ಲಕ್ಕೋ : ಖ್ಯಾತ ಉರ್ದು ಕವಿ ಮುನಾವ್ವರ್ ರಾಣಾ ಅವರು ಹೃದಯಾಘಾತದಿಂದ ದಿನಾಂಕ 14-01-2024ರ ಭಾನುವಾರದ ರಾತ್ರಿ ಉತ್ತರ ಪ್ರದೇಶದ ಲಕ್ಕೋದಲ್ಲಿ ನಿಧನ ಹೊಂದಿದರು. ಅವರಿಗೆ (71) ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ಮತ್ತು ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಣಾರನ್ನು ಲಕ್ಕೋದ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆ ಯುಸಿರೆಳೆದಿದ್ದಾರೆ. ಶ್ರೀಯುತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ 26-11-1952ರಂದು ಜನಸಿದ ರಾಣಾ ಅವರು, ಉರ್ದು ಘಜಲ್ ಗಳಿಂದ ಖ್ಯಾತರಾಗಿದ್ದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಮೀರ್ ಖುಸ್ರೋ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.