10 ಏಪ್ರಿಲ್ 2023, ಸುರತ್ಕಲ್: ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಮತ್ತು ಗೋವಿಂದ ದಾಸ ಕಾಲೇಜು ಸಹಯೋಗದೊಂದಿಗೆ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ “ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ”ವು ದಿನಾಂಕ 08-04-2023ರಂದು ಶನಿವಾರ ಸುರತ್ಕಲ್ ನ ಗೋವಿಂದ ದಾಸ ಕಾಲೇಜಿನಲ್ಲಿ ಜರಗಿತು.
2023ನೇ ಸಾಲಿನ “ಅಗರಿ ಪ್ರಶಸ್ತಿ” ಸ್ವೀಕರಿಸಿದ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, “ಅಗರಿ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. ಧರ್ಮಸ್ಥಳ ಮೇಳದ ಸಾರಥ್ಯವನ್ನು ವಹಿಸಿಕೊಂಡು ಯಕ್ಷಗಾನದ ಮೂಲ ಪರಂಪರೆ ಉಳಿಸಲು ಆದಷ್ಟು ಶ್ರಮವಹಿಸುತ್ತಿದ್ದೇನೆ. ಅಗರಿ ಭಾಗವತರ ಬಳಿಕ ಕಡತೋಕ ಶೈಲಿ, ಮಯ್ಯ ಶೈಲಿ, ಹೆಬ್ಬಾರ್ ಶೈಲಿ ಬಂದಿವೆ. ಕಾಳಿಂಗ ನಾವಡರಂಥವರು ಬಡಗು ಶೈಲಿಗೆ ಜೀವಕಳೆ ನೀಡಿದ್ದರು. ಇದು ಒಳ್ಳೆಯ ಬೆಳವಣಿಗೆ. ಆದರೆ ಸಿನಿಮಾ ಶೈಲಿ ಯಕ್ಷಗಾನಕ್ಕೆ ಬರುವುದು ಬೇಡ. ಕಲಾ ತಪಸ್ಸಿನ ಮೂಲಕ ಯಕ್ಷರಂಗಕ್ಕೆ ಬರುವ ಭಾಗವತರು, ಯಕ್ಷಗಾನ ಕಲಾವಿದರು ಪ್ರೇಕ್ಷಕರನ್ನು ತಮ್ಮ ಪ್ರತಿಭೆಯ ಮೂಲಕ ಶ್ರೇಷ್ಠಮಟ್ಟಕ್ಕೆ ಕೊಂಡೊಯ್ಯುವ ಶಕ್ತಿಗಳು. ಇಂತಹವರ ನೆನಪಿನಲ್ಲಿ ಪ್ರಶಸ್ತಿ, ಸಮ್ಮಾನಗಳು ನಿರಂತರವಾಗಿ ನಡೆದಾಗ ಜನಮಾನಸದಲ್ಲಿ ಅವರ ನೆನೆಪು ಅಚ್ಚಳಿಯದೆ ಉಳಿಯುತ್ತದೆ.” ಎಂದರು.
ಅಭಿನಂದನ ಭಾಷಣಗೈದ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು “ಯಜಮಾನ ತನ್ನ ಮೇಳವನ್ನು ಸರಿಯಾಗಿ ಮುನ್ನಡೆಸಿದಾಗ ಯಶಸ್ಸು ಸದಾ ಪ್ರಾಪ್ತಿಯಾಗುತ್ತದೆ. ಖಾವ೦ದರ ಮಾರ್ಗದರ್ಶನದಲ್ಲಿ ಡಿ. ಹಷೇಂದ್ರ ಕುಮಾರ್ ಅವರು ಮುಂದೆ ನಿಂತು ಧರ್ಮಸ್ಥಳ ಮೇಳವು ಅಚ್ಚುಕಟ್ಟಾಗಿ ನಡೆಯುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತ ಬ೦ದಿದ್ದಾರೆ. ರಜಾ ಕಾಲದ ಸಂಬಳ, ಪಿ.ಎಫ್. ಇತ್ಯಾದಿ ಮೊದಲಿಗೆ ಧರ್ಮಸ್ಥಳ ಮೇಳ ಆರಂಭಿಸಿತು. ಧಾರ್ಮಿಕ ಕ್ಷೇತ್ರ, ಯಕ್ಷಗಾನ ಮತ್ತು ಆಡಳಿತದಲ್ಲಿ ಧರ್ಮಸ್ಥಳ ರೋಲ್ ಮಾಡೆಲ್. ಅಗರಿ ಶ್ರೀನಿವಾಸ ಭಾಗವತರಿಗೆ ಸುಮಾರು 100 ಪ್ರಸಂಗಗಳು ಬಾಯಿ ಪಾಠವಿದ್ದು ಪಾರ್ತಿಸುಬ್ಬನ ಬಳಿಕ ಅವರು ಅತ್ಯಧಿಕ ಪ್ರದರ್ಶನ ಕಂಡಿದ್ದ ಪ್ರಸಂಗ ನೀಡಿದ್ದರು. ತಂದೆ ಅಗರಿ ಶ್ರೀನಿವಾಸ ಭಾಗವತ, ಅವರ ಪುತ್ರ ಅಗರಿ ರಘುರಾಮ ಭಾಗವತರ ಶೈಲಿಯ ಪ್ರಸಿದ್ಧಿಗಾಗಿ ಮೂರನೇ ತಲೆಮಾರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿರುವುದು ಶ್ಲಾಘನೀಯ. ಈ ಕಾರ್ಯ ಇನ್ನಷ್ಟು ವಿಸ್ತರವಾಗಿ ನಡೆಯಬೇಕು.” ಎಂದರು.
ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಅಧ್ಯಕ್ಷತೆ ವಹಿಸಿ “ಅಗರಿ ಭಾಗವತರು ಯಕ್ಷಗಾನಕ್ಕೆ ನೀಡಿದ ಕೊಡುಗೆ ದೊಡ್ಡರು” ಎಂದು ಸ್ಮರಿಸಿದರು. ಶ್ರೀ ಗೆಜ್ಜೆಗಿರಿ ಮೇಳದ ಭಾಗವತ ಗಿರೀಶ್ ರೈ ಕಕ್ಕೆಪದವು ಅವರಿಗೆ “ಅಗರಿ ಶೈಲಿ ಪ್ರಶಸ್ತಿ” ಪ್ರದಾನ ಹಾಗೂ ಕಟೀಲು ಮೇಳದ ಯಕ್ಷಗಾನ ಕಲಾವಿದ ಡಾ. ವಾದಿರಾಜ ಕಲ್ಲೂರಾಯ ಅವರಿಗೆ “ಅಗರಿ ವಿಶೇಷ ಸಮ್ಮಾನ” ನಡೆಯಿತು.
ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿ ಮುರಳಿ ಕಡೇಕಾರ್ ಮಾತನಾಡಿ ಯುವ ಸಮಯದಾಯ ಯಕ್ಷಗಾನ ಕಲೆಯತ್ತ ಆಕರ್ಷಿತವಾಗುತ್ತಿದೆ ಎಂದರು. ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್ ಶುಭಹಾರೈಸಿ, ಯಕ್ಷಗಾನ ಕಲೆಯ ಬೆಳವಣಿಗೆಗೆ ಗೋವಿಂದದಾಸ ಕಾಲೇಜು ವಿಶೇಷ ಪ್ರೋತ್ಸಾಹ ನೀಡುತ್ತಿರುವುದನ್ನು ಸ್ಮರಿಸಿದರು. ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ಯಕ್ಷಗಾನ ಪರಂಪರೆಯ ಶ್ರೇಷ್ಠತೆಯನ್ನು ವಿದ್ಯಾರ್ಥಿ ಸಮುದಾಯ ಅಭ್ಯಾಸಿಸುತ್ತಿದೆ ಎಂದು ಶ್ಲಾಘಿಸಿದರು. ಸಮಿತಿಯ ಗಿರೀಶ್ ನಾವಡ, ಶೇಷಶಯನ, ಕಿರಣ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಅಗರಿ ರಾಘವೇ೦ದ್ರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, “ಅಜ್ಜ, ತಂದೆಯ ಭಾಗವತಿಕೆ ಶೈಲಿ ಉಳಿಸಿ ಯಕ್ಷಗಾನಕ್ಕೆ ಸೇವೆ ಸಲ್ಲಿಸಲು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ. ಅಗರಿ ಶ್ರೀನಿವಾಸ ಭಾಗವತರು ಬರೆದಿದ್ದ ಶ್ರೀದೇವಿ ಮಹಾತ್ಮೆ ಪ್ರಸಂಗ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು, ಇದು ಗಿನ್ನೆಸ್ ದಾಖಲೆಗೆ ಸೇರಿಸುವ ಸಂಕಲ್ಪ ತಮ್ಮದಾಗಿದೆ’ ಎಂದರು. ಶೇಷಶಯನ ವಂದಿಸಿದರು. ಕೃಷ್ಣಪ್ರಸಾದ್ ಉಳಿತ್ತಾಯ ನಿರೂಪಿಸಿದರು.
ಈ ದಿನ ಪೊಂಪೈ ಕಾಲೇಜು ಐಕಳ, ತಂಡವು “ಜಾಂಬವತಿ ಕಲ್ಯಾಣ”, ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡವು “ಶ್ರೀ ಹರಿಲೀಲಾ”, ಸಂತ ಅಲೋಶಿಯಸ್ ಕಾಲೇಜು ಮಂಗಳೂರು ತಂಡವು ‘ನರಕೋದ್ಧರಣ’, ಎನ್.ಎಮ್.ಎ.ಎಮ್. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ “ತರಣಿಸೇನ ಕಾಳಗ” ಪ್ರಸಂಗಗಳನ್ನು ಪ್ರದರ್ಶಿಸಿದವು.
ರಾತ್ರಿ 7.00 ಗಂಟೆಗೆ “ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ” ಪುರಸ್ಕೃತ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಸಂಯೋಜನೆಯಲ್ಲಿ ಮಹಿಳಾ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ “ಶ್ರೀ ದೇವಿ ಮಹಿಷ ಮರ್ಧಿನಿ” ಯಕ್ಷಗಾನ ಬಯಲಾಟವು ನಡೆಯಿತು. ಹಿಮ್ಮೇಳದಲ್ಲಿ : ಶ್ರೀ ಗಿರೀಶ್ ರೈ ಕಕ್ಕೆಪದವು, ಶ್ರೀ ರೋಹಿತ್ ಉಚ್ಚಿಲ, ಶ್ರೀ ಮಯೂರ್ ನಾಯ್ಕ, ಶ್ರೀ ಶ್ರೀನಿಧಿ ಸುರತ್ಕಲ್ ಇವರು ಭಾಗವಹಿಸಿದರು ಹಾಗೂ ಶ್ರೀಮತಿ ಪೂರ್ಣಿಮಾ ಯತೀಶ್ ರೈ, ಶ್ರೀಮತಿ ಮಾಲತಿ ವೆಂಕಟೇಶ್, ಶ್ರೀಮತಿ ರೇವತಿ ನವೀನ್, ಶ್ರೀಮತಿ ರೇಷ್ಮಾ ಕಾರಂತ್, ಶ್ರೀಮತಿ ಪೂರ್ಣಿಮಾ ಶಾಸ್ತ್ರಿ, ಕು. ಛಾಯಾಲಕ್ಷ್ಮಿ ಆರ್.ಕೆ., ಕು. ಶಿವಾನಿ ಸುರತ್ಕಲ್, ಕು. ಬಿಂದಿಯಾ ಎಲ್. ಶೆಟ್ಟಿ, ಕು. ಕೃತಿ ವಿ. ರಾವ್, ಕು. ಅನನ್ಯಾ ಐತಾಳ್, ಕು. ಶ್ರೀರಕ್ಷಾ, ಕು. ದೀಕ್ಷಾ, ಕು. ರಕ್ಷಾ, ಕು. ಮನೀಶ, ಕು. ತನುಶ್ರೀ ಕು.ಅನನ್ಯ, ಕು. ಶಿಫಾಲಿ, ಕು. ಸಾಕ್ಷ ವೈ. ರೈ, ಕು. ಪ್ರಜ್ಞಾ ಆಗರಿ ಮುಮ್ಮೇಳದಲ್ಲಿ ತಮ್ಮ ಪ್ರತಿಭೆಯನ್ನು ತೋರಿದರು.