ಕಟೀಲು : ಖ್ಯಾತ ಭಾಗವತ ದಿ. ವಿದ್ವಾನ್ ದಾಮೋದರ ಮಂಡೆಚ್ಚ ಹೆಸರಿನಲ್ಲಿ ನೀಡುವ ‘ಮಂಡೆಚ್ಚ ಪ್ರಶಸ್ತಿ’ಯನ್ನು ಈ ವರುಷ ಖ್ಯಾತ ಯಕ್ಷಗಾನ ಕಲಾವಿದ ನಿಡ್ಲೆ ಗೋವಿಂದ ಭಟ್ಟರಿಗೆ ನೀಡಲಾಗುವುದು.
ಧರ್ಮಸ್ಥಳ ಲಲಿತಕಲಾ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡ ಗೋವಿಂದ ಭಟ್ಟರು, ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದುರವರ ಶಿಷ್ಯನಾಗಿ ಸಿದ್ದಗೊಂಡರು. ಧರ್ಮಸ್ಥಳ, ಕೊಲ್ಲೂರು, ವೇಣೂರು, ಮುಂಬೈ ಗೀತಾಂಬಿಂಕಾ ಯಕ್ಷಗಾನ ಮಂಡಳಿ, ಸುಬ್ರಹ್ಮಣ್ಯ, ಬಪ್ಪನಾಡು, ಪುತ್ತೂರು, ಕರ್ನಾಟಕ ಮೇಳಗಳಲ್ಲಿ 43 ವರ್ಷಗಳ ನಿರಂತರ ತಿರುಗಾಟ, ಧರ್ಮಸ್ಥಳ ಮೇಳ ಒಂದರಲ್ಲೇ 30 ವರ್ಷಗಳ ಸೇವೆ. ಪೌರಾಣಿಕ ಪ್ರಸಂಗದ ಎಲ್ಲಾ ವೇಷಗಳನ್ನೂ ಮಾಡಿದ ಅನುಭವಿ. ನಾಟಕೀಯ ರಾವಣ, ಹಿರಣ್ಯಾಕ್ಷ, ಇಂದ್ರಜಿತು, ಮೈರಾವಣ, ಕೌರವ, ಅರ್ಜುನ, ಕರ್ಣ, ಜಮದಗ್ನಿ, ದಕ್ಷ, ಕಂಸ, ಕೌಂಡ್ಲಿಕ, ಮಹಿಷಾಸುರ, ಧರ್ಮಸ್ಥಳ ಕ್ಷೇತ್ರ ಮಹಾತ್ರೆಯ ಬ್ಯಾರಿ ಪಾತ್ರ ಅವರಿಗೇ ಬಹಳ ಪ್ರಸಿದ್ದಿಯನ್ನು ಒದಗಿಸಿವೆ. ಉತ್ತಮ ಕೃಷಿಕರಾಗಿರುವ ನಿಡ್ಲೆ ಗೋವಿಂದ ಭಟ್ಟರು ಕಳೆದ 4 ದಶಕಗಳಿಂದ ಮಳೆಗಾಲದಲ್ಲಿ ತಮ್ಮದೇ ನಿಡ್ಲೆ ಮೇಳದ ಮೂಲಕ ಯಕ್ಷಗಾನವನ್ನು ವಿವಿಧ ರಾಜ್ಯಗಳಿಗೆ ವಿಸ್ತರಿಸಿದ್ದಾರೆ. ಮಾತ್ರವಲ್ಲ, ಅನೇಕ ಕಲಾವಿದರಿಗೂ ಅನ್ನದಾತರಾಗಿದ್ದು, ಪ್ರಸ್ತುತ ಅತಿಥಿ ಕಲಾವಿದನಾಗಿ ಆಟಗಳಲ್ಲಿ ಭಾಗವಹಿಸುತ್ತಾರೆ. ಅನೇಕ ಪ್ರಶಸ್ತಿ, ಸಂಮಾನಗಳಿಂದ ಪುರಸ್ಕೃತರಾಗಿರುವ ಗೋವಿಂದ ಭಟ್ಟರಿಗೆ ‘ಮಂಡೆಚ್ಚ ಪ್ರಶಸ್ತಿ’ಯನ್ನು ದಿನಾಂಕ 31 ಅಕ್ಟೋಬರ್ 2026ರಂದು ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣ ಕಾರ್ಯಕ್ರಮದಲ್ಲಿ ನೀಡಲಾಗುವುದು.
