ಸುರತ್ಕಲ್ : ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ವತಿಯಿಂದ ಯಕ್ಷಧ್ರುವ ಯಕ್ಷ ಶಿಕ್ಷಣ ಉಚಿತ ತರಗತಿಯು ದಿನಾಂಕ 21-06-2024ರಂದು ಪ್ರಾರಂಭಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಮುಂಬೈನ ವಿ.ಕೆ. ಸಮೂಹ ಸಂಸ್ಥೆಯ ಸಿ.ಎಂ.ಡಿ. ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಇವರು ಮಾತನಾಡಿ “ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಯಕ್ಷಗಾನದಲ್ಲೂ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳ ಮನೋಬಲ ವೃದ್ಧಿಯಾಗುತ್ತದೆ” ಎಂದು ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಸ್ಥಾಪಕ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, “ಟ್ರಸ್ಟ್ ವತಿಯಿಂದ 80 ಶಾಲೆಗಳಲ್ಲಿ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ಶಿಕ್ಷಣ ತರಬೇತಿ ನೀಡಲಾಗುತ್ತಿದೆ” ಎಂದರು.
ಪಟ್ಲ ಫೌಂಡೇಷನ್‌ನ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್. ಪೂಂಜ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ಮಾಧವ ಶೆಟ್ಟಿ ಬಾಳ, ಶಾಲೆಯ ಮುಖ್ಯ ಶಿಕ್ಷಕಿ ಕುಸುಮಾ, ಯಕ್ಷಗಾನ ಶಿಕ್ಷಕಿ ಪೂರ್ಣಿಮಾ ಯತೀಶ್ ರೈ, ಫೌಂಡೇಷನ್‌ನ ಸುರತ್ಕಲ್ ಘಟಕದ ಕಾರ್ಯದರ್ಶಿ ಗಂಗಾಧರ ಪೂಜಾರಿ, ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಭಾಗವಹಿಸಿದ್ದರು. ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಹರೀಶ್ ವಂದಿಸಿದರು.