ಮುಂಬಯಿ : ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ಸಾಹಿತಿ ದಿ. ಎಮ್.ಬಿ. ಕುಕ್ಯಾನ್ ಪ್ರಾಯೋಜಿತ ‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ – 2023’ ಹಾಗೂ ದಿ. ಅಚ್ಚು ಸಿ. ಸುವರ್ಣರ ಸ್ಮರಣೆಯಲ್ಲಿ ಸಮಾಜ ಸೇವಾ ಧುರೀಣ ದಿ. ಜಯ ಸಿ. ಸುವರ್ಣ ಪ್ರಾಯೋಜಿತ ‘ಯಕ್ಷಗಾನ ಕಲಾ ಪ್ರಶಸ್ತಿ – 2023’ ಪ್ರದಾನ ಸಮಾರಂಭವು ದಿನಾಂಕ 29-03-2024ರ ಶುಕ್ರವಾರದಂದು ಜರಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಲೇಖಕಿ, ಸಾಹಿತಿ, ಮಿತ್ರಾ ವೆಂಕಟ್ರಾಜ್ ಮಾತನಾಡಿ “ಬಿಲ್ಲವರ ಎಸೋಸಿಯೇಶನ್ ಅನೇಕ ಉತ್ತಮ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ನಾಗರಿಕತೆಯ ಮೂಲ ಲಕ್ಷಣವೇ ಕಲೆ, ಸಾಹಿತ್ಯ ಮೊದಲಾದ ಸೃಜನಶೀಲ ಅಭಿವ್ಯಕ್ತಿಗಳು. ಇವು ಒಂದು ಸಮುದಾಯದ ಔನ್ನತ್ಯವನ್ನು ತೋರಿಸುತ್ತದೆ. ಬಿಲ್ಲವರ ಎಸೋಸಿಯೇಶನ್ ಈ ನಿಟ್ಟಿನಲ್ಲಿ ಮಾಡುತ್ತಿರುವ ಇಂತಹ ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯ. ಎಸೋಸಿಯೇಶನ್‌ನ ಕಲಾ ಪ್ರೇಮ ತುಂಬಾ ಮೆಚ್ಚುವಂತದ್ದು. ನಾರಾಯಣ ಗುರುಗಳ ವಿದ್ಯಾ ಕ್ರಾಂತಿ ಎಂಬುದು ಮಾನವ ಕುಲಕ್ಕೆ ಆದರ್ಶ. ಅಂತಹ ಮಹಾತ್ಮರ ಹೆಸರಲ್ಲಿನ ಪ್ರಶಸ್ತಿಯು ಸಾಹಿತ್ಯ ಮತ್ತು ಯಕ್ಷಗಾನ ಲೋಕದ ಇಬ್ಬರು ಅರ್ಹ ಸಾಧಕರಿಗೆ ಸಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಇಂದಿನ ಸನ್ಮಾನಿತೆ ಶ್ಯಾಮಲಾ ಮಾಧವ್ ಸೃಜನಶೀಲ ಕಥೆಗಳನ್ನು ಬರೆದಿದ್ದಾರೆ. ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ಇನ್ನೋರ್ವ ಸನ್ಮಾನಿತ ಕೊಲ್ಯಾರು ರಾಜು ಶೆಟ್ಟಿ, ಯಕ್ಷಗಾನದ ಛಂದಸ್ಸಿನಲ್ಲಿ ನಲವತ್ತಕ್ಕೂ ಮಿಕ್ಕಿ ಪ್ರಸಂಗಗಳನ್ನು ಇಪ್ಪತ್ತಕ್ಕೂ ಮಿಕ್ಕಿ ಕೃತಿಗಳನ್ನು ಕಟ್ಟಿ ಕೊಟ್ಟಿದ್ದಾರೆ” ಎಂದು ಪ್ರಶಸ್ತಿಯನ್ನು ಸ್ವೀಕರಿಸಿದ ಶ್ಯಾಮಲಾ ಮಾಧವ್ ಹಾಗೂ ಕೊಲ್ಯಾರು ರಾಜು ಶೆಟ್ಟಿಯವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಾಹಿತಿ, ಅನುವಾದಕಿ, ಸಂಘಟಕಿ ಶ್ಯಾಮಲಾ ಮಾಧವ್ ಅವರಿಗೆ ‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಮತ್ತು ಯಕ್ಷಗಾನ ಕಲಾವಿದ, ಅರ್ಥಧಾರಿ, ವಿಮರ್ಶಕ, ಸಾಹಿತಿ, ಕೊಲ್ಯಾರು ರಾಜು ಶೆಟ್ಟಿಯವರಿಗೆ ‘ಯಕ್ಷಗಾನ ಕಲಾ ಪ್ರಶಸ್ತಿ’ಯನ್ನು ರೂ.25,000/- ನಗದು, ಶಾಲು, ಪೇಟ, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ, ಫಲಪುಪ್ರದೊಂದಿಗೆ ಎಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್, ಅತಿಥಿ ಗಣ್ಯರು ಹಾಗೂ ಪದಾಧಿಕಾರಿಗಳು ಪ್ರದಾನಿಸಿದರು. ಕೊಲ್ಯಾರು ರಾಜು ಶೆಟ್ಟಿಯವರ ಪರಿವಾರ ಶೋಭಾ ರಾಜು ಶೆಟ್ಟಿ, ಪ್ರಿಯಾ ಶೆಟ್ಟಿ, ಚಿರಾಯು ಶೆಟ್ಟಿ ಉಪಸ್ಥಿತರಿದ್ದರು. ಪ್ರಶಸ್ತಿ ಪತ್ರವನ್ನು ಅಕ್ಷಯ ಮಾಸ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಧರ್ಮೇಶ್ ಸಾಲ್ಯಾನ್ ಹಾಗೂ ಸದಸ್ಯ ಎಸ್.ಕೆ. ಸುಂದರ್ ವಾಚಿಸಿದರು.
‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ಯನ್ನು ಸ್ವೀಕರಿಸಿದ ಶ್ಯಾಮಲಾ ಮಾಧವ್ ಮಾತನಾಡಿ, “ಈ ಬಹುಮೂಲ್ಯ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿಯಿಂದ ನನ್ನ ಹೃದಯ ತುಂಬಿ ಬಂದಿದೆ. ನನ್ನ ಆದರ್ಶವೇ ಆದ ಜಾತಿ-ವಿಜಾತಿ, ಮೇಲು-ಕೀಳು ಎಂಬ ಭಾವನೆ ಇರದ ಮಾನವೀಯತೆಯೇ ಪರಮ ಧರ್ಮವೆಂದು ಬಾಳಿ ಬೆಳಗಿದ ಆ ಮಹಾತ್ಮನ ಹೆಸರಲ್ಲಿ ನೀಡಿದ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಸಂತೋಷವಾಗಿದೆ” ಎನ್ನುತ್ತಾ ಎಸೋಸಿಯೇಶನ್‌ಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಯಕ್ಷಗಾನ ಕಲಾ ಪ್ರಶಸ್ತಿಯನ್ನು ಸ್ವೀಕರಿಸಿ ಕೊಲ್ಯಾರು ರಾಜು ಶೆಟ್ಟಿ ಮಾತನಾಡಿ, “ಬಿಲ್ಲವರ ಎಸೋಸಿಯೇಶನ್‌ಗೂ ನನಗೂ ಎಷ್ಟೋ ಕಾಲದ ಅವಿನಾಭವ ಸಂಬಂಧ. ಈ ಮಹಾನಗರದಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಕಲಾವಿದನಾಗಿ ಗುರು ನಾರಾಯಣ ಯಕ್ಷಗಾನ ಮಂಡಳಿಯಲ್ಲಿ ಭಾಗವಹಿಸಿದ್ದೇನೆ. ಆದರೆ ಅಂದು ನಾನು ಕಂಡ ಯಕ್ಷಗಾನಕ್ಕೂ ಇಂದಿನ ಯಕ್ಷಗಾನಕ್ಕೂ ತುಂಬಾ ವ್ಯತ್ಯಾಸವಿದೆ. ಕಾಲಮಿತಿಯಲ್ಲಿ ಯಕ್ಷಗಾನ ಪ್ರದರ್ಶನ ಆಗುತ್ತಿರುವುದರಿಂದ ಮಧ್ಯರಾತ್ರಿಯಲ್ಲಿ ಕಲಾವಿದರು ಕಷ್ಟ-ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮೊಬೈಲ್ ಹಾವಳಿಯಿಂದಾಗಿ ಮುಂದಿನ ಪೀಳಿಗೆ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಸ್ವಲ್ಪ ಹಿಂದೆ ಬೀಳುವ ಸಾಧ್ಯತೆ ಇದೆ. ನಾನು 32 ಯಕ್ಷಗಾನದ ಗ್ರಂಥಗಳನ್ನು ರಚಿಸಿದ್ದೇನೆ. ಆ ಪೈಕಿ 20 ಯಕ್ಷಗಾನ ಪ್ರಸಂಗಗಳಿಗೆ ಅರ್ಥವನ್ನು ಬರೆದು ನಾನೇ ನನ್ನ ಮಿತ್ರರ ಸಹಕಾರದಿಂದ ಪ್ರಕಟಿಸಿದ್ದೇನೆ. ಪ್ರಕಟಿಸಿದ ಕೃತಿಗಳೆಲ್ಲ ಮುಗಿದಿದೆ ಎನ್ನಲು ಸಂತೋಷವಾಗುತ್ತಿದೆ. ಪ್ರಸ್ತುತ ವಾಚನಾಲಯದ ಕೊರತೆಯಿಂದ ಓದುಗರ ಸಂಖ್ಯೆಯು ಕಡಿಮೆಯಾಗಿದೆ. ಸಂಘ-ಸಂಸ್ಥೆಗಳು ವಾಚನಾಲಯದ ಬಗ್ಗೆ ಗಮನಹರಿಸಬೇಕು. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಕಾಳಜಿ ಅಗತ್ಯ” ಎಂದು ತಿಳಿಸಿದರು.
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ “ಬಿಲ್ಲವರ ಎಸೋಸಿಯೇಶನ್‌ಗೆ 92 ವರ್ಷಗಳ ಇತಿಹಾಸವಿದೆ. ಹಿರಿಯರ ಮಾರ್ಗದರ್ಶನದಂತೆ ಎಸೋಸಿಯೇಶನ್ ಆರ್ಥಿಕ ಅಲ್ಲದೆ ಸಾಹಿತ್ಯಿಕ, ಕಲಾ ಸೇವೆಯನ್ನು ಮಾಡುತ್ತಾ ಬರುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಾಹಿತಿಗಳಿಗೆ ಹಾಗೂ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಹಾಗೂ ಯಕ್ಷಗಾನ ಕಲಾ ಪ್ರಶಸ್ತಿಯನ್ನು ಯೋಗ್ಯರಿಗೆ ಎಸೋಸಿಯೇಶನ್ ನೀಡುತ್ತಿದೆ. ಈ ಪ್ರಶಸ್ತಿಯು ಗುರುಗಳ ತತ್ವದಂತೆ ಜಾತಿ-ಧರ್ಮದ ಭೇದವಿಲ್ಲದೆ ಅರ್ಹರನ್ನು ಆಯ್ಕೆ ಮಾಡಿ ಅವರಿಗೆ ಪ್ರದಾನಿಸಲಾಗುತ್ತಿದೆ. ಈವರೆಗೆ 24 ಮಂದಿ ಸಾಹಿತಿಗಳಿಗೆ ‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಹಾಗೂ 18 ಮಂದಿ ಕಲಾವಿದರಿಗೆ ‘ಯಕ್ಷಕಲಾ ಪ್ರಶಸ್ತಿ’ಯನ್ನು ಪ್ರದಾನಿಸಲಾಗಿದೆ” ಎಂದರು.
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಶ್ರೀನಿವಾಸ್ ಆರ್. ಕರ್ಕೇರ ಮಾತನಾಡಿ, “ಮುಂಬಯಿ ಮಹಾನಗರದಲ್ಲಿ ಗುರು ನಾರಾಯಣ ಯಕ್ಷಗಾನ ಮಂಡಳಿ ಕಳೆದ 78 ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಾ ಬಂದಿದೆ. ಮುಂಬಯಿ ಯಕ್ಷ ರಂಗದಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿ ಹೊಸ ಅಧ್ಯಾಯವನ್ನು ಬರೆದ ಏಕಮೇವ ಮಂಡಳಿ ಗುರು ನಾರಾಯಣ ಯಕ್ಷಗಾನ ಮಂಡಳಿಯಾಗಿದೆ. ನಾರಾಯಣ ಗುರು ಯಕ್ಷಗಾನ ಮಂಡಳಿಯ ಸಂಸ್ಥಾಪಕ ದಿ. ಎರ್ಮಾಳು ಬೂದ ಸುವರ್ಣ ಈ ಮಂಡಳಿಯನ್ನು ಉಳಿಸಿ ಬೆಳೆಸಲು ಪೆರ್ಮುದೆ ರುಕ್ಮಯ ಅಮೀನ್, ವೈ.ಜಿ. ಬಂಗೇರ, ಸೀತಾರಾಮ್ ಅಮೀನ್ ಮುಂತಾದ ಅನೇಕ ಮಂದಿ ಶ್ರಮಿಸಿರುವರು. ಸುಂಕದಕಟ್ಟೆ ನಿರಂಜನ ಸ್ವಾಮೀಜಿ ಅವರು ಹಲವಾರು ವರ್ಷ ಮಂಡಳಿಯನ್ನು ಮುನ್ನಡೆಸಿದರು. ಯಕ್ಷಗಾನ ಮಂಡಳಿ ಕಷ್ಟದ ಸಮಯವನ್ನು ಎದುರಿಸಿದಾಗ ನಿರಂಜನ ಸ್ವಾಮೀಜಿ ಮಂಡಳಿಯ ಜವಾಬ್ದಾರಿಯನ್ನು ಜಯ ಸುವರ್ಣರಿಗೆ ವಹಿಸಿದ ಬಳಿಕ ಯಕ್ಷಗಾನ ಕಲೆಯ ಮೇಲೆ ತುಂಬಾ ಆಸಕ್ತಿಯನ್ನು ಹೊಂದಿದ್ದ ಜಯ ಸುವರ್ಣ, ನನ್ನ ತಾಯಿ ಅಚ್ಚು ಚಂದು ಸುವರ್ಣರ ಸವಿ ನೆನಪಿಗಾಗಿ ಯಕ್ಷಗಾನ ಕಲಾ ಪ್ರಶಸ್ತಿಯನ್ನು ನೀಡಲಾರಂಭಿಸಿದರು” ಎಂದರು.
ಸಾಂತಾಕ್ರೂಜ್ ಕಲೀನಾ ಶ್ರೀ ಭಗವತೀ ಮಂದಿರದ ಪ್ರದಾನ ಅರ್ಚಕ ಕುಮಾರ ಸ್ವಾಮಿ ಮಾತನಾಡಿ, “ಎಸೋಸಿಯೇಶನ್ ಸಮಾಜಪರ ಸೇವಾ ಕಾರ್ಯಗಳು ಶ್ಲಾಘನೀಯವಾದುದು. ನಮ್ಮ ಧರ್ಮ-ಸಂಸ್ಕೃತಿಯನ್ನು ನಾವು ಬೆಳೆಸಬೇಕು. ನಮ್ಮ ದೇವಸ್ಥಾನದಲ್ಲೂ ವಿವಿಧ ರೀತಿಯಲ್ಲಿ ನಾವು ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದೇವೆ. ನಮ್ಮ ಮಂದಿರಕ್ಕೂ ನೀವೆಲ್ಲಾ ಬಂದು ಶ್ರೀ ಭಗವತಿಯ ಕೃಪೆಗೆ ಪಾತ್ರರಾಗಬೇಕು” ಎಂದರು.
ವೇದಿಕೆಯಲ್ಲಿ ಬಿಲ್ಲವರ ಎಸೋಸಿಯೇಶನ್ ಮುಂಬಯಿಯ ಉಪಾಧ್ಯಕ್ಷರುಗಳಾದ ಶಂಕರ್ ಡಿ. ಪೂಜಾರಿ, ಧರ್ಮಪಾಲ್ ಜಿ. ಅಂಚನ್, ಕೆ. ಸುರೇಶ್ ಕುಮಾರ್, ಗೌರವ ಕೋಶಾಧಿಕಾರಿ ರಾಜೇಶ್ ಜೆ, ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಜೋಗೇಶ್ವರಿ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಬಾಬು ಪೂಜಾರಿ ಹೆರ್ಗ ಉಪಸ್ಥಿತರಿದ್ದರು. ಬಿಲ್ಲವರ ಎಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್ ಹಾಗೂ ಅತಿಥಿ ಗಣ್ಯರು ಎಸೋಸಿಯೇಶನ್ ಪದಾಧಿಕಾರಿಗಳು ದೀಪ ಪ್ರಜ್ವಲಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ್ ಪ್ರಾರ್ಥನೆಗೈದರು.
ಗೌರವ ಪ್ರದಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಮಾಸ ಪತ್ರಿಕೆಯ ಸಹಾಯಕ ಸಂಪಾದಕ ಹರೀಶ್ ಪೂಜಾರಿ ಕೊಕ್ಕರ್ಣೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಕ್ಷಯ ಮಾಸ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯೆ ಕುಸುಮಾ ಅಮೀನ್ ಅತಿಥಿಗಳನ್ನು ಪರಿಚಯಿಸಿದರು. ಅಕ್ಷಯ ಮಾಸ ಪತ್ರಿಕೆಯ ಮುಖ್ಯ ಸಂಪಾದಕ ಈಶ್ವರ್ ಅಲೆವೂರು ಈವರೆಗೆ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಹಾಗೂ ಯಕ್ಷಗಾನ ಕಲಾ ಪ್ರಶಸ್ತಿಯನ್ನು ಪಡೆದವರ ಬಗ್ಗೆ ಮಾಹಿತಿಯನ್ನು ನೀಡಿದರು. ಸಾಂಸ್ಕೃತಿಕ ಉಪ ಸಮಿತಿಯ ಗೌರವ ಕಾರ್ಯದರ್ಶಿ ನವೀನ್ ಪಡು ಇನ್ನ ವಂದಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ‘ಕೃಷ್ಣಾರ್ಜುನ’ ಯಕ್ಷಗಾನ ಪ್ರದರ್ಶನಗೊಂಡಿತು.