ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಹೊಳೆಹೊನ್ನೂರು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಸಮಿತಿ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ದಿನಾಂಕ 27 ಸೆಪ್ಟೆಂಬರ್ 2026ರಂದು ಹೊಳೆಹೊನ್ನೂರು ಶ್ರೀ ವೀರಭದ್ರಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ 254ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.

ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಖ್ಯಾತ ವಿದ್ವಾಂಸ ಜಿ.ಎಸ್. ನಟೇಶ್ ಮಾತನಾಡಿ “ಕನ್ನಡವನ್ನು ಬೆಳೆಸಿದ್ದು ಕೇವಲ ಪಂಡಿತರು, ವಿದ್ಯಾವಂತರಲ್ಲ; ಮಣ್ಣಿನೊಂದಿಗೆ ಬದುಕಿದ ರೈತರೂ ತಮ್ಮ ಬೆವರು, ಬದುಕು ಮತ್ತು ಜಾನಪದ ಸಂಸ್ಕೃತಿಯ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಜಾನಪದದ ಮೂಲಕವೂ ಭಾಷೆಯನ್ನು ಶಿಷ್ಟವಾಗಿ ಬೆಳೆಸಿದ್ದಾರೆ. ಸಂಪತ್ತು ಎಲ್ಲರೊಂದಿಗೆ ಹಂಚಿಕೆಯಾಗಬೇಕು, ಜ್ಞಾನ ಎಲ್ಲರಿಗೂ ದೊರೆಯಬೇಕು ಹಾಗೂ ಜೀವನದಲ್ಲಿ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ರೈತರ ಹೊಲಗಳಿಗೆ ಯಂತ್ರಗಳು ಬಂದ ನಂತರ ಸಾಂಪ್ರದಾಯಿಕ ಕೃಷಿ ಪದ್ಧತಿ ನಶಿಸುತ್ತಿದೆ. ಟ್ರ್ಯಾಕ್ಟರ್ ಸಗಣಿ ಹಾಕುವುದಿಲ್ಲ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಮಾತ್ರವಲ್ಲ, ಮನುಷ್ಯರ ಆರೋಗ್ಯವೂ ಹದಗೆಡುತ್ತಿದೆ. ದೀಪಕ್ಕೆ ಭಾಷೆಯಿಲ್ಲ, ಆದರೆ ಭಾವವಿದೆ. ಕನ್ನಡಕ್ಕಾಗಿ ಹಿಗ್ಗದೆ, ಕುಗ್ಗದೆ, ನಿಂದನೆ-ಸಂತೋಷ ಎಲ್ಲವನ್ನೂ ಸಹಿಸಿಕೊಂಡು ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಇವರನ್ನು ಅಭಿನಂದಿಸುತ್ತೇನೆ” ಎಂದರು.


ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಆಶಯ ನುಡಿಗಳನ್ನಾಡಿ, “ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ಮಾತನಾಡಿಸುವ ಸೌಜನ್ಯವನ್ನು ಮರೆಯುತ್ತಿರುವ ಕಾಲದಲ್ಲಿ ಪರಸ್ಪರ ಗೌರವದಿಂದ ನಡೆದುಕೊಳ್ಳುವ ಸಂಸ್ಕಾರವನ್ನು ಬಿತ್ತುವ ಅಗತ್ಯವಿದೆ. ನಮ್ಮ ನೆಲದಲ್ಲಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಸ್ವಾತಂತ್ರ್ಯ ಮತ್ತು ಸಂವಿಧಾನವು ಆಯಾ ಪ್ರಾಂತ್ಯಗಳ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೀಡಿದ್ದರೂ, ಸರ್ಕಾರಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿವೆ. ಜನರು ಇಂಗ್ಲೀಷ್ ಭ್ರಮೆಯಲ್ಲಿ ಸಿಲುಕಿದ್ದಾರೆ. ನಿರ್ಲಕ್ಷ್ಯ ಮತ್ತು ಭ್ರಮೆಯ ನಡುವೆ ಮಕ್ಕಳು ಕಂಗಾಲಾಗಿದ್ದಾರೆ. ಇದು ಶಿಕ್ಷಕ ಸಮೂಹಕ್ಕೂ ನುಂಗಲಾರದ ತುತ್ತಾಗಿದೆ” ಎಂದು ಅವರು ವಾಸ್ತವವನ್ನು ತೆರೆದಿಟ್ಟರು.
ಕಲಾವಿದರಾದ ಡಾ. ಕವಿತಾ ಸುದೀಂದ್ರ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕ.ಸಾ.ಪ. ಹೋಬಳಿ ಅಧ್ಯಕ್ಷ ಸಂ.ಬ. ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಕೆ. ಶ್ರೀನಿವಾಸ, ರಮೇಶ್ ಈ., ನಾಗರಾಜ್ ಜಿ.ವಿ., ಹನುಮಂತಪ್ಪ ಸಿ., ರವಿ ಎನ್., ಬಸವರಾಜ್ ಯು., ಚನ್ನೇಶಪ್ಪ ಹೆಚ್.ಬಿ., ರುದ್ರೇನ್ ಹಾಗೂ ಕ.ಸಾ.ಪ. ಭದ್ರಾವತಿ ತಾಲೂಕು ಅಧ್ಯಕ್ಷ ಹೆಚ್.ತಿಮ್ಮಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿ, ಕ.ಸಾ.ಪ. ಹೋಬಳಿ ಕಾರ್ಯದರ್ಶಿ ಚಂದ್ರು ಸ್ವಾಗತಿಸಿ, ಕ.ಜಾ.ಪ. ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ, ಕ.ಸಾ.ಸಾಂ. ವೇದಿಕೆ ಪ್ರಧಾನ ಕಾರ್ಯದರ್ಶಿ ಭೈರಾಪುರ ಶಿವಪ್ಪ ಮೇಷ್ಟು ಹಾಗೂ ಸೋಮಿನಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

