ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಯಕ್ಷ ಶಿಕ್ಷಣ ನಾಟ್ಯ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 01.07.2024 ರಂದು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ನಡೆಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ ಪಟ್ಲ ಫೌಂಡೇಶನ್ನಿನ ಕಾರ್ಯಚಟುವಟಿಕೆಗಳು, ಧ್ಯೇಯೋದ್ದೇಶಗಳ ಬಗ್ಗೆ ಸವಿವರ ಮಾಹಿತಿ ನೀಡಿ ನಾಟ್ಯ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಲಾ ನೈಪುಣ್ಯತೆ ಪಡೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ವಹಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕುಮಾರ್ ಬಾಳೆಕಲ್ಲು ಮಾತನಾಡಿ ತರಬೇತಿ ತರಗತಿಗಳಿಗೆ ಶುಭ ಕೋರಿದರು. ಎಸ್.ಡಿ.ಎಂ.ಸಿ. ಸದಸ್ಯರಾದ ವಿಷ್ಣು ಕನ್ನಡಗುಳಿ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡಲಾಗುವ ಈ ಉಚಿತ ಯಕ್ಷಗಾನ ನಾಟ್ಯ ತರಗತಿಗಳಿಗಾಗಿ ಪ್ರಾಯೋಜಕರನ್ನು ಅಭಿನಂದಿಸಿದರು.
ಯಕ್ಷ ಗುರು ಗಣೇಶ್ ಕೊಂದಲಕೋಡಿ ಪ್ರಶಿಕ್ಷಣಾರ್ಥಿಗಳಿಗೆ ಸಾಂಕೇತಿಕವಾಗಿ ಮೊದಲ ತರಬೇತಿ ನಡೆಸಿದರು. ಪಟ್ಲ ಫೌಂಡೇಶನ್ ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ಭಾಸ್ಕರ ಶೆಟ್ಟಿ, ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಉಮಾನಾಥ ರೈ ಮೇರಾವು ಭಾಗವಹಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಲತಾ ಯು. ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿ, ಕನ್ನಡ ಭಾಷಾ ಶಿಕ್ಷಕ ಸುಧೀಶ್ ಕೆ. ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಕ ಉಮಾನಾಥ ರೈ ಮೇರಾವು ವಂದಿಸಿದರು.