ಮುಡಿಪು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಹೋಬಳಿ ಘಟಕ ಮತ್ತು ವಿಶ್ವಮಂಗಳ ಪ್ರೌಢಶಾಲೆ ಮಂಗಳ ಗಂಗೋತ್ರಿ, ಕೊಣಾಜೆ ಇವರ ಸಹಯೋಗದೊಂದಿಗೆ ವಿಶ್ವಮಂಗಳ ಶಾಲಾ ಸಭಾಂಗಣದಲ್ಲಿ ದಿನಾಂಕ 18-08-2023ರಂದು ‘ಕನ್ನಡ ಸಂಭ್ರಮ – ಕುವೆಂಪು ಕಂಪು’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ, ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆಯವರು ಕುವೆಂಪು ಸಾಹಿತ್ಯದ ಕುರಿತು ಉಪನ್ಯಾಸ ನೀಡಿ “ಕುವೆಂಪು, ಕಾರಂತ, ಕಯ್ಯಾರರಂತಹ ಮಹತ್ವದ ಲೇಖಕರು ಮಕ್ಕಳ ಸಾಹಿತ್ಯದಲ್ಲಿ ವಿಪುಲ ಕೃಷಿ ಮಾಡಿದ್ದು, ಅವುಗಳಲ್ಲಿ ಮೌಲ್ಯ ಪ್ರತಿಪಾದನೆ ಮುಖ್ಯ ಉದ್ದೇಶವಾಗಿದೆ. ಸರಳವಾದ ನಿರೂಪಣೆಯಲ್ಲಿ ಮಕ್ಕಳ ಮನಸ್ಸಿಗೆ ಮುಟ್ಟುವ ರೀತಿಯ ಸಾಹಿತ್ಯ ರಚನೆಗಳಾಗಿವೆ. ಇದಕ್ಕೆ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿ ಉತ್ತಮ ಉದಾಹರಣೆ. ಸಾಹಿತ್ಯದ ಉದ್ದೇಶ ಮನುಷ್ಯ ಮನಸ್ಸಿನ ಸಂಕುಚಿತ ಆಲೋಚನೆಗಳನ್ನು ದೂರಮಾಡಿ ಪ್ರತಿಯೊಬ್ಬನನ್ನೂ ವಿಶ್ವ ಮಾನವನನ್ನಾಗಿಸುವುದಾಗಿದೆ. ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಗಳು ಈ ವಿಶ್ವಮಾನವತೆಯ ಪ್ರತಿಪಾದನೆ ಮಾಡುತ್ತದೆ” ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರೂ ವಿಶ್ವಮಂಗಳ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳೂ ಆಗಿರುವ ಪ್ರೊ. ವಿನಯ ರಜತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. “ದ್ವೇಷ, ಅಸೂಯೆ, ಹಿಂಸೆಯನ್ನು ಮೀರಿದ ಮನಸ್ಸನ್ನು ಕಟ್ಟುವಲ್ಲಿ ಸಾಹಿತ್ಯದ ಅಭಿರುಚಿ ಮುಖ್ಯ ಪಾತ್ರ ವಹಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.
ಉಳ್ಳಾಲ ಹೋಬಳಿ ಘಟಕದ ಅಧ್ಯಕ್ಷರಾಗಿರುವ ವಿಜಯಲಕ್ಷ್ಮಿ ಪ್ರಸಾದ್ ರೈ ಕಲ್ಲಿಮಾರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ “ಭಾಷೆ ಬೆಳೆಯುವುದೇ ಸಾಹಿತ್ಯದ ಮೂಲಕ. ಇಂಗ್ಲಿಷನ್ನೂ ಸೇರಿದಂತೆ ಎಷ್ಟು ಭಾಷೆಗಳನ್ನಾದರೂ ಕಲಿಯಿರಿ. ಆದರೆ ನಮ್ಮ ಕನ್ನಡ ಭಾಷೆಯನ್ನು ಮರೆಯದಿರಿ” ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಿಯಾ ಎನ್ ಶುಭಾಶಂಸನೆಗೈದರು.
ಕಾರ್ಯಕ್ರಮದ ಅಂಗವಾಗಿ ನಡೆದ ಕೃತಿ ವಿಮರ್ಶೆ, ಭಾವಗೀತೆ ಮತ್ತು ವಿಶ್ವಮಾನವತೆ ಕುರಿತ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕಿ ಸೌಮ್ಯ ವಿಜೇತರ ವಿವರ ವಾಚಿಸಿದರು. ವಿದ್ಯಾರ್ಥಿನಿ ಆನ್ಯ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೃತಿ ವಿಮರ್ಶೆ ಮಾಡಿದರು. ಲಹರಿ ಕುವೆಂಪು ಕವಿತೆಗಳ ಗಾಯನ ಮಾಡಿದರು.
ವಿಶ್ವಮಂಗಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಡಿ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾವತಿ, ಪೂರ್ವ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಹಂಸಗೀತ, ಉಳ್ಳಾಲ ಘಟಕದ ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಘಟಕದ ಸದಸ್ಯರಾದ ಪ್ರಸಾದ್ ರೈ ಕಲ್ಲಿಮಾರು, ರಾಧಾಕೃಷ್ಣ ರಾವ್ ಟಿ.ಡಿ, ಕೃಷ್ಣಕುಮಾರ್ ಕಮ್ಮಜೆ, ಮಂಜುಳಾ ಜಿ. ರಾವ್ ಇರಾ ಉಪಸ್ಥಿತರಿದ್ದರು. ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ದೇರಳ ಕಟ್ಟೆ ಸ್ವಾಗತಿಸಿ, ತ್ಯಾಗಂ ಹರೇಕಳ ಕಾರ್ಯಕ್ರಮವನ್ನು ನಿರೂಪಿಸಿ, ಶಾಲಾ ಸಹ ಶಿಕ್ಷಕಿ ವನಿತಾ ವಂದಿಸಿದರು.