ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಇವುಗಳ ಸಹಯೋಗದೊಂದಿಗೆ 50ನೇ ಉದಯರಾಗ ಕಾರ್ಯಕ್ರಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳಾಧಾರಿತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯ 26ನೇ ಮಂಜುನಾದ ಕಾರ್ಯಕ್ರಮವು ದಿನಾಂಕ 18-02-2024 ರಂದು ಸುರತ್ಕಲ್ ಫ್ಲೈ ಓವರ್ ಕೆಳಗಡೆ ನಡೆಯಿತು.
ಕಾರ್ಯಕ್ರಮಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವೇದಮೂರ್ತಿ ಐ. ರಮಾನಂದ ಭಟ್ ಮಾತನಾಡಿ “ಉದಯರಾಗ ಸಂಗೀತ ಕಾರ್ಯಕ್ರಮದ ಪರಿಕಲ್ಪನೆ ಅನನ್ಯವಾದುದು. ಶಾಸ್ತ್ರೀಯ ಸಂಗೀತ ದೈವಿಕ ಕಲೆಯಾಗಿದ್ದು ಸಂಗೀತ ಸೇವೆಯಿಂದ ದೈವಾನುಗ್ರಹ ಪ್ರಾಪ್ತವಾಗುತ್ತದೆ.” ಎಂದರು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸರಿತಾ ಶಶಿಧರ್ ಶುಭ ಹಾರೈಸಿದರು.
ಮಣಿಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಶಾಸ್ತ್ರೀಯ ಸಂಗೀತದ ಆಸಕ್ತಿ ವರ್ಧಿಸಿದ್ದು ಉದಯೋನ್ಮುಖ ಕಲಾವಿದರಿಗೆ ಹೆಚ್ಚಿನ ಅವಕಾಶ ಲಭ್ಯವಾಗತ್ತಿದೆ. ಪಿ. ನಿತ್ಯಾನಂದ ರಾವ್ ಇವರ ಶಾಸ್ತ್ರೀಯ ಸಂಗೀತ ಸೇವೆ ವಿಶಿಷ್ಟವಾದದ್ದು.” ಎಂದರು. ಇದೇ ಸಂದರ್ಭದಲ್ಲಿ ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್, ಕೃಷ್ಣ ಕುಮಾರಿ ಮತ್ತು ವಿಭ ರಾವ್ ಅವರನ್ನು ಸನ್ಮಾನಿಸಲಾಯಿತು. ನಾಗರಿಕ ಸಲಹಾಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಅಭಿನಂದನಾ ನುಡಿಗಳನ್ನಾಡಿದರು.
ಯುವಕಲಾಮಣಿ ಶ್ರೇಯಾ ಕೊಳತ್ತಾಯ ಸುರತ್ಕಲ್, ಶೋಭಿತಾ ಭಟ್ ಕಿನ್ನಿಗೋಳಿ, ಆಶ್ವೀಜ ಉಡುಪ ಕಿನ್ನಿಗೋಳಿ ಇವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು. ವಯಲಿನ್ನಲ್ಲಿ ತನ್ಮಯೀ ಉಪ್ಪಂಗಳ ಪುತ್ತೂರು, ಮೃದಂಗದಲ್ಲಿ ಅಚಿಂತ್ಯ ಕೃಷ್ಣ ಪುತ್ತೂರು ಹಾಗೂ ಖಂಜೀರದಲ್ಲಿ ಕಾರ್ತಿಕ್ ಭಟ್ ಸಹಕರಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪಿ. ಪುರುಷೋತ್ತಮ ರಾವ್, ರಘುರಾಮ ರಾವ್ ಬೈಕಂಪಾಡಿ, ಉಮೇಶ್ ಇಡ್ಯಾ, ವಾಸುದೇವ ಶ್ಯಾನುಭಾಗ್, ಲೋಕಯ್ಯ ಶೆಟ್ಟಿ, ಜ್ಯೋತಿ ಪಿ. ಶೆಟ್ಟಿ, ಯೋಗೀಶ್ ಕುಳಾಯಿ, ರಮೇಶ್ ರಾವ್, ಕೃಷ್ಣ ಶೆಟ್ಟಿ, ಸಾವಿತ್ರಿ ರಮೇಶ್ ಭಟ್ ಉಪಸ್ಥಿತರಿದ್ದರು.