ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷಾವತರಣ – 6’ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ, ಸಾಂಸ್ಥಿಕ ನೇತಾರ ಯು. ವಿಜಯ ರಾಘವ ಪಡ್ವೆಟ್ನಾಯ ಸಂಸ್ಮರಣೆ, ಯಕ್ಷಧ್ರುವ ಪಟ್ಲ ಗಾನಯಾನ ರಜತಪರ್ವ ಕಾರ್ಯಕ್ರಮಗಳನ್ನು ದಿನಾಂಕ 04 ಆಗಸ್ಟ್ 2025ರಿಂದ 10 ಆಗಸ್ಟ್ 2025ರವರೆಗೆ ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಯು. ಶರತ್ ಕೃಷ್ಣ ಪಡ್ವೆಟ್ನಾಯ ಇವರು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ಸಾಯಕ್ ಹಾಗೂ ನ್ಯಾಯವಾದಿ ಬಿ.ಕೆ. ಧನಂಜಯ ರಾವ್ ಉಪಸ್ಥಿತರಿರುತ್ತಾರೆ. ಈ ತಾಳಮದ್ದಳೆ ಸಪ್ತಾಹದಲ್ಲಿ ಪ್ರತಿದಿನ ವಿಭಿನ್ನ ಪ್ರಸಂಗಗಳು ಹಾಗೂ ಪ್ರಸಿದ್ಧ ಕಲಾವಿದರು ಭಾಗವಹಿಸಿ ಕಲಾತ್ಮಕ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 04 ಆಗಸ್ಟ್ 2025ರಂದು ‘ವಿಭೀಷಣ ನೀತಿ’, ದಿನಾಂಕ 05 ಆಗಸ್ಟ್ 2025ರಂದು ‘ಕರ್ಣಪರ್ವ’, ದಿನಾಂಕ 06 ಆಗಸ್ಟ್ 2025ರಂದು ‘ಉತ್ತರನ ಪೌರುಷ, ದಿನಾಂಕ 07 ಆಗಸ್ಟ್ 2025ರಂದು ‘ಮಾಗಧ ವಧೆ’, ದಿನಾಂಕ 08 ಆಗಸ್ಟ್ 2025ರಂದು ‘ಚೂಡಾಮಣಿ’, ದಿನಾಂಕ 09 ಆಗಸ್ಟ್ 2025ರಂದು ‘ದ್ರುಪದ ಗರ್ವಭಂಗ’, ದಿನಾಂಕ 10 ಆಗಸ್ಟ್ 2025ರಂದು ‘ಅಂಗದ ಪ್ರಹಸ್ತ, ಜಾಬಾಲಿ ನಂದಿನಿ ಪ್ರಸಂಗ ನಡೆಯಲಿದೆ.
ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರು ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಗಾನಯಾನ ರಜತ ಪರ್ವ ಆಚರಣೆ ಪ್ರಯುಕ್ತ ಪಟ್ಲ ಸತೀಶ ಶೆಟ್ಟರು ಪ್ರತಿದಿನ ಭಾಗವತಿಕೆ ನಡೆಸಲಿದ್ದು, ಅವರ ಜತೆಗೆ ಹಿರಿಯ ಭಾಗವತರು ಭಾಗವತಿಕೆ ಮಾಡಲಿದ್ದಾರೆ. ಕುರಿಯ ಪ್ರತಿಷ್ಠಾನ ಹೀಗೆ ಅನೇಕ ಕಲಾವಿದರ ಕುರಿತಾದ ಕೇಂದ್ರೀಕೃತ ಕಾರ್ಯಕ್ರಮ ಈ ಹಿಂದೆಯೂ ನಡೆಸಿದೆ ಎಂದು ಕುರಿಯ ಪ್ರತಿಷ್ಠಾನ ಸಂಚಾಲಕ ಉಜಿರೆ ಅಶೋಕ ಭಟ್ ತಿಳಿಸಿದ್ದಾರೆ. ಕೊಳ್ತಿಗೆ ಲೈವ್ ಮೀಡಿಯಾ ಮೂಲಕ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.