ಮಂಗಳೂರು: ಆಕಾಶವಾಣಿ ಮಂಗಳೂರು ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಮಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಯುವವಾಣಿ ಕಥಾ-ಕವನ-ಲೇಖನ ಸ್ಪರ್ಧೆ 2023ರ ಬಹುಮಾನ ವಿತರಣಾ ಸಮಾರಂಭವು 27-5-2023ರ ಶನಿವಾರ ಅಪರಾಹ್ನ ಮಂಗಳೂರು ಆಕಾಶವಾಣಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.
ಆಕಾಶವಾಣಿ ಮಂಗಳೂರು ನಿಲಯದ ಕಾರ್ಯಕ್ರಮ ಮುಖ್ಯಸ್ಥ ಶ್ರೀ ಟಿ. ಕೆ.ಉಣ್ಣಿಕೃಷ್ಣನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಳ್ತೂರು ಅಣ್ಣಯ್ಯ ಕುಲಾಲ್,ರೆಡ್ ಕ್ರಾಸ್ ಅಂತರ ರಾಷ್ಟ್ರೀಯ ಸಂಸ್ಥೆಯ ಮಂಗಳೂರು ವಿಭಾಗದ ಅಧ್ಯಕ್ಷ ರೊಟೇರಿಯನ್ ಸಿ.ಎ ಶ್ರೀ ಶಾಂತಾರಾಮ ಶೆಟ್ಟಿ, ಐ.ಸಿ.ಎ.ಐ ಮಂಗಳೂರು ವಿಭಾಗದ ಪೂರ್ವಾಧ್ಯಕ್ಷ ಸಿ.ಎ ಶ್ರೀ ಎಸ್.ಎಸ್. ನಾಯಕ್, ಪ್ರಣವ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಶ್ರೀ ಸೋಮಪ್ಪ ನಾಯಕ್, ವಿನಯ ಕೃಷಿಕ ಬೆಳೆಗಾರರ ಸಂಘ, ಕೋಲ್ನಾಡು ಇದರ ಅಧ್ಯಕ್ಷ ಶ್ರೀ ವಿಜಯ್ ಶೆಟ್ಟಿ ಕೋಲ್ನಾಡು ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಉಪನ್ಯಾಸಕ ಶ್ರೀ ಕರುಣಾಕರ ಬಳ್ಕೂರು ಅವರು ಉಪನ್ಯಾಸಕರಾಗಿ ಭಾಗವಹಿಸಿದ್ದರು. ಆಕಾಶವಾಣಿಯ ಉದ್ಘೋಷಕ, ಕಲಾವಿದ,ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ವರದಿಗಾರ ಶ್ರೀ ಅಶ್ವನೀಕುಮಾರ್ ಕೆ. ಎನ್. ಅವರು ಪ್ರಾರ್ಥನೆ ಹಾಡಿದರು. ಆಕಾಶವಾಣಿ ಮಂಗಳೂರು ನಿಲಯದ ಕಾರ್ಯಕ್ರಮ ಅಧಿಕಾರಿ ದೇವು ಹನೆಹಳ್ಳಿ ಅವರು ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕವನ ವಿಭಾಗದಲ್ಲಿ ನವ್ಯಶ್ರೀ ಸ್ವರ್ಗ, ಪಡ್ರೆ – ಪ್ರಥಮ; ಪ್ರೀತಂ ಮಿಜಾರ್ – ದ್ವಿತೀಯ; ಸುಮನಾ ಪಿ. ಕಲ್ಮಡ್ಕ – ತೃತೀಯ: ಕಥಾ ವಿಭಾಗದಲ್ಲಿ ನಯನ ಜಿ.ಎಸ್. ಕಳೆಂಜ – ಪ್ರಥಮ; ಅನಘಾ ಹೇರಂಜಾಲು – ದ್ವಿತೀಯ; ಶ್ರೀನಿಧಿ ಎಸ್. ಶೆಟ್ಟಿ, ನಿಟ್ಟೂರು – ತೃತೀಯ: ಲೇಖನ ವಿಭಾಗದಲ್ಲಿ ಸೌಜನ್ಯಾ ಬಿ.ಎಂ. ಕೆಯ್ಯೂರು – ಪ್ರಥಮ; ದಿನೇಶ್ ಎಂ. ಹಳೆನೇರಂಕಿ – ದ್ವಿತೀಯ; ರಂಜನಾ ಭಟ್ ನೆಲ್ಲಿತೀರ್ಥ – ತೃತೀಯ ಬಹುಮಾನಗಳನ್ನು ಗಳಿಸಿದರು. ವೇದಿಕೆಯಲ್ಲಿ ನೆರೆದಿದ್ದ ಎಲ್ಲ ಗಣ್ಯರು ವಿಜೇತರಿಗೆ ಪ್ರಶಸ್ತಿಪತ್ರ, ನಗದು ಬಹುಮಾನ ಮತ್ತು ಪುಸ್ತಕಗಳನ್ನು ನೀಡಿ ಪುರಸ್ಕರಿಸಿದರು.
ನಾಡಿನ ಹಿರಿಯ ವಿಮರ್ಶಕ, ಸಾಹಿತಿ, ಸಂಪಾದಕ, ಅನುವಾದಕ, ಇಂಗ್ಲಿಷ್ ಪ್ರಾಧ್ಯಾಪಕ, ನಿವೃತ್ತ ಪ್ರಾಂಶುಪಾಲ ಡಾ. ಬಿ. ಜನಾರ್ದನ ಭಟ್; ಚಿಂತಕ, ಬರಹಗಾರ, ಶಿಕ್ಷಕ, ಶಿಕ್ಷಣತಜ್ಞ ಶ್ರೀ ಅರವಿಂದ ಚೊಕ್ಕಾಡಿ; ಕನ್ನಡ ಪ್ರಾಧ್ಯಾಪಕ, ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಶ್ರೀ ಗಣಪತಿ ಭಟ್ ಕುಳಮರ್ವ; ಕವಿ, ಬರಹಗಾರ, ವಿಮರ್ಶಕ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇಲ್ಲಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ. ವಿಷ್ಣುಮೂರ್ತಿ ಪ್ರಭು; ಸಂಸ್ಕೃತಿ ಚಿಂತಕ, ಬರಹಗಾರ, ವಿಮರ್ಶಕ, ಕುವೆಂಪು ಭಾಷಾ ಭಾರತಿಯ ಅಧ್ಯಕ್ಷ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬಿ.ಸಿ.ರೋಡ್, ಇಲ್ಲಿನ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲ ಡಾ.ಅಜಕ್ಕಳ ಗಿರೀಶ್ ಭಟ್ ಇವರು ವಿಜೇತರಿಗೆ ಅಮೂಲ್ಯವಾದ ಪುಸ್ತಕಗಳನ್ನು ನೀಡಿದ್ದರು. ಜ್ಞಾನ ಪ್ರಸರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, ತಾವು ಭಾಷಾಂತರಿಸಿ ಪ್ರಕಟಿಸಿದ ಉಚಿತವಾಗಿ ಓದುಗರಿಗೆ ಬಿಟ್ಟು ದಿವಂಗತರಾದ ಕಾಸರಗೋಡಿನ ಶ್ರೀ ಎ. ನರಸಿಂಹ ಭಟ್ ಅವರ ಪುಸ್ತಕಗಳನ್ನು ವಿಜೇತರಿಗೆ ಅವರ ಕುಟುಂಬಿಕರು ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಹಿರಿಯ ವಿಮರ್ಶಕ ಡಾ.ಕೆ.ಮಹಾಲಿಂಗ ಅವರು ನೀಡಿದರು.
ಅನಂತರ ಕವನ ವಿಭಾಗದಲ್ಲಿ ವಿಜೇತರಾದವರು ತಮ್ಮ ಒಂದೊಂದು ಕವನಗಳನ್ನು ಸಭೆಯಲ್ಲಿ ವಾಚಿಸಿದರು.
ಡಾ. ಅಣ್ಣಯ್ಯ ಕುಲಾಲ್ ಅವರು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಾಮಾಜಿಕ ಕಾರ್ಯಗಳನ್ನು ವಿವರಿಸಿ, ಆಕಾಶವಾಣಿಯೊಂದಿಗೆ, ಅದರಲ್ಲೂ ವಿಶೇಷವಾಗಿ ಯುವಜನರ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾನದ ನಂಟನ್ನು ವಿವರಿಸಿದರು. ಆಕಾಶವಾಣಿಯಲ್ಲಿ ತಮ್ಮ ಬರಹಗಳನ್ನು ವಾಚಿಸಿ ಯುವಜನ ಹೇಗೆ ತಮ್ಮ ಪ್ರತಿಭೆ, ಜ್ಞಾನಗಳನ್ನು ವೃದ್ಧಿಸಿಕೊಳ್ಳಬಹುದು ಎನ್ನುತ್ತಾ ವಿಜೇತರನ್ನು ಅಭಿನಂದಿಸಿದ ಸಿ.ಎ ಶ್ರೀ ಶಾಂತಾರಾಮ ಶೆಟ್ಟಿಯವರು ಆಕಾಶವಾಣಿಯ ಓರ್ವ ಶ್ರೋತೃವಾಗಿ ತಮ್ಮ ಬಹುಕಾಲದ ನಂಟನ್ನು ಮೆಲುಕು ಹಾಕಿದರು. ಶ್ರೀ ವಿಜಯ ಶೆಟ್ಟಿ ಕೋಲ್ನಾಡು ಅವರು ವಿಜೇತರನ್ನು ಅಭಿನಂದಿಸುತ್ತಾ ಕೃಷಿಯ ಮುನ್ನಡೆಗೆ ಆಕಾಶವಾಣಿಯ ಕೊಡುಗೆಯನ್ನು ಪ್ರಸ್ತಾಪಿಸಿದರು.
ಸಿ.ಎ, ಎಸ್.ಎಸ್. ನಾಯಕ್ ಅವರು ತಮ್ಮ ವಿದ್ವತ್ಪೂರ್ಣ ಭಾಷಣದಲ್ಲಿ ಯುವಜನರು ಹೇಗೆ ಮತ್ತು ಏಕೆ ಓದಿನ ಮೂಲಕ ತಮ್ಮ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ಕಟ್ಟಿಕೊಳ್ಳಬೇಕು ಎಂಬುದನ್ನು ಮನೋಜ್ಞವಾಗಿ ವಿವರಿಸಿದರು.
ಅನಂತರ ಶ್ರೀ ಕರುಣಾಕರ ಬಳ್ಕೂರು ಅವರು ವರ್ತಮಾನ ಕಾಲದಲ್ಲಿ ದೇಶೀಯ ಭಾಷೆಗಳ ಸ್ಥಿತಿಗತಿ, ರಾಷ್ಟ್ರೀಯ ಶಿಕ್ಷಣ ನೀತಿ 2020 ದೇಶೀಯ ಭಾಷೆಗಳ ಉಳಿವಿಗೆ ಹೇಗೆ ಸಹಕಾರಿ ಆಗಬಲ್ಲದು ಎಂಬ ವಿಷಯವಾಗಿ ಪ್ರಬುದ್ಧ ಉಪನ್ಯಾಸ ನೀಡಿದರು. ಶ್ರೀ ಟಿ.ಕೆ.ಉಣ್ಣಿಕೃಷ್ಣನ್ ಅವರು ಅಧ್ಯಕ್ಷ ಭಾಷಣ ಮಾಡಿದರು.
ಕನ್ನಡಕಟ್ಟೆ ಮಂಗಳೂರು, ವಿನಿಮಯ ಕೃಷಿ ಬೆಳೆಗಾರರ ಸಂಘ, ಹೊಟೆಲ್ ಡಿಂಕಿ ಡೈನ್, ಸಹ್ಯಾದ್ರಿ ಸಂಚಯ ಮೊದಲಾದ ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿಜೇತರ ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆಕಾಶವಾಣಿಯ ಕಲಾವಿದ ಮತ್ತು ಅಧ್ಯಾಪಕ ಶ್ರೀ ಪ್ರದೀಪ್ ಡಿ.ಎಂ. ಹಾವಂಜೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಆಕಾಶವಾಣಿಯ ಉದ್ಘೋಷಕಿ ಶ್ರೀಮತಿ ವಿಜಯಾ ಕಿಶೋರ್ ಅವರು ವಂದಿಸಿದರು.
ಈ ಸಂದರ್ಭದಲ್ಲಿ ವಿಜೇತರ ಬರಹಗಳ ಮತ್ತು ಸ್ಪರ್ಧೆಗೆ ಬಂದ ಉತ್ತಮ ಬರಹಗಳ ಧ್ವನಿಮುದ್ರಣ ನಡೆಯಿತು.