ಬೆಂಗಳೂರು : ‘ಕಣ’ ಇದರ ವತಿಯಿಂದ ಸಿದ್ಧಾರ್ಥ ಮಾಧ್ಯಮಿಕಾ ಇವರಿಂದ ಮೂರು ತಿಂಗಳುಗಳ ಕಾಲ ನಡೆಯಲಿರುವ ‘ನಟನಾ ಕಾರ್ಯಾಗಾರ’ವು ದಿನಾಂಕ 29-06-2024ರಂದು ಬೆಂಗಳೂರಿನ ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಪ್ರಾರಂಭವಾಗಲಿದೆ. ಈ ಕಾರ್ಯಾಗಾರದಲ್ಲಿ ಪ್ರತಿ ವಾರಾಂತ್ಯ ಶನಿವಾರ ಮತ್ತು ಭಾನುವಾರ 10-00ರಿಂದ 1-00 ಗಂಟೆಯವರೆಗೆ ಮೂರು ತಾಸುಗಳು ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9663704395 ಸಂಪರ್ಕಿಸಿರಿ.
* ಕತೆ ಅಂದರೆ ಏನು ?
* ಮೊಟ್ಟ ಮೊದಲು ಕತೆ ಹೇಳಿದವರು ಯಾರು ?
* ಮೊದಲ ಕತೆ ಹೇಳಿದವರು ಅದನ್ನು ಯಾಕಾಗಿ ಹೇಳಿದ್ದರು ?
* ಕಾಲ ಕ್ರಮೇಣ ಕತೆ ಹೇಳುವ ಪ್ರಕ್ರಿಯೆ ತನ್ನೊಳಗೆ ಏನೇನನ್ನೆಲ್ಲಾ ಹುದುಗಿಸುಕೊಳ್ಳುತ್ತಾ ಬರುತ್ತಿದೆ ?
* ಇವತ್ತಿನ ಕಾಲಮಾನದಲ್ಲಿ ನಾವು ಕತೆಯನ್ನು ಯಾಕೆ ಹೇಳಬೇಕು ?
* ಕಲಾವಿದರು ಅಂದರೆ ಯಾರು ?
* ಕಲೆ ಎಂದರೆ ಏನು ?
ಹೀಗೆ ಹತ್ತು ಹಲವು ಕುತೂಹಲ ಭರಿತ ಪ್ರಶ್ನೆಗಳೊಂದಿಗೆ ಶುರವಾಗುವ ಮೂರು ತಿಂಗಳುಗಳ ಕಾಲದ ಈ ವಾರಾಂತ್ಯ ಶಿಬಿರದಲ್ಲಿ, ನಮ್ಮ ಬದುಕಿನ ಭಾಗವಾಗಿರುವ ನಟನೆ ಮತ್ತು ಕತೆ ಹೇಳುವ ಕಲೆಗಳನ್ನು, ಇಲ್ಲಿಯವರೆಗೂ ಕಂಡರಿಯದ ರೀತಿಯಲ್ಲಿ ಕಾಣುವ ಪ್ರಯತ್ನ ಮಾಡುತ್ತ, ಒಂದು ನಾಟಕವನ್ನು ಕಟ್ಟುವೆವು. ತಯಾರಾದ ನಾಟಕವನ್ನು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶಿಸಲಾಗುವುದು. ಈ ವಾರಾಂತ್ಯ ಶಿಬಿರ ಮೂರು ತಿಂಗಳಲ್ಲಿ ನಿಜಕ್ಕೂ ಮುಗಿದುಬಿಡುವುದಿಲ್ಲ..! ಬದಲಿಗೆ, ಈ ಶಿಬಿರದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಲ್ಲೂ ಬದುಕಿನಾದ್ಯಂತ ಬೆಳೆಯುತ್ತ ಜೊತೆಗೇ ಸಾಗಲಿರುವುದು…
ಸಿದ್ಧಾರ್ಥ ಮಾಧ್ಯಮಿಕಾ ಇವರು ನಟನಾ ತರಬೇತಿದಾರರಾಗಿ, ನಟರಾಗಿ, ನಿರ್ದೇಶಕರಾಗಿ, ಬರಹಗಾರರಾಗಿ ರಂಗಭೂಮಿ ಮತ್ತು ಸಿನಿಮಾ ಮಾಧ್ಯಮದಲ್ಲಿ ಕಳೆದ ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಿರುವರು. ಕತೆ ಹೇಳುವುದನ್ನು ಗಂಭೀರ ಉದ್ಯೋಗವೆಂದು ಪರಿಗಣಿಸಿ, ಕತೆ ಹೇಳಲು ಬೇಕಿರುವ ಸಂವೇದನೆಯನ್ನು ಎಲ್ಲಕಿಂತ ಮುಖ್ಯ ಎಂದು ತಿಳಿದ ಇವರು, “ನಮಮ ಇತಿಹಾಸ”, “ಈ ನಾವು” ಎಂಬ ಎರಡು ನಾಟಕಗಳನ್ನು ಬರೆದು, ನಿರ್ದೇಶಿಸಿರುವರು. ಎಸ್. ದಿವಾಕರ್ ಇವರ “ಇತಿಹಾಸ” ಕತೆ ಮತ್ತು ಮಂಜು ನಾಯಕ್ ಚಳ್ಳೂರ ಇವರ “ಫೂ” ಕಥಾ ಸಂಕಲನದ ನಾಲ್ಕು ಕಥೆಗಳನ್ನು ರಂಗಕ್ಕೆ ಅಳವಡಿಸಿ ನಿರ್ದೇಶಿಸಿರುವರು. ಕೃಷ್ಣಾ – ರುಕ್ಕೂ, ಶುದ್ಧಿ, ಭಿನ್ನ, ಕವಲುದಾರಿ, ಶುಭಮಂಗಳ ಹೀಗೆ ಇಪ್ಪತ್ತಕ್ಕೂ ಹೆಚ್ಚಿನ ಸಿಮಾಗಳಲ್ಲಿ ನಟಿಸಿರುವರು. ಪಿ. ಶೇಷಾದ್ರಿ ಅವರ ನಿರ್ದೇಶನದ ಸಿನಿಮಾಗಳಾದ ‘ಭೇಟಿ’ ಮತ್ತು ‘ಮೂಕಜ್ಜಿಯ ಕನಸುಗಳು’ ಸಿನಿಮಾಗಳಿಗೆ ಮುಖ್ಯ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವುದರ ಜೊತೆಗೆ ಆ ಸಿನಿಮಾಗಳಲ್ಲಿ ನಟಿಸಿರುವರು.