ಸಾಣೇಹಳ್ಳಿ : ಸಾಣೇಹಳ್ಳಿ ಎಸ್.ಎಸ್. ರಂಗಮಂದಿರದಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು 2024ರ ಅಭ್ಯಾಸ ಮಾಲಿಕೆಯ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರಸಂಗವನ್ನು ದಿನಾಂಕ 05 ಸೆಪ್ಟೆಂಬರ್ 2024ರಂದು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ವೀಕ್ಷಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸ್ವಾಮಿಗಳು “ನಮ್ಮ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ ಪ್ರೇಕ್ಷಕರ ಮನಸ್ಸನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಮನ್ಯು ಕಾಳಗ ಯಕ್ಷಗಾನವನ್ನು ಗಮನಿಸುವಾಗ ಇವತ್ತಿನ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸನ್ನಿವೇಶಗಳನ್ನು ಕಲ್ಪನೆ ಮಾಡಿಕೊಳ್ತಾ ಇದ್ದೆವು. ಹೇಗೆ ದುಷ್ಟಶಕ್ತಿಗಳು ಶಿಷ್ಟಶಕ್ತಿಗಳನ್ನು ದಮನ ಮಾಡುತ್ತಿದ್ದವು ಎನ್ನುವುದನ್ನು ನೋಡಿದೆವು. ಕೊನೆಗೆ ಸೋಗಲಾಡಿತನವನ್ನು ತೋರಿಸುವುದನ್ನು ನೋಡಿ ನಮಗನಿಸಿದ್ದು ಈ ಜಗತ್ತು ಇರುವುದು ಹೀಗೇ. ಕೌರವರು ಐದು ಜನ ಪಾಂಡವರಿಂದ ಸೋಲನ್ನು ಅನುಭವಿಸುತ್ತಾ ಕೊನೆಗೆ ತಂತ್ರ ಮಾಡಿದ್ದು, ಚಕ್ರವ್ಯೂಹವನ್ನು ರಚಿಸುವಂಥದ್ದು. ಚಕ್ರವ್ಯೂಹವನ್ನು ಬೇಧಿಸುವಂಥ ಶಕ್ತಿ ಇರುವುದು ಅರ್ಜುನನಿಗೆ, ಶ್ರೀಕೃಷ್ಣನಿಗೆ. ಆದರೆ ಅಭಿಮನ್ಯುನಿಗೆ ಚಕ್ರವ್ಯೂಹದೊಳಗೆ ಹೋಗುವುದು ಗೊತ್ತು ಆದರೆ ಹೊರಗೆ ಬರೋದು ಗೊತ್ತಿಲ್ಲ. ಆದರೆ ಆತನ ಶೌರ್ಯ, ಸಾಹಸ, ಧೈರ್ಯ ಮೆಚ್ಚುವಂಥದ್ದು. ಕೊನೆಗೆ ಕೌರವರೆಲ್ಲರೂ ಆತನಿಗೆ ಗೌರವವನ್ನು ಸಲ್ಲಿಸುವರು. ಬದುಕಿದಾಗ ಕೊಲ್ಲುಬೇಕು ಎನ್ನುವಂಥದ್ದು. ಕೊಂದಾಗ ಅಯ್ಯೋ ಕೊಂದುಬಿಟ್ಟೇವಲ್ಲಾ ಎಂದು ಪರಿತಾಪ ಪಡುವುದು. ಕೊಲ್ಲುವುದಕ್ಕಿಂತ ಮುಂಚೆ ಕೊಲ್ಲುವ ಕ್ರಿಯೆಗೆ ಇತಿಶ್ರೀ ಹಾಡಿದರೆ ಜಗತ್ತು ಎಷ್ಟು ಸುಂದರವಾಗಿರುವುದು ಎನ್ನುವ ಅರಿವು ಮೂಡುವುದು. ಆದರೆ ಹೇಳುವುದು ಸುಲಭ. ಆಚರಣೆಗೆ ತರುವುದು ಕಷ್ಟ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಮಾತನಾಡಿದರು. ರಂಗಶಾಲೆಯ ಪ್ರಾಚಾರ್ಯರು, ವಿದ್ಯಾರ್ಥಿಗಳು, ಶಿವಸಂಚಾರದ ಕಲಾವಿದರು, ಉಭಯ ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಗ್ರಾಮಸ್ಥರು ಯಕ್ಷಗಾನ ಪ್ರಸಂಗವನ್ನು ವೀಕ್ಷಿಸಿದರು.