ಮಣೂರು: ಮಣೂರು ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇಗುಲದ 2ನೇ ವರ್ಷದ ಪ್ರತಿಷ್ಠಾ ವರ್ದಂತಿ ಕಾರ್ಯಕ್ರಮದ ಅಂಗವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ದ 30ನೆಯ ಕಾರ್ಯಕ್ರಮವಾಗಿ ಮಕ್ಕಳ ‘ಯುಗಳ ಸಂವಾದ’ವು ದಿನಾಂಕ 29-05-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಭಾಗವತರಾದ ಹರೀಶ್ ಕಾವಡಿ ಮಾತನಾಡಿ “ಸಾಂಸ್ಕೃತಿಕ ಲೋಕದ ಭವಿಷ್ಯದ ರೂವಾರಿಗಳು ತೆಕ್ಕಟ್ಟೆ ಸಂಸ್ಥೆಯಲ್ಲಿ ದಿನದಿನವೂ ವೃದ್ಧಿಗೊಳ್ಳುತ್ತಿದ್ದಾರೆ. ಯಕ್ಷಕಲೆಯಲ್ಲಿನ ವಿವಿಧ ಆಯಾಮಗಳಲ್ಲಿ ಕರಗತಗೊಂಡಿರುವ ಯಶಸ್ವಿ ಸಂಸ್ಥೆಯ ಪುಟಾಣಿಗಳು ಕರಾವಳಿ ಭಾಗದಲ್ಲಿ ಮನೆ ಮಾತಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುತ್ತದೆ. ರಂಗ ಒದಗುತ್ತಾ ಹೋದಾಗ ಮಕ್ಕಳಲ್ಲಿನ ಕಲೆ ಪ್ರಬುದ್ಧಗೊಳ್ಳುತ್ತದೆ. ಹಲವಾರು ರಂಗದಲ್ಲಿ ಮಿಂಚುತ್ತಾ ಕಳೆಕಟ್ಟುವ ಮಕ್ಕಳು ಕಲಾ ವಲಯದಲ್ಲಿ ಸೈ ಎನಿಸಿಕೊಂಡಿರುವುದಂತೂ ನಿಜ.” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ರಘುರಾಮ ಶೆಟ್ಟಿಯವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಅತಿಥಿಗಳಾಗಿ ವಿಜಯ್ ಶೆಟ್ಟಿ, ಸುರೇಶ್, ಚಂಡೆಯ ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು.
ಲಂಕಾದಹನದ ಹನುಮಂತ-ಲಂಕಿಣಿ, ದ್ರೌಪದಿ ಪ್ರತಾಪದ ದ್ರೌಪದಿ-ಅರ್ಜುನ, ಕೃಷ್ಣಾರ್ಜುನದ ಸುಭದ್ರೆ-ರುಕ್ಮಿಣಿ, ಸುಧನ್ವಾರ್ಜುನದ ಸುಧನ್ವ-ಪ್ರಭಾವತಿ, ಅಭಿಮನ್ಯು-ಸುಭದ್ರೆ, ಭೀಮ-ಅರ್ಜುನರ ಸಂವಾದಗಳು ಯುಗಳ ಸಂವಾದವಾಗಿ ರಂಗ ಪ್ರಸ್ತುತಿಗೊಂಡಿತು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.