ಕಾಸರಗೋಡು : ನಮ್ಮ ನಾಡಿನ ಗಣ್ಯ ಸಂಗೀತ ಕಲಾವಿದರಾದ ಗಾನಪ್ರವೀಣ ಶ್ರೀ ಯೋಗೀಶ ಶರ್ಮ ಬಳ್ಳಪದವು ಇವರನ್ನು ಕಲ್ಯಾಸ್ಸೇರಿ ಕೃಷ್ಣನ್ ನಂಬಿಯಾರ್ ಭಾಗವತರ್ ಸ್ಮಾರಕ ಸಂಗೀತ ಸಭಾದಿಂದ ಕೊಡಮಾಡಲ್ಪಡುವ ಪ್ರತಿಷ್ಠಿತ ‘ಸಂಗೀತ ಜ್ಯೋತಿಶ್ರೀ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಇವರು ತೋರಿಸಿರುವ ದೀರ್ಘಕಾಲದ ನಿಷ್ಠೆ ಮತ್ತು ಸಾಧನೆ, ಭಾರತದಾದ್ಯಂತ ಹಾಗೂ ಹೊರದೇಶಗಳಲ್ಲಿ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿ ಕೇಳುಗರ ಮನಮೆಚ್ಚಿದ ಕಲಾವಿದರಾಗಿ ಹಾಗೂ ನೂರಾರು ವಿದ್ಯಾರ್ಥಿಗಳಿಗೆ ಗುರುಗಳಾಗಿ ಸಂಗೀತ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗೆ ಹಾಗೂ ಮಹತ್ವಪೂರ್ಣ ಕೊಡುಗೆಗಳಿಗೆ ಈ ಪ್ರಶಸ್ತಿ ಸಿಕ್ಕಿದ್ದು, ಇವರ ಸಾಧನೆಗೆ ಈ ಪದಕ ಮಾನ್ಯತೆಯಾಗಿದೆ.
ಕಾಸರಗೋಡು ಜಿಲ್ಲೆಯ ಬಳ್ಳಪದವು ಮೂಲದ ಶ್ರೀ ಯೋಗೀಶ ಶರ್ಮರವರು, ತನ್ನೂರಲ್ಲಿ ವೀಣಾವಾದಿನಿ ಸಂಗೀತ ವಿದ್ಯಾಪೀಠವನ್ನು ಸ್ಥಾಪಿಸಿ, ಇದೀಗ ಈ ಸಂಸ್ಥೆ ತನ್ನ ಬೆಳ್ಳಿಹಬ್ಬವನ್ನೂ ಆಚರಿಸಿದೆ. ಈ ಪ್ರಶಸ್ತಿಯನ್ನು ದಿನಾಂಕ 04 ಮೇ 2025ರಂದು ಸಂಜೆ ಪಡಿಞ್ಞಾಟ್ಟಂ ಕೊಳುವ್ವಲ್ ಎನ್.ಎಸ್.ಎಸ್. ಆಡಿಟೋರಿಯಂನಲ್ಲಿ ನಡೆಯಲಿರುವ ಸಂಗೀತ ಸಭೆಯ ಮೂರನೇ ವಾರ್ಷಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.