ಮೂಡುಬಿದಿರೆ : ‘ಯಕ್ಷ ಸಂಗಮ’ ಇದರ 25ನೇ ವರ್ಷದ ಯಕ್ಷಗಾನ, ತಾಳಮದ್ದಳೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮವು 10 ಆಗಸ್ಟ್ 2024ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.
ಜೈನ ಮಠದ ಡಾ . ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಬೆಳವಣಿಗೆಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಮಹತ್ತರವಾಗಿದೆ.” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತೆಂಕು ಬಡಗು ತಿಟ್ಟಿನ ಚಾರ್ಲಿ ಚಾಪ್ಲಿನ್ ಎಂದೇ ಖ್ಯಾತರಾದ ಪ್ರಸಿದ್ಧ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಅಭಿನಂದನಾ ಭಾಷಣ ಮಾಡಿದ ಯಕ್ಷ ಸಂಗಮದ ಶಾಂತರಾಮ ಕುಡ್ವ “ತಮ್ಮ ನಿಜ ಜೀವನದಲ್ಲಿ ನೋವಿನ ಬೇಗುದಿಯಲ್ಲಿ ಸಿಲುಕಿದರೂ ಯಕ್ಷಗಾನ ಲೋಕದಲ್ಲಿ ಅದನ್ನೆಲ್ಲಾ ಮರೆತು ಪ್ರೇಕ್ಷಕರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸಿಬಿಡುವ ಸೀತಾರಾಮ ಕುಮಾರರದ್ದು ಮೇರು ವ್ಯಕ್ತಿತ್ವ. ಯಕ್ಷಗಾನವನ್ನೇ ಉಸಿರಾನ್ನಾಗಿಸಿರುವ ಸೀತಾರಾಮರು ಗಾಡ್ ಫಾದರ್ ಇಲ್ಲದೇ ಬೆಳೆದವರು. ಆದರೂ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರನ್ನು ಮಾನಸಿಕ ಗುರುಗಳನ್ನಾಗಿಸಿ ತಮ್ಮ ಸ್ವಂತ ಪರಿಶ್ರಮದಿಂದ ಸ್ತ್ರೀ ವೇಷ ಪುಂಡು ವೇಷ, ಹಾಸ್ಯ ಪಾತ್ರಗಳನ್ನು ಮಾಡಿ ಚಾರ್ಲಿ ಚಾಪ್ಲಿನ್ ಖ್ಯಾತಿ ಗಳಿಸಿದವರು. ವೇಷ ಮಾಡಿ ಜನರನ್ನು ರಂಜಿಸಲು ಅಪಾಯಗಳನ್ನು ಕೂಡ ಎದುರು ಹಾಕಿಕೊಂಡಿರುವವರು ಸೀತಾರಾಮರು.” ಎಂದರು.
ಕಾರ್ಯಕ್ರಮದಲ್ಲಿ ಸುದರ್ಶನ್ ಎಂ, ಸ್ವಾಗತಿಸಿ, ಮಹಾವೀರ ಪಾಂಡಿ ನಿರೂಪಿಸಿದರು.