08 ಮಾರ್ಚ್ 2023, ಮಂಗಳೂರು : ಉರ್ವದ ಶ್ರೀಕೃಷ್ಣ ಮಂದಿರದಲ್ಲಿ ನಮ್ಮ ತಂಡದ ಪ್ರಥಮ ಯಕ್ಷಗಾನ ಕಾರ್ಯಕ್ರಮ “ಕೃಷ್ಣಾರ್ಜುನ ಕಾಳಗ” ಯಶಸ್ವಿಯಾಗಿ ನಡೆಯಿತು. ನಮ್ಮ ಬೋಳೂರು ಗ್ರಾಮದ ಕಲಾಸಕ್ತ ಮಹಿಳೆಯರನ್ನು ಸೇರಿಸಿ ನಾನು ನೇತೃತ್ವ ವಹಿಸಿದ್ದ ಕಾರ್ಯಕ್ರಮವದಾಗಿತ್ತು. ಕಾರ್ಯಕ್ರಮ ಮುಗಿದ ನಮ್ಮನ್ನು ಮಾತನಾಡಿಸಿದವರಲ್ಲಿ ಓರ್ವ ಮಹಿಳೆ ಎಷ್ಟೊಳ್ಳೆಯ ಕಾರ್ಯಕ್ರಮ. ನನಗೂ ವೇಷ ಮಾಡಬಹುದಿತ್ತು. ಒಮ್ಮೆ ಯಕ್ಷಗಾನದಲ್ಲಿ ವೇಷ ಹಾಕಿ ಕುಣಿಯಬೇಕೆಂಬ ಹಂಬಲವಿದೆ. ಬಾಲ್ಯದಲ್ಲಿ ಶಾಲಾ ಕಾರ್ಯಕ್ರಮದಲ್ಲಿ ನರ್ತಿಸಿದ ಅನುಭವವಿದೆ. ಧೈರ್ಯವಿದೆ. ಮುಂದಿನ ನಿಮ್ಮ ಕಾರ್ಯಕ್ರಮ ಇದ್ದಲ್ಲಿ ನನಗೂ ಪುಟ್ಟ ಅವಕಾಶ ಸಿಗಬಹುದೇ? 66 ವಯಸ್ಸಿನ ನನ್ನನ್ನು ತಂಡಕ್ಕೆ ಸೇರಿಸಲು ಸಾಧ್ಯ ಆದೀತೋ? ಎಂಬುದಾಗಿ ಕೇಳಿದರು. ಸಾಧನೆಗೆ ವಯಸ್ಸು ಮುಖ್ಯ ಅಲ್ಲ ಮನಸ್ಸು ಮುಖ್ಯ ಎಂದು ಉತ್ತರಿಸಿ, ನೀವು ಬರ್ತೀರಾದರೆ ಅವಕಾಶ ಕೊಡೋಣ ಎಂದೆ. ಮುಂದಿನ ವರುಷದ ಅದೇ ಸ್ಥಳದ ಕಾರ್ಯಕ್ರಮದಲ್ಲಿ ಮತ್ತೆ ನಮ್ಮ ತಂಡಕ್ಕೆ ಅವಕಾಶ ದೊರೆತಾಗ ತಂಡಕ್ಕೆ ಆಹ್ವಾನಿಸಿ, ಆಗ ತಂಡಕ್ಕೆ ಯಕ್ಷಗಾನ ಶಿಕ್ಷಕರಾಗಿ ಮಾರ್ಗದರ್ಶನ ಮಾಡುತ್ತಿದ್ದ ಶ್ರೀ ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ನಡೆದ “ಸುಧನ್ವಾರ್ಜುನ ಕಾಳಗ” ಪ್ರಸಂಗದಲ್ಲಿ ‘ಶಂಖ’ನ ಪಾತ್ರಕ್ಕೆ ಅವಕಾಶ ಕಲ್ಪಿಸಿದೆವು. ಅಂದು 2010ಗೆ ನಮ್ಮ ತಂಡ ಯಕ್ಷಾರಾಧನಾ ಕಲಾ ಕೇಂದ್ರಕ್ಕೆ ವೇಷಧಾರಿಯಾಗಿ ‘ಕೇಳಯ್ಯ ಭೂಪ ಕೇಳಯ್ಯ’ ಎಂಬ ಪದದ ಮೂಲಕ ರಂಗವನ್ನೇರಿದವರು ಉರ್ವದ ಶ್ರೀಮತಿ ಬಿ. ಸಾವಿತ್ರಿ.
ಯಾವುದೇ ಸಾಧನೆಗೆ ವಯೋಬಲ ಮುಖ್ಯವಲ್ಲ ಆಸಕ್ತಿ, ಶ್ರದ್ಧೆ, ಪರಿಶ್ರಮ ಬೆರೆತ ಮನೋಬಲ ಮುಖ್ಯ ಎಂದು ನಿರೂಪಿಸಿದ ಅಪೂರ್ವ ಯಕ್ಷ ಸಾಧಕಿ. ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಅವರು ನಿವೃತ್ತಿಯ ಬಳಿಕ ಪ್ರವರ್ತಿಸಿಕೊಂಡ ಯಕ್ಷಗಾನ ಕಲೆಯಲ್ಲಿ ಒಟ್ಟು ನೂರು ಯಕ್ಷಗಾನ ಕಾರ್ಯಗಳನ್ನು ನೀಡಿದ್ದು ಈಗ ಉಲ್ಲೇಖಾರ್ಹ ಸಾಧನೆಯಾಗಿದೆ.
ಉರ್ವದ ಶಿವರಾಮರಾವ್ ಕಂಪೌಂಡ್ ನಲ್ಲಿರುವ ಯಕ್ಷಾರಾಧನಾ ಕಲಾ ಕೇಂದ್ರದಲ್ಲಿ ಯಕ್ಷಗಾನನಾಟ್ಯ ಶಿಕ್ಷಣವನ್ನು ಮೊದಲಿಗೆ ಗುರು ರಾಕೇಶ್ ರೈ ಅಡ್ಕ ಅವರಿಂದ ಪಡೆದ ಸಾವಿತ್ರಿಯವರು ಮುಂದೆ ತಂಡದ ನಿರ್ದೇಶಕಿ ನೃತ್ಯ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ ರಾವ್ ಅವರ ನಿರ್ದೇಶಸನದಲ್ಲಿ ಯಕ್ಷಯಾನ ಮುಂದುವರಿಸಿದರು. ತಮ್ಮ ಸ್ಪಷ್ಟ ಭಾವಪೂರ್ಣ ಮಾತುಗಾರಿಕೆಯ ಕಾರಣದಿಂದ ಭಾರತೀ ವೃತ್ತಿ ಪ್ರಧಾನವಾಗಿರುವ ಪಾತ್ರಗಳಲ್ಲಿ ಇವರು ಹೆಚ್ಚು ಕಾಣಿಸಿಕೊಂಡವರು. ಆಗೊಮ್ಮೆ ಈಗೊಮ್ಮೆ ಪ್ರವೇಶ, ಏರುಪದ ನಾಟ್ಯ ಇರುವ ದೇವೇಂದ್ರನಂತಹ ಪಾತ್ರವನ್ನು ರಂಗದಲ್ಲಿ ಸೈ ಎನಿಸುವಂತೆ ಪ್ರದರ್ಶಿಸಿದವರು ಸಾವಿತ್ರಿ ಟೀಚರ್. ಹಲವು ಪ್ರಸಂಗಗಳಲ್ಲಿ ನಾರದ, “ನರಕಾಸುರ ಮೋಕ್ಷ” ದೇವೇಂದ್ರ, “ಮಾ ನಿಷಾದ” ದ ವಾಲ್ಮೀಕಿ ಋಷಿ, “ಗುರು ದಕ್ಷಿಣೆ”ಯ ಸಾಂದೀಪನಿ ಮಹರ್ಷಿ, ” ಜಾಂಬವತೀ ಕಲ್ಯಾಣ”ದ ಸತ್ರಾಜಿತ, “ಮಹಿಷ ವಧೆ” ಯ ಬ್ರಹ್ಮ, “ಕದಂಬ ಕೌಶಿಕೆ” ಯ ಸುಗ್ರೀವಾಸುರ”, “ತಾಮ್ರಧ್ವಜ ಕಾಳಗ” ದ ಸುಮತಿ, “ಅಗ್ರಪೂಜೆ” ಯ ಭೀಷ್ಮ , ಧರ್ಮರಾಯ ಮುಂತಾದ ಪಾತ್ರಗಳಿಗೆ ಜೀವ ನೀಡಿದ್ದಾರೆ.
ಯಕ್ಷಗಾನ ಅಭ್ಯಾಸ ಕಾಲದಲ್ಲಿ ಸಾಕು ಟೀಚರ್ ತಮಗೆ ಉತ್ಸಾಹ ಇದ್ದರೂ ದೇಹಕ್ಕೆ ದಂಡನೆಯಾಗುವುದಿಲ್ಲವೇ ಎಂದರೆ ಕೇಳದೆ ತನ್ನಿಂದ ರಂಗದಲ್ಲಿ ತಪ್ಪಾಗಕೂಡದು ಎಂಬ ಭಾವನೆಯೊಂದಿಗೆ ಹೆಜ್ಜೆ ಸರಿಯಾಗಿ ಹಿಡಿತಕ್ಕೆ ಬರುವವರೆಗೂ ಕುಣಿದೇ ಅಭ್ಯಾಸ ಮಾಡುತ್ತಿದ್ದರು ಸಾವಿತ್ರಿ ಟೀಚರ್. ಪ್ರತಿ ಶುಕ್ರವಾರದ ಕ್ಲಾಸ್ ಗೆ ಕೊರೋನಾ ಬರುವಲ್ಲಿವರೆಗೆ ತಪ್ಪದೇ ಉತ್ಸಾಹದಿಂದ ಹಾಜರಾಗುತ್ತಿದ್ದರು. ಇವರ ಬತ್ತದ ಉತ್ಸಾಹ ಅನೇಕರಿಗೆ ಸ್ಪೂರ್ತಿಯಾಗಲಿ ಎಂಬ ಕಾರಣಕ್ಕೆ ಸಾವಿತ್ರಿ ಟೀಚರ್ ಅವರ ನೂರನೇ ಕಾರ್ಯಕ್ರಮವನ್ನು ಯಕ್ಷಾರಾಧನಾ ಕಲಾ ಕೇಂದ್ರವೇ ಪುರಭವನದಲ್ಲಿ ಆಯೋಜಿಸಿ ಅವರನ್ನು ಸಮ್ಮಾನಿಸಿದ್ದೆವು. ಅವರ ಪತಿ ನಿವೃತ್ತ ಅಧ್ಯಾಪಕ ಶ್ರೀ.ಬಿ.ಶ್ರೀನಿವಾಸ ರಾವ್ ಅವರ ಪ್ರೋತ್ಸಾಹವನ್ನೂ ಮರೆಯುವಂತಿಲ್ಲ.
ಇದೀಗ ಸಾವಿತ್ರಿ ಟೀಚರ್ ಗೆ 80 ವರುಷಗಳು ಕಳೆದವು. ಕೊರೋನಾ ಕಾಲದ ಬಳಿಕ ತಮ್ಮ ಪತಿಗೆ ವಯೋ ಸಹಜವಾಗಿ ನೀಡಬೇಕಾದ ಬೆಂಬಲ ಮನೋಬಲಕ್ಕಾಗಿ ಯಕ್ಷಗಾನ ಕಾರ್ಯಕ್ರಮಕ್ಕೆ ಬರಲು ಅಸಾಧ್ಯವಾಗಿದೆ. ಯಕ್ಷಗಾನದಲ್ಲಿ ಇತ್ತೀಚೆಗಷ್ಟೇ ಹೆಂಗಸರ ಪ್ರವೇಶವಾಗಿದ್ದು ಈಗಂತೂ ಬಹುಮಂದಿ ಯಕ್ಷಕಲಾ ಶಿಕ್ಷಣ ಪಡೆಯುತ್ತಿದ್ದಾರೆ. ಉತ್ಸಾಹ ಕಳೆದು ಕೊಳ್ಳುವ ವಯಸ್ಸಿನಲ್ಲಿ ದೇಹಕ್ಕೆ ಕಬ್ಬಿಣದ ಕಡಲೆಯಂತಹ ಯಕ್ಷಗಾನವನ್ನು ಅರಗಿಸಿಕೊಂಡದ್ದು ಸಾವಿತ್ರಿ ಟೀಚರ್ ಅವರ ಮಹತ್ಸಾಧನೆ.
ಯಕ್ಷಾರಾಧನಾ ಕಲಾ ಕೇಂದ್ರದ ಆಕಾಶವಾಣಿಯ ಶ್ರೇಣೀಕೃತ ತಾಳಮದ್ದಳೆ ತಂಡದ ಸದಸ್ಯೆಯಾಗಿರುವ ಇವರು ಪ್ರಸಂಗದ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡವರು. ‘ಮೇದಿನಿ ನಿರ್ಮಾಣ’ ದ ಬ್ರಹ್ಮ, ‘ನರಕಾಸುರ ಮೋಕ್ಷ’ದ ನರಕಾಸುರ, “ರುಕ್ಮಿಣಿ ಕಲ್ಯಾಣ” ದ ಭೀಷ್ಮಕ, ” ಜಾಂಬವತಿ ಕಲ್ಯಾಣ”ದ ಜಾಂಬವಂತ, ಬಲರಾಮ, “ಶಬರಾರ್ಜುನ” ದ ದೇವೇಂದ್ರ ಮುಂತಾದ ಪಾತ್ರಗಳಲ್ಲಿ ಮಿಂಚಿದವರು.
ಸಾವಿತ್ರಿ ಟೀಚರ್ ತಂಡದಲ್ಲಿ ಇದ್ದಾರೆ ಎಂದರೆ ನಮಗೆಲ್ಲ ಓರ್ವ ಮಮತಾಮಯಿ ಅಮ್ಮನೇ ತಂಡದಲ್ಲಿದ್ದ ಭಾವ. ಮಕ್ಕಳಿಗೆ ಸ್ಫೂರ್ತಿ. ಅನೇಕ ಮಹಿಳೆಯರಿಗೆ ಮಾದರಿ. ಉತ್ತಮ ಗೃಹಿಣಿಯಾಗಿರುವ ಸಾವಿತ್ರಿ ಟೀಚರ್ ಮಕ್ಕಳ ಸಾಹಿತಿ, ಭಜನಾ ಕಲಾವಿದೆ, ಭಗವದ್ಗೀತೆ, ಭಾಷಣ, ಪ್ರಬಂಧ, ಕವಿತಾ ರಚನೆ, ಕಥಾ ರಚನೆ ಮುಂತಾದವುಗಳನ್ನು ಮಕ್ಕಳಿಗೆ ಹೇಳಿಕೊಡುವ ಸಂಪನ್ಮೂಲ ವ್ಯಕ್ತಿ. ಇಂತಹ ಶಿಕ್ಷಕಿಯ ಯಕ್ಷಯಾನ ಕಥನ ನಮ್ಮ ಯಕ್ಷಾರಾಧನಾ ಕಲಾ ಕೇಂದ್ರಕ್ಕೆ ಹೆಮ್ಮೆ.
ಇವರ ಯಕ್ಷಕಲಾ ಸಾಧನೆಯನ್ನು ಗುರುತಿಸಿ ಯಕ್ಷಧ್ರುವ ಪಟ್ಲ ಪೌಂಡೇಷನ್ ನ ಕೇಂದ್ರ ಮಹಿಳಾ ಘಟಕ ಇವರನ್ನು ಸಮ್ಮಾನಿಸಿದೆ. ದೇಶದ ಅನೇಕ ಪ್ರತಿಷ್ಠಿತ ಪತ್ರಿಕೆಗಳಾದ Hindu, Deccan Herald, ಪ್ರಜಾವಾಣಿ, ವಿಜಯ ಕರ್ನಾಟಕ ಮುಂತಾದವುಗಳಲ್ಲಿ, ಚಂದನ, ಝೀ ತೆಲುಗು, ಸೋನಿ, ಸ್ಪಂದನ ಮುಂತಾದ ಚಾನಲ್ ಗಳಲ್ಲಿ ಯಕ್ಷಸಾಧಕಿಯಾಗಿ ಇವರ ಕುರಿತ ಲೇಖನಗಳು , ಕವರ್ ಸ್ಟೋರಿಗಳು ಪ್ರಸಾರವಾಗಿದೆ ಮಾತ್ರವಲ್ಲ, ಅಮೇರಿಕಾ, ಇಂಗ್ಲೆಂಡ್, ಸ್ಪೇನ್ ಮುಂತಾದ ದೇಶದ ಪತ್ರಿಕೆ ಮತ್ತು ವಾಹಿನಿಗಳಲ್ಲಿ ಇವರನ್ನು ಯಕ್ಷಪ್ರತಿಭೆ ಎಂದು ಗುರುತಿಸಿ ಗೌರವಿಸಿರುವುದು ಅವರ ಯಕ್ಷಗಾನ ಮತ್ತು ತಾಳಮದ್ದಳೆಯ ಮಾರ್ಗದರ್ಶಕಿಯಾಗಿ ನನಗೆ ಹೆಮ್ಮೆ. ಶ್ರೀಮತಿ ಸಾವಿತ್ರಿ ಎಸ್ ರಾವ್ ಅವರು ಯಕ್ಷಮಣಿ ಎಂದರೆ ಅತಿಶಯೋಕ್ತಿಯಲ್ಲ.
- ವಿದುಷಿ ಶ್ರೀಮತಿ
ಬಿ. ಸುಮಂಗಲಾ ರತ್ನಾಕರ್ ರಾವ್,
ಮಂಗಳೂರು