಿದ್ಯಾಂಸ ಪ್ರೊ. ಎಂ.ಎಲ್. ಸಾಮಗ ಇವರುಗಳು ತಮ್ಮ ಅಮೋಘ ವಾಕ್ಚಾತುರ್ಯದಿಂದ ಪಾತ್ರಗಳ ಪರಕಾಯ ಪ್ರವೇಶ ಮಾಡಿ ಗಮನ ಸೆಳೆದದರು. ಭಾಗವತರಾಗಿ ಪ್ರಶಾಂತ್ ರೈ ಹಾಗೂ ಮದ್ದಳೆವಾದಕರಾಗಿ ಚೈತನ್ಯ ಕೃಷ್ಣ ಪದ್ಯಾಣ ಯಕ್ಷಸಂವಾದದ ಮೆರುಗನ್ನು ಹೆಚ್ಚಿಸಿದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಭಾರತಿ ಎಸ್. ರೈ ಸ್ವಾಗತಿಸಿ, ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯ ಕುಮಾರ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತ ಕಲಾ ಘಟಕದ ಸಹಸಂಯೋಜಕರಾದ ಸುರಕ್ಷಾ ಎಸ್. ವಂದಿಸಿ, ಯಕ್ಷಕಲಾ ಕೇಂದ್ರದ ಸಂಯೋಜಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಹಾಗೂ ಸಂತ ಫಿಲೋಮಿನಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ದತ್ತಾತ್ರೇಯ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯಕ್ಷಾಮೃತ ಸರ್ಟಿಫಿಕೇಟ್ ಕೋರ್ಸ್ ಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಮತ್ತು ಲಲಿತ ಕಲಾ ಘಟಕದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.